Advertisement

ಶ್ರೀಲಂಕಾಕ್ಕೆ ಜಯ, ಸರಣಿ ಸಮಬಲ; ಮೆಂಡಿಸ್‌, ಶಣಕ ಸ್ಫೋಟಕ್ಕೆ ಬಾಗಿದ ಹಾರ್ದಿಕ್‌ ಪಡೆ

11:08 PM Jan 05, 2023 | Team Udayavani |

ಪುಣೆ: ಇಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಆತಿಥೇಯ ಭಾರತವನ್ನು,ಪ್ರವಾಸಿ ಶ್ರೀಲಂಕಾ 16 ರನ್‌ಗಳಿಂದ ಸೋಲಿಸಿದೆ. ಜಿದ್ದಾಜಿದ್ದಿಯಾಗಿ ನಡೆದ 2ನೇ ಪಂದ್ಯದಲ್ಲಿ ಲಂಕಾ ನೀಡಿದ ಬೃಹತ್‌ ಗುರಿಯನ್ನು ಬೆನ್ನಟ್ಟಲು ಹಾರ್ದಿಕ್‌ ಪಾಂಡ್ಯ ಪಡೆ ವಿಫ‌ಲವಾಯಿತು. ಇದರಿಂದ ಸರಣಿ 1-1ರಿಂದ ಸಮಗೊಂಡಿದೆ.

Advertisement

ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 206 ರನ್‌ ಗಳಿಸಿತ್ತು. ಈ ಬೃಹತ್‌ ಮೊತ್ತ ಬೆನ್ನಟ್ಟಿ ಹೊರಟ ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 190 ರನ್‌ ಗಳಿಸಿತು.

ಭಾರತ ಮೊದಲ 5 ವಿಕೆಟ್‌ಗಳನ್ನು ಕಳೆದುಕೊಂಡ ನಂತರ ಲಂಕಾಕ್ಕೆ ಪೈಪೋಟಿ ನೀಡಲು ಆರಂಭಿಸಿತು. ಸೂರ್ಯಕುಮಾರ್‌ ಯಾದವ್‌ ಮತ್ತು ಅಕ್ಷರ್‌ ಪಟೇಲ್‌ 6ನೇ ವಿಕೆಟ್‌ಗಳಿಗೆ 91 ರನ್‌ ಜೊತೆಯಾಟವಾಡಿದರು. ಆಗ ನಿಜಕ್ಕೂ ಲಂಕಾಕ್ಕೆ ಒತ್ತಡವುಂಟಾಗಿತ್ತು. ಆ ಹಂತದಲ್ಲಿ 51 ರನ್‌ ಗಳಿಸಿದ್ದ ಸೂರ್ಯಕುಮಾರ್‌ ಔಟಾದರು. ಅವರು 36 ಎಸೆತ ಎದುರಿಸಿ 3 ಬೌಂಡರಿ, 3 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇಲ್ಲಿಗೆ ಭಾರತಕ್ಕೆ ಮತ್ತೆ ಒತ್ತಡ ಶುರುವಾಯಿತು.
ಮತ್ತೂಂದು ಕಡೆ ನೆಲಕಚ್ಚಿಕೊಂಡಿದ್ದ ಅಕ್ಷರ್‌ ಪಟೇಲ್‌ 31 ಎಸೆತಗಳಲ್ಲಿ 3 ಬೌಂಡರಿ, 6 ಸಿಕ್ಸರ್‌ಗಳ ನೆರವಿನಿಂದ 65 ರನ್‌ ಚಚ್ಚಿದರು. ಅವರು ಕ್ರೀಸ್‌ನಲ್ಲಿ ಇರುವವರೆಗೆ ಭಾರತಕ್ಕೆ ಆತಂಕವಿರಲಿಲ್ಲ. ಅವರು ಔಟಾಗುವುದರೊಂದಿಗೆ ಭಾರತದ ಸೋಲು ಖಚಿತವಾಯಿತು.

