Advertisement

ಶ್ರೀಲಂಕಾದ ಕತೆ: ಚಿನ್ನದಂಥ ಹುಡುಗಿ

06:58 PM Dec 14, 2019 | mahesh |

ಇಬ್ಬರು ಅಕ್ಕ, ತಂಗಿ ಇದ್ದರು. ಅಕ್ಕ ಬಣ್ಣದಲ್ಲಿ ಕಪ್ಪು. ಚಂದವಿಲ್ಲದ ಅವಳಿಗೆ ಬೇರೆಯವರು ಸುಖವಾಗಿರುವುದು ಕಂಡರೆ ಹೊಟ್ಟೆಕಿಚ್ಚು. ಯಾರಿಗೂ ಏನನ್ನೂ ಕೊಡುವವಳಲ್ಲ. ಕಿರಿಯವಳ ಬಣ್ಣ ಹಾಲಿನಂತೆ ಬೆಳ್ಳಗೆ. ರೂಪವತಿಯಾದ ಅವಳು ಒಳ್ಳೆಯ ಗುಣದವಳು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದಳು. ಅವರಿಗೆ ತಾಯಿತಂದೆ ಇರಲಿಲ್ಲ. ಆದಕಾರಣ ಅಕ್ಕ, “”ಹಳ್ಳಿಯಲ್ಲೇ ಕುಳಿತರೆ ನಮಗೆ ಜೀವನ ನಡೆಸುವುದು ಕಷ್ಟ. ಬೇರೆ ಯಾವುದಾದರೂ ಊರಿಗೆ ಹೋಗಿ ಒಳ್ಳೆಯ ಗಂಡನನ್ನು ಹುಡುಕಿ ಮದುವೆ ಮಾಡಿಕೊಂಡು ಸುಖವಾಗಿರೋಣ” ಎಂದಳು. ತಂಗಿ ಅವಳೊಂದಿಗೆ ಹೊರಟಳು. ಮುಂದೆ ಬಂದಾಗ ಒಬ್ಬಳು ಮುದುಕಿ ಅವರ ಬಳಿ, “”ಎಲ್ಲಿಗೆ ಹೋಗುತ್ತಿದ್ದೀರಾ?” ಕೇಳಿದಳು.

Advertisement

“”ಒಳ್ಳೆಯ ಗಂಡು ಹುಡುಕಿ ಮದುವೆ ಮಾಡಿಕೊಳ್ಳುವುದಕ್ಕೆ” ಎಂದಳು ಅಕ್ಕ. “”ನನಗೂ ಒಬ್ಬಳು ಮೊಮ್ಮಗಳಿದ್ದಾಳೆ. ಅವಳಿಗೆ ಮದುವೆ ನಿಶ್ಚಯವಾಗಿದೆ. ವಧುವಿಗೆ ಸ್ವಲ್ಪವಾದರೂ ಬಂಗಾರ ಕೊಡಬೇಕಲ್ಲ! ನನ್ನ ಬಳಿ ಏನೂ ಇಲ್ಲ. ನೀವು ಚಿನ್ನವಿದ್ದರೆ ಕೊಡುತ್ತೀರಾ? ಇದರಿಂದ ನಿಮಗೂ ಬಂಗಾರದಂತಹ ಗಂಡ ಸಿಗುತ್ತಾನೆ” ಎಂದು ಕೇಳಿದಳು ಮುದುಕಿ. ಅಕ್ಕ ತಿರಸ್ಕಾರದಿಂದ ಅವಳತ್ತ ನೋಡಿ, “”ನನ್ನಲ್ಲಿ ಕಿವಿಯೋಲೆ ಬಿಟ್ಟರೆ ಬೇರೆ ಏನೂ ಚಿನ್ನವಿಲ್ಲ. ಅದನ್ನು ನಿನಗೆ ಕೊಟ್ಟರೆ ಯಾವ ಗಂಡು ನನ್ನನ್ನು ವರಿಸುತ್ತಾನೆ? ಬೇಕಿದ್ದರೆ ಒಂದು ಕಬ್ಬಿಣದ ಮೊಳೆ ಕೊಡುತ್ತೇನೆ, ಇದನ್ನೇ ಚಿನ್ನ ಅಂದುಕೋ” ಎಂದು ಹೇಳಿ ಮೊಳೆಯನ್ನು ಅವಳತ್ತ ಎಸೆದಳು. ಆದರೆ ತಂಗಿ ಮರುಕದಿಂದ, “”ನನ್ನ ಬಳಿ ಚಿನ್ನ ಅಂತ ಇರುವುದು ಒಂದು ಮೂಗುಬೊಟ್ಟು ಮಾತ್ರ. ಅದನ್ನು ನಿನಗೆ ಕೊಡುತ್ತೇನೆ” ಎಂದು ಹೇಳಿ ಕೊಟ್ಟುಬಿಟ್ಟಳು. “”ನಿಮ್ಮ ಗುಣದಂತೆಯೇ ಜೀವನದಲ್ಲಿ ಸುಖವೂ ಸಿಗಲಿ” ಎಂದು ಹೇಳಿ ಮುದುಕಿ ಹೊರಟುಹೋದಳು.

