ಕೊಲಂಬೊ : ಇಲ್ಲಿನ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ(ಆಗಸ್ಟ್ ೨) ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗಿ ಟೈ ನಲ್ಲಿ ಅಂತ್ಯಗೊಂಡಿತು.
T20 ಸರಣಿಯ ಕೊನೆಯ ಪಂದ್ಯ ರೋಚಕ ಸೂಪರ್ ಓವರ್ ಗೆ ಸಾಕ್ಷಿಯಾದ ಬೆನ್ನಲ್ಲೇ ಎರಡು ತಂಡಗಳ ನಡುವೆ ಬ್ಯಾಕ್ ಟು ಬ್ಯಾಕ್ ಸಮಬಲದ ಆಟ ಕಂಡು ಬಂದಿತು. ಇಂದು ಸೂಪರ್ ಓವರ್ ಇರಲಿಲ್ಲ.
ಶ್ರೀಲಂಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ 47.5 ಓವರ್ ಗಳಲ್ಲಿ 230 ರನ್ ಗಳಿಗೆ ಆಲೌಟಾಯಿತು.
ಘಟಾನುಘಟಿ ಬ್ಯಾಟ್ಸ್ ಮ್ಯಾನ್ ಗಳಿದ್ದರು ಸಾಧಾರಣ ಗುರಿ ತಲುಪುವುದು ಭಾರತಕ್ಕೆ ಕಷ್ಟವಾಯಿತು. ನಾಯಕ ಚರಿತ್ ಅಸಲಂಕಾ ಕೊನೆಯ ಕ್ಷಣದಲ್ಲಿ ಎರಡು ಪ್ರಮುಖ ವಿಕೆಟ್ ಕಿತ್ತು ಪಂದ್ಯ ಟೈ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೊನೆಯಲ್ಲಿ ಶಿವಂ ದುಬೆ ಮತ್ತು ಅರ್ಶದೀಪ್ ಸಿಂಗ್ ಅವರನ್ನು ಎಲ್ ಬಿ ಡಬ್ಲ್ಯೂ ಬಲೆಗೆ ಬೀಳಿಸಿ ಭಾರತದ ಗೆಲುವು ತಪ್ಪಿಸಿದರು.
ಅಸಲಂಕಾ 3 ವಿಕೆಟ್ ಕಿತ್ತರೆ , ವನಿಂದು ಹಸರಂಗ ಕೂಡ 3 ವಿಕೆಟ್ ಕಿತ್ತು ಭಾರತ ತಂಡವನ್ನು ಕಟ್ಟಿ ಹಾಕಿದರು. ಬ್ಯಾಟಿಂಗ್ ನಲ್ಲಿ ಮಿಂಚಿದ್ದ ವೆಲ್ಲಲಗೆ (ಔಟಾಗದೆ 67 ರನ್ ) 2 ವಿಕೆಟ್ ಕಿತ್ತರು.
ಭಾರತದ ಪರ ನಾಯಕ ರೋಹಿತ್ ಶರ್ಮ 58, ಗಿಲ್ 16, ಕೊಹ್ಲಿ 24, ವಾಷಿಂಗ್ಟನ್ ಸುಂದರ್ 5, ಶ್ರೇಯಸ್ ಅಯ್ಯರ್ 23, ಕೆ.ಎಲ್. ರಾಹುಲ್ 31, ಅಕ್ಷರ್ ಪಟೇಲ್ 33, ಶಿವಂ ದುಬೆ 25 ರನ್ ಗಳಿಸಿ ಔಟಾದರೆ ಸಿರಾಜ್ 5 ರನ್ ಗಳಿಸಿ ಔಟಾಗದೆ ಉಳಿದರು.
ಲಂಕಾ ಬ್ಯಾಟಿಂಗ್ ನಲ್ಲಿ ಪಾತುಮ್ ನಿಸ್ಸಂಕ 56 ರನ್ , ಕುಸಾಲ್ ಮೆಂಡಿಸ್ ಮತ್ತು ನಾಯಕ ಅಸಲಂಕಾ ತಲಾ 14 ರನ್ ಗಳಿಸಿ ಔಟಾದರು. ಆ ಬಳಿಕ ತಂಡಕ್ಕೆ ಆಧಾರವಾದ ದುನಿತ್ ವೆಲ್ಲಲಗೆ ಔಟಾಗದೆ 65 ಎಸೆತಗಳಲ್ಲಿ 67 ರನ್ ಗಳಿಸಿ ತಂಡ ಇನ್ನೂರರ ಗಡಿ ದಾಟಲು ಕಾರಣವಾದರು. ಕೊನೆಯಲ್ಲಿ ಹಸರಂಗ 24 ಮತ್ತು ಧನಂಜಯ 17 ರನ್ ಕೊಡುಗೆ ಸಲ್ಲಿಸಿದರು.