ಲಂಕಾ ಬೃಹತ್‌ ಮೊತ್ತ: ಮೊದಲು ಬ್ಯಾಟಿಂಗ್‌ಗಿಳಿಸಲ್ಪಟ್ಟ ಪ್ರವಾಸಿ ಶ್ರೀಲಂಕಾ ಬೃಹತ್‌ ಮೊತ್ತ ಗಳಿಸಿತು. ಮೊದಲನೇ ಪಂದ್ಯವನ್ನು ಕೊನೆಯ ಎಸೆತದಲ್ಲಿ ಸೋತಿದ್ದ ಲಂಕಾ, ಈ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟ್‌ ಬೀಸಿತು. ಇನಿಂಗ್ಸ್‌ ಆರಂಭಿಸಿದ ಪಾಥುಮ್‌ ನಿಸ್ಸಂಕ ಮತ್ತು ಕುಸಲ್‌ ಮೆಂಡಿಸ್‌ ಬಿರುಸಿನ ಹೊಡೆತಗಳಿಂದ ಆಟ ಆರಂಭಿಸಿದರು. ಓವರಿಗೆ ಹತ್ತರಂತೆ ರನ್‌ ಗಳಿಸಿದ ಅವರಿಬ್ಬರು ಬೃಹತ್‌ ಮೊತ್ತ ಪೇರಿಸುವ ಸೂಚನೆ ನೀಡಿದರು. ದ್ವಿತೀಯ ಓವರ್‌ ಎಸೆದ ಅರ್ಷದೀಪ್‌ 19 ರನ್‌ ಬಿಟ್ಟುಕೊಟ್ಟರು.

ಮೊದಲ 8 ಓವರ್‌ ಮುಗಿದಾಗ ತಂಡದ ಮೊತ್ತ 80ರ ಸನಿಹದಲ್ಲಿತ್ತು. ಈ ಹಂತದಲ್ಲಿ ದಾಳಿಗೆ ಇಳಿದ ಯಜುವೇಂದ್ರ ಚಹಲ್‌ ಅಪಾಯರಕಾರಿ ಮೆಂಡಿಸ್‌ ಅವರ ವಿಕೆಟನ್ನು ಹಾರಿಸಲು ಯಶಸ್ವಿಯಾದರು. ಕೇವಲ 31 ಎಸೆತ ಎದುರಿಸಿದ್ದ ಅವರು 52 ರನ್‌ ಗಳಿಸಿದ್ದರು. 3 ಬೌಂಡರಿ ಮತ್ತು 4 ಸಿಕ್ಸರ್‌ ಬಾರಿಸಿದ್ದರು. ಈ ವಿಕೆಟ್‌ ಉರುಳಿದ ಬಳಿಕ ಶ್ರೀಲಂಕಾದ ರನ್‌ವೇಗಕ್ಕೆ ಕಡಿವಾಣ ಬಿತ್ತು.

Advertisement

ಮೆಂಡಿಸ್‌ ಔಟಾದ ಬಳಿಕ ಪಾಥುಮ್‌ ನಿಸ್ಸಂಕ ಅವರ ಬಿರುಸಿನ ಆಟ ನಿಧಾನವಾಗಿತ್ತು. ಅವರು 33 ರನ್‌ ಗಳಿಸಿ ಮೂರನೆಯವವಾಗಿ ಔಟಾದರು. ಮುಂದಿನ ಕೆಲವು ಓವರ್‌ಗಳಲ್ಲಿ ಭಾರತೀಯ ಬೌಲರ್‌ಗಳು ಮೇಲುಗೈ ಸಾಧಿಸಿದ್ದರಿಂದ ಪ್ರವಾಸಿ ತಂಡ ಕುಂಟುತ್ತ ಸಾಗಿತ್ತು. ಈ ನಡುವೆ ತಂಡವು ಕೆಲವು ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಬಿತ್ತು.