ಅವರಿಬ್ಬರೂ ಮುಂದೆ ಬರುವಾಗ ಇಬ್ಬರು ಅಣ್ಣ ತಮ್ಮ ಹೊಲ ಉಳುತ್ತಿದ್ದರು. ಅವರು ಅಕ್ಕತಂಗಿಯನ್ನು ಮಾತನಾಡಿಸಿ ಎಲ್ಲಿಗೆ ಹೋಗುತ್ತಿದ್ದೀರಿ ಎಂದು ವಿಚಾರಿಸಿದರು. ಮದುವೆಯಾಗಲು ಗಂಡು ಹುಡುಕಿಕೊಂಡು ಹೋಗುತ್ತಿದ್ದಾರೆಂದು ತಿಳಿದಾಗ, “”ಇಷ್ಟವಿದ್ದರೆ ನಮ್ಮಿಬ್ಬರನ್ನು ಒಬ್ಬೊಬ್ಬರು ಮದುವೆಯಾಗಬಹುದು” ಎಂದು ಹೇಳಿದರು. “”ಗಟ್ಟಿಮುಟ್ಟಾಗಿರುವ ಕಪ್ಪಗಿನ ಮೈಯವನು ನನಗೆ ಗಂಡನಾಗಲಿ” ಎಂದು ಅಕ್ಕ ಹಿರಿಯವನನ್ನು ಆರಿಸಿದಳು. ಕಿರಿಯವನು ಬೆಳ್ಳಗಿದ್ದ. ತಂಗಿ ಅವನ ಕೈಹಿಡಿಯಲು ಒಪ್ಪಿಕೊಂಡಳು. ಅಕ್ಕ, ತಂಗಿ ಅವರೊಂದಿಗೆ ಅವರ ಮನೆಗೆ ಬಂದರು.

ಹಿರಿಯವನ ಮನೆ ಕಪ್ಪಗಿತ್ತು. ಅದರಲ್ಲಿ ಕಬ್ಬಿಣದ ವಸ್ತುಗಳು ಮಾತ್ರ ಇದ್ದವು. ಆದರೆ ಕಿರಿಯವನ ಮನೆಯಲ್ಲಿ ಇದ್ದ ಉಪಕರಣಗಳು ಎಲ್ಲವೂ ಬಂಗಾರದಿಂದ ತಯಾರಾಗಿದ್ದವು. ಇದನ್ನು ಕಂಡು ತಂಗಿಯು ತನ್ನ ಕೈಹಿಡಿಯುವವನೊಂದಿಗೆ, “”ಇದೇಕೆ ನೀವಿರುವ ಮನೆ ಚಿನ್ನವಾಗಿದೆ? ನಿಮ್ಮ ಅಣ್ಣನ ಮನೆ ಯಾಕೆ ಕಬ್ಬಿಣವಾಗಿದೆ?” ಎಂದು ಕೇಳಿದಳು. “”ನಮಗೆ ಹುಟ್ಟುವಾಗಲೇ ದೇವರು ಕೊಟ್ಟಿರುವ ಶಕ್ತಿ ಇದು. ನಾನು ಯಾವುದೇ ವಸ್ತುವನ್ನು ಮುಟ್ಟಿ, ಚಿನ್ನವಾಗಬೇಕೆಂದು ಬಯಸಿದರೆ ಅದು ಚಿನ್ನವಾಗುತ್ತದೆ. ಅಣ್ಣ ಬಯಸಿದರೆ ಆ ವಸ್ತು ಕಬ್ಬಿಣವಾಗುತ್ತದೆ” ಎಂದು ಅವನು ಹೇಳಿದ.

