ಹಂಬಂತೋಟ: ಶ್ರೀಲಂಕಾ-ಅಫ್ಘಾನಿಸ್ತಾನ ನಡುವಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯ 38.2 ಓವರ್‌ಗಳಲ್ಲಿ ಮುಗಿದು ಹೋಗಿದೆ. ಇದನ್ನು ಆತಿಥೇಯ ಲಂಕಾ 9 ವಿಕೆಟ್‌ಗಳಿಂದ ಗೆದ್ದು 2-1ರಿಂದ ಸರಣಿ ವಶಪಡಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ತಾನ 22.2 ಓವರ್‌ಗಳಲ್ಲಿ ಕೇವಲ 116ಕ್ಕೆ ಕುಸಿಯಿತು. ಶ್ರೀಲಂಕಾ 16 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 120 ರನ್ ಬಾರಿಸಿತು. ಮೊದಲ ಪಂದ್ಯವನ್ನು ಸೋತಿದ್ದ ದಸುನ್ ಶಣಕ ಪಡೆ ಸತತ 2 ಜಯದೊಂದಿಗೆ ಸರಣಿ ಮೇಲೆ ಅಧಿಕಾರ ಚಲಾಯಿಸಿತು.
ದುಷ್ಮಂತ ಚಮೀರ, ವನಿಂದು ಹಸರಂಗ, ಲಹಿರು ಕುಮಾರ ಮತ್ತು ಮಹೀಶ್ ತೀಕ್ಷಣ ಅವರ ಹರಿತವಾದ ಎಸೆತಗಳಿಗೆ ಅಫ್ಘಾನ್ ಬಳಿ ಉತ್ತರವೇ ಇರಲಿಲ್ಲ. ಚಮೀರ 4, ಹಸರಂಗ 3 ಹಾಗೂ ಕುಮಾರ 2 ವಿಕೆಟ್ ಹಾರಿಸಿದರು.
23 ರನ್ ಹೊಡೆದ ಮಾಜಿ ನಾಯಕ ಮೊಹಮ್ಮದ್ ನಬಿ ಅವರದೇ ಅಫ್ಘಾನ್ ಸರದಿಯ ಸರ್ವಾಧಿಕ ಗಳಿಕೆ. ಪ್ರವಾಸಿಗರ ಸರದಿಯ ಏಕೈಕ ಸಿಕ್ಸರ್ ಕೊನೆಯ ಆಟಗಾರ ಫರೀದ್ ಅಹ್ಮದ್ ಅವರಿಂದ ಸಿಡಿಯಿತು.
Related Articles
ಚೇಸಿಂಗ್ ವೇಳೆ ಲಂಕಾ ಆರಂಭಿಕರಿಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ಪಥುಮ್ ನಿಸ್ಸಂಕ 51 ಹಾಗೂ ದಿಮುತ್ ಕರುಣಾರತ್ನೆ 56 ರನ್ ಹೊಡೆದರು. ಮೊದಲ ವಿಕೆಟಿಗೆ 10.1 ಓವರ್‌ಗಳಿಂದ 84 ರನ್ ಒಟ್ಟುಗೂಡಿತು.
ಸಂಕ್ಷಿಪ್ತ ಸ್ಕೋರ್: ಅಫ್ಘಾನಿಸ್ತಾನ-22.2 ಓವರ್‌ಗಳಲ್ಲಿ 116 (ಮೊಹಮ್ಮದ್ ನಬಿ 23, ಇಬ್ರಾಹಿಂ ಜದ್ರಾನ್ 22, ಗುಲ್ಬದಿನ್ ನೈಬ್ 20, ಚಮೀರ 63ಕ್ಕೆ 4, ಹಸರಂಗ 7ಕ್ಕೆ 3, ಕುಮಾರು 29ಕ್ಕೆ 2, ತೀಕ್ಷಣ 16ಕ್ಕೆ 1). ಶ್ರೀಲಂಕಾ-16 ಓವರ್‌ಗಳಲ್ಲಿ ಒಂದು ವಿಕೆಟಿಗೆ 120 (ಕರುಣಾರತ್ನೆ ಔಟಾಗದೆ 56, ನಿಸ್ಸಂಕ 51, ಮೆಂಡಿಸ್ ಔಟಾಗದೆ 11, ನೈಬ್ 19ಕ್ಕೆ 1).
ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ದುಷ್ಮಂತ ಚಮೀರ.