Advertisement

ಪೈಶಾಚಿಕ ಕೃತ್ಯ ಖಂಡನೀಯ

02:18 AM Apr 22, 2019 | Sriram |

2009ರಲ್ಲಿ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ಉಗ್ರ ಸಂಘಟನೆ ಎಲ್‌ಟಿಟಿಇಯನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಿದ ಬಳಿಕ ಅಲ್ಲಿನ ರಕ್ತಚರಿತ್ರೆಯ ಅಧ್ಯಾಯ ಮುಗಿದುಹೋಯಿತು ಎಂಬ ಭಾವನೆ ಮೂಡಿತ್ತು. ಆದರೆ ಈಸ್ಟರ್‌ ದಿನದಂದು ದ್ವೀಪ ರಾಷ್ಟ್ರದ ರಾಜಧಾನಿ ಕೊಲಂಬೋದ ಎಂಟು ಸ್ಥಳಗಳಲ್ಲಿ ನಡೆದ ಭೀಕರ ಸ್ಫೋಟಗಳಲ್ಲಿ ಕರ್ನಾಟಕ, ಕೇರಳ, 35 ಮಂದಿ ವಿದೇಶಿಯರು ಸೇರಿದಂತೆ 200ಕ್ಕೂ ಅಧಿಕ ಮಂದಿ ಅಸುನೀಗಿ, 500 ಅಧಿಕ ಮಂದಿ ಗಾಯಗೊಂಡ ಘಟನೆ ನಡೆದಿದೆ. ಶಾಂತಿ-ನೆಮ್ಮದಿಗೆ ಭಂಗ ತಂದ ಈ ಘಟನೆ ಖಂಡನಾರ್ಹ. ಘಟನೆಗೆ ಸಂಬಂಧಿಸಿದಂತೆ ಕ್ಷಿಪ್ರವಾಗಿ ಶೋಧ ನಡೆಸಿರುವ ಭದ್ರತಾ ಸಂಸ್ಥೆಗಳ‌ು ಏಳು ಮಂದಿಯನ್ನು ಬಂಧಿಸಿವೆ. ಅವರು, ನಿಜವಾಗಿ ಕುಕೃತ್ಯಕ್ಕೆ ಕಾರಣರಾದವರೋ ಅಥವಾ ಬೇರೆಯವರೋ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಾಗಿದೆ. ಕಳವಳಕಾರಿ ವಿಚಾರವೇನೆಂದರೆ ಹತ್ತು ವರ್ಷಗಳ ಕಾಲ ಹಿಂಸೆಯ ವಾತಾವರಣ ಕಾಣದೇ ಇದ್ದ ರಾಷ್ಟ್ರದಲ್ಲಿ ಇಂಥ ಘಟನೆ ಏಕೆ ನಡೆಯಿತು ಎನ್ನುವುದು ಪ್ರಶ್ನೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ವಿಶ್ವದ ಪ್ರಮುಖ ನಾಯಕರು ಅತ್ಯುಗ್ರ ಶಬ್ದಗಳಿಂದ ಖಂಡಿಸಿದ್ದಾರೆ.

Advertisement

ಹತ್ತು ದಿನಗಳ ಹಿಂದಷ್ಟೇ ಕೊಲಂಬೋದ ಪೊಲೀಸ್‌ ಮುಖ್ಯಸ್ಥರು ಚರ್ಚ್‌ಗಳು, ಪ್ರಮುಖ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಬಹುದು ಎಂದು ಗುಪ್ತಚರ ಸಂಸ್ಥೆಗಳನ್ನು ಉಲ್ಲೇಖೀಸಿ ಮುನ್ನೆಚ್ಚರಿಕೆ ನೀಡಿ ದ್ದರು. ಭಾರತದ ರಾಯ ಭಾರ ಕಚೇರಿ, ಚರ್ಚ್‌ ಗಳನ್ನು ಕೇಂದ್ರೀಕರಿಸಿ ದಾಳಿ ನಡೆಯ ಬಹುದು ಎಂದೂ ಅವರು ಸೂಚಿಸಿದ್ದರು. ಅದನ್ನು ದ್ವೀಪ ರಾಷ್ಟ್ರದ ಸರ್ಕಾರದ ಗಂಭೀರವಾಗಿ ಪರಿಗಣಿಸಲಿಲ್ಲವೇ ಎಂದು ಸಂದೇಹ ಮೂಡುತ್ತದೆ. ಇಂಥ ವಿಚಾರ ಇದೇ ಮೊದಲಲ್ಲ. ಅಮೆರಿಕದಲ್ಲಿ 2001ರಲ್ಲಿ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಅಲ್‌-ಖೈದಾ ಉಗ್ರ ಸಂಘಟನೆಯ ದಾಳಿ, 2008ರಲ್ಲಿ ಮುಂಬೈನಲ್ಲಿ ಪಾಕಿಸ್ಥಾನ ಪ್ರೇರಿತ ಉಗ್ರರ ಪೈಶಾಚಿಕ ಕೃತ್ಯದ ಬಗ್ಗೆ ಕಾಲ ಕಾಲಕ್ಕೆ ಗುಪ್ತಚರ ಸಂಸ್ಥೆಗಳು ಮುನ್ನೆಚ್ಚರಿಕೆ ನೀಡಿದ್ದವು. ಗುಪ್ತಚರ ಸಂಸ್ಥೆಗಳು ಮುನ್ನೆಚ್ಚರಿಕೆ ನೀಡಿದ್ದರೂ, ಆ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ ಎನ್ನುವ ಆರೋಪ ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಹೀಗಾಗಿ, ಶ್ರೀಲಂಕಾ ಸರ್ಕಾರ ಮುನ್ನೆಚ್ಚರಿಕೆಯನ್ನು ಮುಂದಿಟ್ಟುಕೊಂಡು ಕೊಂಚ ಎಚ್ಚತ್ತುಕೊಂಡಿದ್ದರೆ, ಈ ಘಟನೆಯನ್ನು ಸಂಪೂರ್ಣವಾಗಿ ತಪ್ಪಿಸಬಹುದಿತ್ತು ಅಥವಾ ಅನಾಹುತದ ಪ್ರಭಾವವನ್ನು ಕಡಿಮೆ ಮಾಡಲು ಪ್ರಯತ್ನ ಮಾಡಬಹುದಿತ್ತು.

