Advertisement
ಶುಕ್ರವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಒಮಾನ್ 30.2 ಓವರ್‌ಗಳಲ್ಲಿ ಕೇವಲ 98 ರನ್ನಿಗೆ ಆಲೌಟ್ ಆಯಿತು. ಜವಾಬಿತ್ತ ಶ್ರೀಲಂಕಾ 15 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 100 ರನ್ ಬಾರಿಸಿತು. ಇದು ಲಂಕೆಗೆ ಒಲಿದ ಸತತ 2ನೇ ಜಯ. ಮೊದಲ ಪಂದ್ಯದಲ್ಲಿ ಅದು ಯುಎಇಯನ್ನು 175 ರನ್ನುಗಳಿಂದ ಕೆಡವಿತ್ತು. ದಸುನ್ ಶಣಕ ಪಡೆಯೀಗ 4.220 ರನ್‌ರೇಟ್‌ನೊಂದಿಗೆ “ಬಿ’ ವಿಭಾಗದ ಅಗ್ರಸ್ಥಾನಿಯಾಗಿದೆ.
ವನಿಂದು ಹಸರಂಗ ಮತ್ತೂಮ್ಮೆ ಘಾತಕವಾಗಿ ಪರಿಣಮಿಸಿ 13 ರನ್ನಿಗೆ 5 ವಿಕೆಟ್ ಉಡಾಯಿಸಿದರು. ಯುಎಇ ವಿರುದ್ಧ ಅವರು 6 ವಿಕೆಟ್ ಕೆಡವಿ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದ್ದರು. ಲಹಿರು ಕುಮಾರ 3 ವಿಕೆಟ್ ಕಿತ್ತರು. ಒಮಾನ್ ಸರದಿಯಲ್ಲಿ ಅಯಾನ್ ಖಾನ್ 41, ಜತಿಂದರ್ ಸಿಂಗ್ 21 ರನ್ ಮಾಡಿದರು.
ಚೇಸಿಂಗ್ ವೇಳೆ ದಿಮುತ್ ಕರುಣಾರತ್ನೆ (ಅಜೇಯ 61) ಮತ್ತು ಪಥುಮ್ ನಿಸ್ಸಂಕ (ಅಜೇಯ 37) ಇಬ್ಬರೇ ಸೇರಿಕೊಂಡು ಲಂಕೆಯನ್ನು ಗುರಿ ಮುಟ್ಟಿಸಿದರು.
Related Articles
ಬುಲವಾಯೊ: “ಬಿ’ ವಿಭಾಗದ ಇನ್ನೊಂದು ಪಂದ್ಯದಲ್ಲಿ ಸ್ಕಾಟ್ಲೆಂಡ್ 111 ರನ್ನುಗಳ ಬೃಹತ್ ಅಂತರದಿಂದ ಯುಎಇಯನ್ನು ಕೆಡವಿತು. ಮಧ್ಯಮ ಕ್ರಮಾಂಕದ ಆಟಗಾರ, ನಾಯಕ ರಿಚೀ ಬೆರ್ರಿಂಗ್ಟನ್ ಅವರ ಶತಕ ಸಾಹಸದಿಂದ ಸ್ಕಾಟ್ಲೆಂಡ್ 8 ವಿಕೆಟಿಗೆ 282 ರನ್ ರಾಶಿ ಹಾಕಿತು. ಯುಎಇ 35.3 ಓವರ್‌ಗಳಲ್ಲಿ 171ಕ್ಕೆ ಉರುಳಿತು.
ಇದರೊಂದಿಗೆ ಸ್ಕಾಟ್ಲೆಂಡ್ ಎರಡೂ ಪಂದ್ಯಗಳನ್ನು ಗೆದ್ದು “ಬಿ’ ವಿಭಾಗದ ದ್ವಿತೀಯ ಸ್ಥಾನಿಯಾಯಿತು. ಸ್ಕಾಟ್ಲೆಂಡ್ ಮೊದಲ ಮುಖಾಮುಖೀಯಲ್ಲಿ ಐರ್ಲೆಂಡ್ ಎದುರು ಒಂದು ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿತ್ತು. ರನ್‌ರೇಟ್‌ನಲ್ಲಿ ಮುಂದಿರುವ ಶ್ರೀಲಂಕಾ ಅಗ್ರಸ್ಥಾನದಲ್ಲಿದೆ. ಮೂರೂ ಪಂದ್ಯಗಳನ್ನು ಸೋತ ಯುಎಇ ಕೂಟದಿಂದ ಹೊರಬಿತ್ತು.
Advertisement