ಕೊನೆ ಹಂತದಲ್ಲಿ ಶ್ರೀಲಂಕಾ ಮತ್ತೆ ಸಿಡಿದ ಕಾರಣ ತಂಡದ ಮೊತ್ತ 200ರ ಗಡಿ ದಾಟಿತು. ಅಂತಿಮ ನಾಲ್ಕು ಓವರ್‌ಗಳಲ್ಲಿ ತಂಡ 66 ರನ್‌ ಗಳಿಸಿತ್ತು. 16ನೇ ಓವರಿನಲ್ಲಿ ವನಿಂದು ಹಸರಂಗ ತಂಡದ ಮೊತ್ತ 138ರಲ್ಲಿರುವಾಗ ಔಟಾಗಿದ್ದರು. ಆಬಳಿಕ ನಾಯಕ ದಸುನ್‌ ಶಣಕ ಮತ್ತು ಚಮಿಕ ಕರುಣರತ್ನ ಸ್ಫೋಟಕವಾಗಿ ಆಡಿದರು.
ಸಿಕ್ಸರ್‌ಗಳ ಸುರಿಮಳೆಗೈದ ಶಣಕ ಬೌಲರ್‌ಗಳ ಬೆವರಿಳಿಸಿದರು. ಕೇವಲ 22 ಎಸೆತ ಎದುರಿಸಿದ ಅವರು 56 ರನ್‌ ಗಳಿಸಿ ಅಜೇಯರಾಗಿ ಉಳಿದರು. 2 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್‌ ಬಾರಿಸಿ ರಂಜಿಸಿದರು.

ಬೌಲರ್‌ಗಳು ದುಬಾರಿ: ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್‌ ಕಿತ್ತು ಗಮನ ಸೆಳೆದಿದ್ದ ಶಿವಂ ಮಾವಿ ಇಲ್ಲಿ ದುಬಾರಿಯಾಗಿದ್ದರು. ಆ ಪಂದ್ಯದ ಮೂಲಕ ಅವರು ಟಿ20ಗೆ ಪದಾರ್ಪಣೆಗೈದಿದ್ದರು. ಅವರಿಲ್ಲಿ 4 ಓವರ್‌ ಎಸೆದರೂ ಯಾವುದೇ ವಿಕೆಟ್‌ ಕೀಳಲು ವಿಫ‌ಲರಾದರು. ಬದಲಾಗಿ 53 ರನ್‌ ಬಿಟ್ಟುಕೊಟ್ಟರು. ಉಮ್ರಾನ್‌ ಮಲಿಕ್‌ ಮೂರು ವಿಕೆಟ್‌ ಕಿತ್ತಿದ್ದರೂ 48 ರನ್‌ ಎದುರಾಳಿಗೆ ಕೊಟ್ಟರು. ಅರ್ಷದೀಪ್‌, ಚಹಲ್‌ ಕೂಡ ನಿಯಂತ್ರಿತ ಬೌಲಿಂಗ್‌ ದಾಳಿ ಸಂಘಟಿಸಲು ವಿಫ‌ಲರಾಗಿದ್ದರು. ಅಕ್ಷರ್‌ ಪಟೇಲ್‌ ಮಾತ್ರ ಬಿಗು ದಾಳಿ ಸಂಘಟಿಸಿ ಗಮನ ಸೆಳೆದರು.