ಇದನ್ನು ತಿಳಿದು ಅಕ್ಕ ಮತ್ಸರದಿಂದ ಕುದಿದುಬಿಟ್ಟಳು. ತಾನು ಅವಸರದಿಂದ ಆರಿಸಿಕೊಂಡ ಗಂಡು ರೂಪವಂತನಲ್ಲ, ಅವನಿಗೆ ಚಿನ್ನ ಮಾಡುವ ಶಕ್ತಿಯೂ ಇಲ್ಲ. ಆದರೆ ತಂಗಿಗೆ ತಾನಾಗಿ ಅದೃಷ್ಟ ಖುಲಾಯಿಸಿದೆ. ಇದನ್ನು ಅವಳಿಗೆ ದಕ್ಕಲು ಬಿಡಬಾರದೆಂದು ಯೋಚಿಸಿದಳು. ತಂಗಿಯನ್ನು ಬಳಿಗೆ ಕರೆದು, “”ಬಾರೇ, ಮದುವೆಗೆ ಮೊದಲು ನದಿಗೆ ಹೋಗಿ ಚೆನ್ನಾಗಿ ಸ್ನಾನ ಮಾಡಿಕೊಂಡು ಬರೋಣ” ಎಂದು ಕರೆದಳು. ನದಿಗೆ ಬಂದ ತಂಗಿಯನ್ನು ನೀರಿಗಿಳಿಸಿ ಕೈಯಿಂದ ಬಲವಾಗಿ ಹಿಡಿದು ನಿಲ್ಲಿಸಿ ಇಡೀ ಮೈ ಸವೆಯುವ ಹಾಗೆ ಒರಟು ಕಲ್ಲಿನಿಂದ ತಿಕ್ಕತೊಡಗಿದಳು. “”ಅಕ್ಕ, ಬಿಡು ಬಿಡು” ಎಂದು ಎಷ್ಟು ಗೋಗರೆದರೂ ಬಿಡದೆ ತಿಕ್ಕಿ ತಿಕ್ಕಿ ಒಂದು ಮುದ್ದೆಯ ಹಾಗೆ ಮಾಡಿ ನೀರಿಗೆಸೆದಳು. ತಾನೊಬ್ಬಳೇ ಮನೆಗೆ ಬಂದು ನೀರಿನಲ್ಲಿ ತಂಗಿಯನ್ನು ಮೊಸಳೆಯೊಂದು ಎಳೆದುಕೊಂಡು ಹೋಗಿರುವುದಾಗಿ ದುಃಖ ನಟಿಸಿದಳು.

Advertisement

ಅಣ್ಣ ಅಕ್ಕನನ್ನು ಮದುವೆ ಮಾಡಿಕೊಂಡ. ಆದರೆ ತನ್ನ ಹೆಂಡತಿಯಾಗಬೇಕಾದವಳು ಸತ್ತುಹೋದ ದುಃಖ ದಲ್ಲಿ ತಮ್ಮನಿಗೆ ಊಟ ಸೇರಲಿಲ್ಲ. ನಿದ್ರೆ ಬೀಳಲಿಲ್ಲ. ಮನೆಯ ಹೊರಗೆ ದುಃಖೀಸುತ್ತ ಕುಳಿತುಕೊಂಡ. ಆಗ ತಂಗಿ ಮೂಗುಬೊಟ್ಟು ಕೊಟ್ಟಿದ್ದ ಮುದುಕಿ ಅವನಿರುವಲ್ಲಿಗೆ ಬಂದಳು. “”ದುಃಖೀಸಬೇಡ, ನಿನಗೆ ಒಳ್ಳೆಯದಾಗುತ್ತದೆ. ನದಿಯ ಬಳಿಗೆ ಹೋಗಿ ಅವಳ ಹೆಸರು ಹಿಡಿದು ಕರೆ. ಬಿಳಿಯ ವರ್ಣದ ಒಂದು ಆಮೆ ನಿನ್ನ ಬಳಿಗೆ ಬರುತ್ತದೆ. ಅದನ್ನು ಮನೆಗೆ ತಂದು ನಲುವತ್ತೆಂಟು ದಿವಸ ಜೋಪಾನ ಮಾಡು. ಅದು ನಿನ್ನ ಹೆಂಡತಿಯಾಗುತ್ತದೆ” ಎಂದು ಹೇಳಿದಳು.

