Advertisement

ಶ್ರೀಲಂಕಾ ಸರಣಿ ಬಾಂಬ್‌ ಸ್ಫೋಟ :ಜೆಡಿಎಸ್‌ನ ಐವರ ಸಾವು

02:18 AM Apr 23, 2019 | Team Udayavani |

ಬೆಂಗಳೂರು/ಹೊಸದಿಲ್ಲಿ /ಕೊಲಂಬೊ: ಈಸ್ಟರ್‌ ಸಂಭ್ರಮದ ರವಿವಾರ ಶ್ರೀಲಂಕಾದ ಚರ್ಚ್‌, ಹೊಟೇಲ್‌ಗ‌ಳು ಸಹಿತ 8 ಕಡೆ ನಡೆದ ಭೀಕರ ಸರಣಿ ಸ್ಫೋಟದಲ್ಲಿ ರಾಜ್ಯದಿಂದ ಪ್ರವಾಸಕ್ಕೆ ತೆರಳಿದ್ದ ಐವರು ಜೆಡಿಎಸ್‌ ಕಾರ್ಯಕರ್ತರೂ ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಎಂಟು ಮಂದಿ ಭಾರತೀಯರು ಮೃತರಾಗಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಬಹಿರಂಗಪಡಿಸಿದ್ದಾರೆ.

Advertisement

ಕೆಲವು ದಿನಗಳ ಹಿಂದಷ್ಟೇ ರಾಜ್ಯದಲ್ಲಿ ನಡೆದ ಮೊದಲ ಹಂತದ ಲೋಕಸಭೆ ಚುನಾವಣೆ ಬಳಿಕ ಕೊಲಂಬೊಗೆ ಪ್ರವಾಸ ಕೈಗೊಂಡಿದ್ದ ನೆಲಮಂಗಲ ತಾಲೂಕಿನ ಕಾಚನಹಳ್ಳಿಯ ಲಕ್ಷಿ$¾àನಾರಾಯಣ(55), ಗೋವೇನಹಳ್ಳಿ ಎಚ್‌. ಶಿವಕುಮಾರ್‌(ಶಿವಣ್ಣ-58), ಪೀಣ್ಯ 8ನೇ ಮೈಲಿಯ ಕೆ.ಜಿ. ಹನುಮಂತರಾಯಪ್ಪ (55), ತುಮಕೂರಿನ ರಮೇಶ್‌ ಗೌಡ (51) ಮತ್ತು ವಿದ್ಯಾರಣ್ಯಪುರ ಸಮೀಪದ ಚೊಕ್ಕಸಂದ್ರದ ಎಂ. ರಂಗಪ್ಪ (49) ಮೃತಪಟ್ಟಿದ್ದಾರೆ. ಇದೇ ವೇಳೆ ಹ್ಯಾರೋ ಕೇತನ ಹಳ್ಳಿಯ ಪುಟ್ಟರಾಜು, ಅಡಕಮಾರನಹಳ್ಳಿ ಮಾರೇಗೌಡ ಮತ್ತು ಬಿಟಿಎಂ ಲೇ ಔಟ್‌ನ ನಾಗರಾಜ ರೆಡ್ಡಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಕರ್ನಾಟಕ ಸರಕಾರ ತಿಳಿಸಿದೆ.

ವಿಶ್ರಾಂತಿ ಪಡೆಯಲು ಪ್ರವಾಸ
ಜೆಡಿಎಸ್‌ ಕಾರ್ಯಕರ್ತರಾಗಿರುವ ಈ 8 ಮಂದಿ ವರ್ಷಕ್ಕೆ 2-3 ಬಾರಿ ವಿದೇಶ ಪ್ರವಾಸ ಕೈಗೊಳ್ಳುವುದು ಸಾಮಾನ್ಯ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಲಿ ಪರ ಪ್ರಚಾರದಲ್ಲಿ ಭಾಗಿಯಾಗಿದ್ದರು. ಮತದಾನ ಮುಗಿದ ಹಿನ್ನೆಲೆಯಲ್ಲಿ 8 ಮಂದಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದರು. ರವಿವಾರ ನಸುಕಿನ ಮೂರು ಗಂಟೆ ಸುಮಾರಿಗೆ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶ್ರೀಲಂಕಾದ ಕೊಲಂಬೊಗೆ ತೆರಳಿದ್ದರು. ಬೆಳಗ್ಗೆ 7ರಿಂದ 8 ಗಂಟೆ ಅವಧಿಯಲ್ಲಿ ಕುಟುಂಬ ಸದಸ್ಯರಿಗೆ ಕರೆ ಮಾಡಿ ಸುರಕ್ಷಿತವಾಗಿ ತಲುಪಿರುವ ಬಗ್ಗೆ ಮಾಹಿತಿ ನೀಡಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ಬಾಂಬ್‌ ಸ್ಫೋಟ ನಡೆದಿತ್ತು.