ಸ್ಕೋರುಪಟ್ಟಿ
ಪಾಥುಮ್‌ ನಿಸ್ಸಂಕ ಸಿ ತ್ರಿಪಾಠಿ ಬಿ ಪಟೇಲ್‌ 33
ಕುಸಲ್‌ ಮೆಂಡಿಸ್‌ ಎಲ್‌ಬಿಡಬ್ಲ್ಯು ಬಿ ಚಹಲ್‌ 52
ಭಾನುಕ ರಾಜಪಕ್ಸ ಬಿ ಉಮ್ರಾನ್‌ ಮಲಿಕ್‌ 2
ಚರಿತ ಅಸಲಂಕ ಸಿ ಗಿಲ್‌ ಬಿ ಮಲಿಕ್‌ 37
ಧನಂಜಯ ಡಿ’ಸಿಲ್ವ ಸಿ ಹೂಡಾ ಬಿ ಪಟೇಲ್‌ 3
ದಸುನ್‌ ಶಣಕ ಔಟಾಗದೆ 56
ವನಿಂದು ಹಸರಂಗ ಬಿ ಮಲಿಕ್‌ 0
ಚಮಿಕ ಕರುಣರತ್ನ ಔಟಾಗದೆ 11
ಇತರೆ 12
ವಿಕೆಟ್‌ ಪತನ: 1-80, 2-83, 3-96, 4-110, 5-138, 6-138

ಶ್ರೀಲಂಕಾ 20 ಓವರ್‌, 206/6

ಬೌಲಿಂಗ್‌
ಹಾರ್ದಿಕ್‌ ಪಾಂಡ್ಯ 2- 0- 13- 0
ಅರ್ಷದೀಪ್‌ ಸಿಂಗ್‌ 2- 0 -37- 0
ಶಿವಂ ಮಾವಿ 4- 0- 53- 0
ಅಕ್ಷರ್‌ ಪಟೇಲ್‌ 4 -0 -24- 2
ಯಜುವೇಂದ್ರ ಚಹಲ್‌ 4- 0- 30- 1
ಉಮ್ರಾನ್‌ ಮಲಿಕ್‌ 4- 0 -48- 3

ಭಾರತ 
ಇಶಾನ್‌ ಕಿಶನ್‌ ಬಿ ರಜಿತ 2
ಶುಭಮನ್‌ ಗಿಲ್‌ ಸಿ ತೀಕ್ಷಣ ಬಿ ರಜಿತ 5
ರಾಹುಲ್‌ ತ್ರಿಪಾಠಿ ಸಿ ಮೆಂಡಿಸ್‌ ಬಿ ಮದುಶಂಕ 5
ಸೂರ್ಯಕುಮಾರ್‌ ಸಿ ಹಸರಂಗ ಬಿ ಮದುಶಂಕ 51
ಹಾರ್ದಿಕ್‌ ಪಾಂಡ್ಯ ಸಿ ಮೆಂಡಿಸ್‌ ಬಿ ಕರುಣರತ್ನೆ 12
ಹೂಡಾ ಸಿ ಧನಂಜಯ ಸಿಲ್ವ ಬಿ ಹಸರಂಗ 9
ಅಕ್ಷರ್‌ ಪಟೇಲ್‌ ಸಿ ಕರುಣರತ್ನೆ ಬಿ ಶಣಕ 65
ಶಿವಂ ಮಾವಿ ಸಿ ತೀಕ್ಷಣ ಬಿ ಶಣಕ 26
ಉಮ್ರಾನ್‌ ಮಲಿಕ್‌ ಔಟಾಗದೆ 1
ಇತರೆ 14
20 ಓವರ್‌- 190/8
ವಿಕೆಟ್‌ ಪತನ: 1 -12, 2-21, 3-21, 4-34, 5-57, 6-148, 7-189, 8-190
ಬೌಲಿಂಗ್‌
ಮದುಶಂಕ 4- 0- 45- 2
ಕಸುನ್‌ ರಜಿತ 4- 0- 22 -2
ಕರುಣರತ್ನೆ 4- 0- 41- 1
ವನಿಂದು ಹಸರಂಗ 3- 0- 41- 1
ಮಹೀಶ್‌ ತೀಕ್ಷಣ 4- 0- 33- 0
ದಸುನ್‌ ಶಣಕ 1- 0- 4- 2

Advertisement

Udayavani is now on Telegram. Click here to join our channel and stay updated with the latest news.

Next