ತಮ್ಮ ನದಿಗೆ ಹೋಗಿ ಕೂಗಿ ಕರೆದ. ಬಿಳಿಯ ಆಮೆ ಓಡುತ್ತ ಬಂದಿತು. ಅದನ್ನು ಮನೆಗೆ ತಂದು ಜೋಪಾನವಾಗಿ ಸಾಕತೊಡಗಿದ. ಒಂದು ದಿನ ಅಕ್ಕ ಅಲ್ಲಿಗೆ ಬಂದಳು. ತಮ್ಮನೊಂದಿಗೆ, “”ಮೊಸಳೆ ಹಿಡಿದು ಸತ್ತವಳನ್ನು ಎಷ್ಟು ದಿನ ಕಾದು ಕುಳಿತುಕೊಳ್ಳುತ್ತೀರಿ? ನೀವು ನನ್ನನ್ನೇ ಮದುವೆ ಮಾಡಿಕೊಳ್ಳಿ. ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳುತ್ತೇನೆ” ಎಂದು ಹೇಳಿದಳು. ಅದನ್ನು ಕೇಳಿ ಮನೆಯೊಳಗಿದ್ದ ಬಿಳಿಯ ಆಮೆ ಮಾತನಾಡಿತು. “”ಅವಸರ ಮಾಡಬೇಡವೇ. ನಾನು ಸತ್ತಿಲ್ಲ, ಇನ್ನು ಸ್ವಲ್ಪ ದಿನದಲ್ಲಿ ಮೊದಲಿನ ಹಾಗೆ ಬಂದು ಇವರ ಕೈಹಿಡಿಯುತ್ತೇನೆ” ಎಂದಿತು.

ಅಕ್ಕ ಮನೆಗೆ ಬಂದಳು. ಗಂಡನೊಂದಿಗೆ, “”ನನಗೆ ತಾಳಲಾಗದ ಹೊಟ್ಟೆನೋವು ಕಾಡುತ್ತಿದೆ. ನಾನು ಬದುಕಬೇಕೆಂಬ ಬಯಕೆ ನಿಮಗಿದ್ದರೆ ನಿಮ್ಮ ತಮ್ಮನ ಮನೆಯಲ್ಲಿರುವ ಬಿಳಿಯ ಆಮೆಯನ್ನು ಕೊಂದು ಅದರ ಮಾಂಸದಿಂದ ಸಾರು ಮಾಡಿ ತಂದುಕೊಡಿ” ಎಂದಳು. ತಮ್ಮ ನಿದ್ರಿಸಿರುವಾಗ ಅಣ್ಣ ಬಂದು ಬಿಳಿಯ ಆಮೆಯನ್ನು ಹಿಡಿದು ತಂದು ಹೆಂಡತಿಯ ಇಚ್ಛೆಯನ್ನು ನೆರವೇರಿಸಿದ.