ಮೃತರ ಪಾರ್ಥಿವ ಶರೀರ ತರಲು ಕ್ರಮ
ಶ್ರೀಲಂಕಾದಲ್ಲಿ ಮೃತಪಟ್ಟ ರಾಜ್ಯದ ನಿವಾಸಿಗಳ ಪಾರ್ಥಿವ ಶರೀರ ಗಳನ್ನು ಭಾರತಕ್ಕೆ ತರಲು ವಿಶೇಷ ಅಧಿಕಾರಿ ನೇಮಕ ಮಾಡಲಾಗಿದ್ದು, ಅವರು ಶ್ರೀಲಂಕಾ ರಾಯಭಾರಿ ಕಚೇರಿ ಸಂಪರ್ಕದಲ್ಲಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ತಿಳಿಸಿದ್ದಾರೆ. ಶ್ರೀಲಂಕಾದ ಕ್ಯಾಂಡಿಗೂ ಕೆಲವರು ಪ್ರವಾಸಕ್ಕೆ ತೆರಳಿದ್ದಾರೆ. ಅವರೆಲ್ಲ ಸುರಕ್ಷಿತವಾಗಿದ್ದು, ಭಾರತಕ್ಕೆ ಮರಳುತ್ತಿದ್ದಾರೆ ಎಂದಿದ್ದಾರೆ.

290ಕ್ಕೇರಿದ ಸಾವಿನ ಸಂಖ್ಯೆ
ರವಿವಾರದ ಲಂಕಾ ರಕ್ತಪಾತದಲ್ಲಿ ಸಾವಿಗೀಡಾದವರ ಸಂಖ್ಯೆ ಸೋಮವಾರ 290ಕ್ಕೇರಿಕೆಯಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಭೀತಿಯಿದೆ. 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಈವರೆಗೆ ಯಾವುದೇ ಸಂಘಟನೆಯೂ ದಾಳಿಯ ಹೊಣೆ ಯನ್ನು ಹೊತ್ತು ಕೊಂಡಿಲ್ಲ. ಆದರೆ ಘಟನೆ ಸಂಬಂಧ ಲಂಕಾ ಪೊಲೀಸರು ಒಟ್ಟು 24 ಮಂದಿಯನ್ನು ಬಂಧಿಸಿದ್ದು, ಇವರೆಲ್ಲರೂ ಸ್ಥಳೀಯ ನ್ಯಾಶನಲ್‌ ತೌಹೀದ್‌ ಜಮಾತ್‌(ಎನ್‌ಟಿಜೆ) ಎಂಬ ಸಂಘಟನೆಗೆ ಸೇರಿದವರು. ಈ ಭೀಕರ ದಾಳಿಯ ಹಿಂದೆ ಇದೇ ಇಸ್ಲಾಮಿಕ್‌ ಸಂಘಟನೆಯ ಕೈವಾಡವಿದೆ ಎಂದು ಲಂಕಾ ಸರಕಾರದ ವಕ್ತಾರರಾದ ರಜಿತ ಸೇನರತ್ನೆ ತಿಳಿಸಿದ್ದಾರೆ. ಅಲ್ಲದೆ, ಎನ್‌ಟಿಜೆ ಸಂಘಟನೆಗೆ ಅಂತಾರಾಷ್ಟ್ರೀಯ ಬೆಂಬಲ ಸಿಕ್ಕಿತ್ತೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಈ ದಾಳಿಯು 7 ಮಂದಿ ಆತ್ಮಾಹುತಿ ಬಾಂಬರ್‌ಗಳ ಕೃತ್ಯ ಎಂದೂ ತಿಳಿಸಿದ್ದಾರೆ.