ಎಲ್‌ಟಿಟಿಇ ಉಗ್ರ ಸಂಘಟನೆಯನ್ನು ನಿರ್ನಾಮ ಮಾಡಿದ ಬಳಿಕ ಭೀಕರ ಘಟನೆಗಳು ನಡೆಯದೇ ಇದ್ದರೂ, 2018ರಲ್ಲಿ ಶ್ರೀಲಂಕಾದ ಕ್ಯಾಂಡಿ ಮತ್ತು ಅಂಪಾರ ಜಿಲ್ಲೆಗಳಲ್ಲಿ ಸಿಂಹಳ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಇದ್ದ ಭಿನ್ನಮತ ತಾರಕಕ್ಕೆ ಏರಿ, ಭಾರಿ ಪ್ರಮಾಣದಲ್ಲಿ ಗಲಭೆಗಳು ಉಂಟಾಗಿ ಆಸ್ತಿ ನಷ್ಟ ಉಂಟಾಗಿದ್ದವು. ಜತೆಗೆ ಸಾವು-ನೋವು ಕೂಡಾ ಉಂಟಾಗಿತ್ತು. ಈ ಪ್ರಕರಣ ಮತ್ತು ಭಾನುವಾರದ ಸರಣಿ ಸ್ಫೋಟಗಳಿಗೆ ಸಂಬಂಧ ಇದೆಯೋ ಇಲ್ಲವೋ ತಿಳಿಯದು. ಜತೆಗೆ ಯಾವುದೇ ಸಂಘಟನೆ, ವ್ಯಕ್ತಿ ಇಂಥ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂದು ಇದುವರೆಗೆ ಹೇಳಿಕೊಂಡಿಲ್ಲ. ದ್ವೀಪರಾಷ್ಟ್ರದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಈಗಾಗಲೇ ರಾಷ್ಟ್ರದಲ್ಲಿ ಶಾಂತಿ-ನೆಮ್ಮದಿ ಕಾಪಾಡುವಲ್ಲಿ ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಹೇರಲಾಗಿದೆ.

2012ರಲ್ಲಿ ದ್ವೀಪರಾಷ್ಟ್ರದಲ್ಲಿ ನಡೆದ ಜನಗಣತಿ ಪ್ರಕಾರ ಒಟ್ಟು ಜನಸಂಖ್ಯೆಯ ಶೇ.7ರಷ್ಟು ಮಂದಿ ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಸಮುದಾಯದ ಪ್ರಮಾಣ ಕ್ರಮವಾಗಿ ಶೇ.12.6, ಶೇ.9.7 ಇದೆ. ಪ್ರಧಾನವಾಗಿ ಇರುವವರೆಂದರೆ ಬೌದ್ಧ ಧರ್ಮ ಅನುಸರಿಸುವ ಶೇ.70.2.ಶ್ರೀಲಂಕಾದಲ್ಲಿ ನಡೆದ ಈ ಕುಕೃತ್ಯಗಳು ಭಾರತಕ್ಕೂ ಕಳವಳಕಾರಿಯೇ. ಏಕೆಂದರೆ ಹಿಂದೂಮಹಾಸಾಗರ, ಬಂಗಾಳಕೊಲ್ಲಿ ವ್ಯಾಪ್ತಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಚೀನಾ ವ್ಯಾಪಾರ, ಬಂಡವಾಳ ಹೂಡಿಕೆಯ ಮೂಲಕ ಶಕ್ತಿ ವರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೂ ಈ ಬಗ್ಗೆ ಗಂಭೀರವಾಗಿಯೇ ಪರಿಗಣಿಸಬೇಕಾಗಿದೆ. ಇದರ ಜತೆಗೆ ಗುಪ್ತಚರ ಸಂಸ್ಥೆಗಳು ಕಾಲಕಾಲಕ್ಕೆ ನೀಡುವ ಮುನ್ನೆಚ್ಚರಿಕೆಗಳನ್ನು ಲಘುವಾಗಿ ಪರಿಗಣಿಸದೆ ಆಂತರಿಕ ಭದ್ರತೆ ಮತ್ತಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಮುಂದೆ ಆಗುವ ಅನಾಹುತಕ್ಕಿಂತ ಅದನ್ನು ತಪ್ಪಿಸುವುದೇ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next