ಬೆಳಗಾಯಿತು. ಆಮೆಯನ್ನು ಕಾಣದೆ ತಮ್ಮ ಮತ್ತೆ ಶೋಕಿಸತೊಡಗಿದ. ಮುದುಕಿ ಅವನ ಬಳಿಗೆ ಬಂದಳು. “”ನಿನ್ನವಳಾಗಬೇಕಾದವಳು ಯಾರದೋ ಹೊಟ್ಟೆ ಸೇರಿದ್ದಾಳೆ. ಚಿಂತಿಸಬೇಡ. ನಿನ್ನ ಅಣ್ಣನ ಮನೆಯ ಮುಂದೆ ಬಿಳಿಯ ಆಮೆಯ ಚಿಪ್ಪು ಬಿದ್ದಿದೆ. ಅದನ್ನು ತೆಗೆದುಕೊಂಡು ಹೋಗಿ ಪಕ್ಕದಲ್ಲಿರುವ ಮಾವಿನಮರದ ಬುಡದಲ್ಲಿ ಹೂಳು” ಎಂದು ಹೇಳಿದಳು. ತಮ್ಮ ಹಾಗೆಯೇ ಮಾಡಿದ. ಮರುದಿನ ನೋಡಿದಾಗ ಮರದಲ್ಲಿ ಒಂದು ಚೋದ್ಯ ಕಾಣಿಸಿತು. ಅದರ ಕೊಂಬೆಗಳ ತುಂಬ ಚಿನ್ನದ ಹಣ್ಣುಗಳು ಜೋತಾಡುತ್ತಿದ್ದವು. ಅಕ್ಕ ಕೊಯ್ಯಲು ಹೋದರೆ ಮರದ ಕೊಂಬೆ ಆಕಾಶಕ್ಕೇರುತ್ತಿತ್ತು. ತಮ್ಮ ಸನಿಹ ಬಂದರೆ ನೆಲದ ವರೆಗೂ ಬಾಗುತ್ತಿತ್ತು. ಇದನ್ನು ನೋಡಿ ಅಕ್ಕ ತನಗೂ ಎರಡು ಹಣ್ಣು ಕೊಡಲು ಅವನೊಂದಿಗೆ ಕೇಳಿದಳು. ಆಗ ಹಣ್ಣು ಮನುಷ್ಯರಂತೆ ಮಾತನಾಡುತ್ತ, “”ನಿನಗೆ ಕೊಡಲು ಬಿಡುವುದಿಲ್ಲ. ಆಮೆಯಾಗಿರುವಾಗ ನೀನು ನನ್ನನ್ನು ಕೊಂದರೇನಾಯಿತು, ಹಣ್ಣುಗಳ ಒಳಗೆ ನಾನಿದ್ದೇನೆ” ಎಂದು ಹೇಳಿತು.

ತನ್ನ ತಂಗಿ ಹಣ್ಣಿನೊಳಗೆ ಇದ್ದಾಳೆಂದು ತಿಳಿದಾಗ ಅಕ್ಕ ಹೊಟ್ಟೆಕಿಚ್ಚು ಸೈರಿಸಲಾಗದೆ ಗಂಡನನ್ನು ಕರೆದಳು. “”ಮತ್ತೆ ಹೊಟ್ಟೆನೋವು ಉಲ್ಬಣಿಸಿದೆ. ನಾನು ಬದುಕಬೇಕಿದ್ದರೆ ಆ ಮಾವಿನಮರದ ಬುಡಕ್ಕೆ ಬೆಂಕಿ ಹಚ್ಚಿ. ಬೆಳಗಾಗುವಾಗ ಅದರ ಬೂದಿ ಮಾತ್ರ ಉಳಿಯಬೇಕು” ಎಂದಳು. ಹೆಂಡತಿಗಾಗಿ ಅವನು ಈ ಕೆಲಸವನ್ನು ಮಾಡಿದ. ತಮ್ಮ ಬೆಳಗ್ಗೆ ಎದ್ದು ನೋಡಿದಾಗ ಮಾವಿನ ಮರ ಭಸ್ಮವಾಗಿತ್ತು. ಅವನಿಗೆ ತಾಳಲಾಗದ ದುಃಖವುಂಟಾಯಿತು. ಜೀವ ಕಳೆದುಕೊಳ್ಳುತ್ತೇನೆ ಎಂದು ನಿರ್ಧರಿಸಿ ಊರಿನಲ್ಲಿದ್ದ ದೊಡ್ಡ ಕೊಳದ ಬಳಿಗೆ ತೆರಳಿದ. ಆ ಕೊಳದಲ್ಲಿ ಹಲವಾರು ಬಣ್ಣದ ತಾವರೆ ಹೂಗಳು ಅರಳಿದ್ದವು.