Advertisement

ತುರ್ತು ಪರಿಸ್ಥಿತಿ ಹೇರಿಕೆ
ದಾಳಿ ಹಿನ್ನೆಲೆಯಲ್ಲಿ ಸೋಮವಾರ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ನೇತೃತ್ವದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ನಡೆದಿದ್ದು, ಸೋಮವಾರ ರಾತ್ರಿಯಿಂದ ಅನ್ವಯವಾಗುವಂತೆ ಶ್ರೀಲಂಕಾದ್ಯಂತ ತುರ್ತು ಪರಿಸ್ಥಿತಿ ಹೇರಲಾಗಿದೆ. ಇದು ಷರತ್ತುಬದ್ಧ ತುರ್ತು ಪರಿಸ್ಥಿತಿಯಾಗಿದ್ದು, ಭಯೋತ್ಪಾದನೆ ನಿಗ್ರಹ ಕಾರ್ಯಕ್ಕೆ ಸೀಮಿತವಾಗಿರುತ್ತದೆ. ಸಾರ್ವಜನಿಕರ ಭದ್ರತೆಗಾಗಿ ಕ್ರಮ ಕೈಗೊಳ್ಳಲು ಪೊಲೀಸರು ಮತ್ತು ಇತರ ಭದ್ರತಾ ಪಡೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ ಎಂದೂ ತಿಳಿಸಲಾಗಿದೆ. ಅಲ್ಲದೆ, ಮಂಗಳವಾರವನ್ನು ರಾಷ್ಟ್ರೀಯ ಶೋಕಾಚರಣೆ ದಿನ ಎಂದು ಘೋಷಿಸಲಾಗಿದೆ.

87 ಡಿಟೋನೇಟರ್‌ ಪತ್ತೆ; ಮತ್ತೂಂದು ಸ್ಫೋಟ
ಮಾರಕ ದಾಳಿಯ ಆಘಾತದಲ್ಲಿರುವಾಗಲೇ ಕೊಲಂಬೊದ ಬಸ್‌ ನಿಲ್ದಾಣವೊಂದರಲ್ಲಿ ಸೋಮವಾರ ಬರೋಬ್ಬರಿ 87 ಬಾಂಬ್‌ ಡಿಟೋನೇಟರ್‌ಗಳು ಪತ್ತೆಯಾಗಿವೆ. ಆರಂಭದಲ್ಲಿ ಪೆಟ್ಟಾಹ್‌ ಪ್ರದೇಶದಲ್ಲಿ 12 ಡಿಟೋನೇಟರ್‌ಗಳು ಕಂಡುಬಂದಿದ್ದು, ಸರಿಯಾಗಿ ಶೋಧ ನಡೆಸಿದಾಗ ಮತ್ತೆ 75 ಸಿಕ್ಕಿವೆ. ಕೂಡಲೇ ಅಲ್ಲಿಗೆ ಆಗಮಿಸಿದ ಬಾಂಬ್‌ ನಿಷ್ಕ್ರಿಯ ತಂಡವು ಇವುಗಳೆಲ್ಲವನ್ನೂ ನಿಷ್ಕ್ರಿಯಗೊಳಿಸಿದೆ. ಇದೇ ವೇಳೆ, ಕೋಟೆಹೇನಾ ಪ್ರದೇಶದಲ್ಲಿ ರವಿವಾರ ದಾಳಿಗೊಳಗಾದ ಚರ್ಚ್‌ ಸಮೀಪ ವ್ಯಾನ್‌ವೊಂದರಲ್ಲಿ ಬಾಂಬ್‌ ಪತ್ತೆಯಾಗಿದ್ದು, ಅದನ್ನು ನಿಷ್ಕ್ರಿಯಗೊಳಿಸುವಾಗ ಅದು ಸ್ಫೋಟಗೊಂಡಿದೆ. ಆದರೆ, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next