ಕೊಲಂಬೊ: ಇನ್ನೇನು ಪ್ರವಾಸಿ ಜಿಂಬಾಬ್ವೆ ತಂಡ ರಂಗನ ಹೆರಾತ್ ಅವರ ಸ್ಪಿನ್ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿತು ಎನ್ನುವಷ್ಟರಲ್ಲಿ ಕ್ರೀಸ್ ಆಕ್ರಮಿಸಿಕೊಂಡ ಕ್ರೆಗ್ ಇರ್ವಿನ್ ಅಜೇಯ ಶತಕ ಬಾರಿಸಿ ಶ್ರೀಲಂಕಾದ ಬೌಲಿಂಗ್ ಯೋಜನೆಯನ್ನು ತಲೆಕೆಳಗಾಗಿಸಿದ್ದಾರೆ. ಕೊಲಂಬೊ ಟೆಸ್ಟ್ ಪಂದ್ಯದ ಮೊದಲ ದಿನ ಜಿಂಬಾಬ್ವೆ ಸ್ಕೋರ್ 8 ವಿಕೆಟಿಗೆ 344. ಇದರಲ್ಲಿ ಇರ್ವಿನ್ ಪಾಲು ಅಜೇಯ 151.
ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು ವಶಪಡಿಸಿಕೊಂಡು ಇತಿಹಾಸ ನಿರ್ಮಿಸಿದ ಜಿಂಬಾಬ್ವೆ, ಇದೇ ಹುರುಪಿನಲ್ಲಿ ಏಕೈಕ ಟೆಸ್ಟ್ ಆಡಲಿಳಿದಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗನ್ನೇ ಆಯ್ದುಕೊಂಡಿತು. ಆದರೆ ಲಂಚ್ ಒಳಗಾಗಿ 70 ರನ್ನಿಗೆ 4 ವಿಕೆಟ್ ಉದುರಿಸಿಕೊಂಡು ತೀವ್ರ ಸಂಕಟಕ್ಕೆ ಸಿಲುಕಿತು. ಮಸಕಝ 19, ಚಕಬÌ 12, ಮೊದಲ ಟೆಸ್ಟ್ ಆಡಲಿಳಿದ ಮುಸಕಂಡ 6, ವಿಲಿಯಮ್ಸ್ 2 ರನ್ ಮಾಡಿ ಪೆವಿಲಿಯನ್ ಸೇರಿದ್ದರು. ಇದರಲ್ಲಿ 2 ವಿಕೆಟ್ ರಂಗನ ಹೆರಾತ್ ಹಾರಿಸಿದ್ದರು.
ಮುಂದಿನದ್ದೆಲ್ಲ ಕ್ರೆಗ್ ಇರ್ವಿನ್ ಬ್ಯಾಟಿಂಗ್ ಸಾಹಸಗಾಥೆ. 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಇರ್ವಿನ್ ಲಂಕಾ ದಾಳಿಯನ್ನು ದಂಡಿಸುತ್ತ ಸಾಗಿದರು. 12ನೇ ಟೆಸ್ಟ್‌ನಲ್ಲಿ 2ನೇ ಶತಕ ಬಾರಿಸಿ ಮೆರೆದರು. ದಿನಾಟದ ಕೊನೆಯಲ್ಲಿ ಇರ್ವಿನ್ ನೂರೈವತ್ತರ ಗಡಿ ದಾಟುವುದರೊಂದಿಗೆ ಜೀವನಶ್ರೇಷ್ಠ ಬ್ಯಾಟಿಂಗ್ ಸಾಹಸಕ್ಕೂ ಸಾಕ್ಷಿಯಾದರು. 238 ಎಸೆತ ಎದುರಿಸಿರುವ ಇರ್ವಿನ್ 13 ಬೌಂಡರಿ, ಒಂದು ಸಿಕ್ಸರ್ ನೆರವಿನಿಂದ 151 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕಳೆದ ವರ್ಷ ನ್ಯೂಜಿಲ್ಯಾಂಡ್ ವಿರುದ್ಧ ಬುಲವಾಯೋದಲ್ಲಿ 146 ರನ್ ಹೊಡೆದದ್ದು ಅವರ ಈವರೆಗಿನ ಅತ್ಯಧಿಕ ಗಳಿಕೆಯಾಗಿತ್ತು.
ಕ್ರೆಗ್ ಇರ್ವಿನ್‌ಗೆ ಸಿಕಂದರ್ ರಾಜ (36) ಮತ್ತು ಮಾಲ್ಕಂ ವಾಲರ್ (36) ಅವರಿಂದ ಉತ್ತಮ ಬೆಂಬಲ ಲಭಿಸಿತು. ದಿನದಾಟದ ಕೊನೆಯಲ್ಲಿ ಟಿರಿಪಾನೊ (ಬ್ಯಾಟಿಂಗ್ 24) ನೆರವಿನಿಂದ ಮುರಿಯದ 9ನೇ ವಿಕೆಟಿಗೆ 62 ರನ್ ಪೇರಿಸಿದ್ದಾರೆ.
ಶ್ರೀಲಂಕಾ ಪರ ರಂಗನ ಹೆರಾತ್ 4, ಅಸೇಲ ಗುಣರತ್ನೆ 2 ವಿಕೆಟ್ ಉರುಳಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಜಿಂಬಾಬ್ವೆ-8 ವಿಕೆಟಿಗೆ 344 (ಇರ್ವಿನ್ ಬ್ಯಾಟಿಂಗ್ 151. ರಾಜ 36, ವಾಲರ್ 36, ಹೆರಾತ್ 106ಕ್ಕೆ 4, ಗುಣರತ್ನೆ 28ಕ್ಕೆ 2).