ಆ ದೇಶದ ರಾಜನಿಗೆ ಒಬ್ಬಳೇ ಮಗಳಿದ್ದಳು. ಒಂದು ಸಲ ಅವಳು ಉದ್ಯಾನವನದಲ್ಲಿ ವಿಹರಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಕಾಣೆಯಾದಳು. ರಾಜನು ದುಃಖದಿಂದ ಮಗಳನ್ನು ಹುಡುಕಿಸಲು ತುಂಬ ಪ್ರಯತ್ನ ಮಾಡಿದ. ಆದರೆ ಅವನಿಗೆ ಯಶಸ್ಸು ಸಿಗಲಿಲ್ಲ. ಆಗ ದೈವಜ್ಞರ ಮೊರೆ ಹೊಕ್ಕ. ಅವರು, “”ನಿನ್ನ ಮಗಳ ಸೌಂದರ್ಯ ಕಂಡು ಮತ್ಸರ ಹೊಂದಿದ ಯಕ್ಷಿಣಿಯೊಬ್ಬಳು ಅವಳನ್ನು ನೀಲಿ ವರ್ಣದ ತಾವರೆ ಹೂವನ್ನಾಗಿ ಪರಿವರ್ತಿಸಿ ಇದೇ ಊರಿನ ಕೊಳದಲ್ಲಿರಿಸಿದ್ದಾಳೆ. ಯಾರು ಅವಳ ಗಂಡನಾಗುತ್ತಾನೋ ಅವನು ಕರೆದರೆ ಮಾತ್ರ ಆ ಹೂವು ತಾನಾಗಿ ಬಳಿಗೆ ಬರುತ್ತದೆ. ಅವನು ಮುಟ್ಟಿದ ತಕ್ಷಣ ಹೆಣ್ಣಾಗಿ ಬದಲಾಗುತ್ತದೆ. ಹೀಗಾಗಿ ಯಾವ ಯುವಕನನ್ನು ಕಂಡರೂ ಕೊಳದ ಬಳಿಗೆ ಕರೆದುಕೊಂಡು ಹೋಗಿ ಹೂವನ್ನು ಕರೆಯಲು ಹೇಳು” ಎಂದು ತಿಳಿಸಿದರು.

ತಮ್ಮನು ಕೊಳವನ್ನು ತಲುಪುವಾಗ ರಾಜನು ಎಲ್ಲ ಯುವಕರನ್ನೂ ಕೊಳದ ಬಳಿಗೆ ಕರೆತಂದು ಹೂವನ್ನು ಕರೆಯಲು ಹೇಳಿದ್ದ. ಆದರೆ ಯಾರು ಕರೆದರೂ ಹೂವು ಸನಿಹ ಬಂದಿರಲಿಲ್ಲ. ರಾಜನು ತಮ್ಮನೊಂದಿಗೂ ಇದನ್ನು ಹೇಳಿದಾಗ ತಮ್ಮ ಕರೆದ ಕೂಡಲೇ ನೀಲಿ ಮತ್ತು ಕೆಂಪುಬಣ್ಣದ ಎರಡು ತಾವರೆಗಳು ಓಡೋಡಿ ಬಂದವು. ಕೈಯಲ್ಲಿ ಅವನು ಮುಟ್ಟಿದಾಗ ನೀಲಿ ತಾವರೆ ರಾಜಕುಮಾರಿಯಾಯಿತು. ಕೆಂಪು ತಾವರೆ ಅವನು ಕೈಹಿಡಿಯಬೇಕಾಗಿದ್ದ ಹುಡುಗಿಯಾಯಿತು.

ರಾಜನು ತನ್ನ ಮಗಳನ್ನು ವಿವಾಹವಾಗಲು ಹೇಳಿದಾಗ ತಮ್ಮನು ಒಪ್ಪಲಿಲ್ಲ. ತಾನು ಪ್ರೀತಿಸಿದವಳನ್ನೇ ಮದುವೆಯಾಗುವುದಾಗಿ ಹೇಳಿದ. ಆದರೆ ಅವನ ಕೈಹಿಡಿಯಬೇಕಾಗಿದ್ದ ತಂಗಿಯು ರಾಜಕುಮಾರಿಯನ್ನೂ ಮದುವೆಯಾಗಿ ತಮ್ಮಿಬ್ಬರನ್ನೂ ಅನ್ಯೋನ್ಯವಾಗಿ ನೋಡಿಕೊಳ್ಳುವಂತೆ ಹೇಳಿದಳು. ತಮ್ಮನು ಅವರನ್ನು ವರಿಸಿ ಅರಮನೆಯಲ್ಲಿ ಸುಖವಾಗಿದ್ದ, ಮುದುಕಿಗೆ ಚಿನ್ನ ಕೊಟ್ಟ ತಂಗಿಗೆ ಅವಳಿಂದಾಗಿ ಚಿನ್ನದಂಥ ಗಂಡನೇ ಸಿಕ್ಕಿದ.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next