ಕೊಲಂಬೋ: ಜುಲೈ ಕೊನೆ ಭಾಗದಿಂದ ಆಗಸ್ಟ್ ಮಧ್ಯಭಾಗದವರೆಗೆ ಶ್ರೀಲಂಕಾದಲ್ಲಿ ಸಂಸತ್ ಚುನಾವಣೆಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕೋವಿಡ್ ವಿರುದ್ಧ ಸುರಕ್ಷೆ ಕೈಗೊಳ್ಳಲು ಅಣಕು ಮತದಾನ ನಡೆಸಲಾಯಿತು.
ಕೋವಿಡ್ ವಿರುದ್ಧ ಸುರಕ್ಷೆಯನ್ನು ಹೇಗೆ ಕೈಗೊಳ್ಳಬಹುದು? ಮತದಾನ ಕೇಂದ್ರಗಳಲ್ಲಿ ಹೇಗಿರಬೇಕು? ಜನರ ನಿಯಂತ್ರಣ, ಮತ ಚಲಾವಣೆ ವಿಧಾನ ಇತ್ಯಾದಿಗಳ ಬಗ್ಗೆ ಪರಿಶೀಲಿಸಲು ಇದನ್ನು ನಡೆಸಲಾಗಿದೆ.
ಶ್ರೀಲಂಕಾದಲ್ಲಿ ಸಂಸತ್ ಚುನಾವಣೆ ಎ.25ರಂದು ನಡೆಯಬೇಕಿದ್ದು ಆದರೆ ಕೋವಿಡ್ ಪ್ರಕರಣಗಳು ಹೆಚ್ಚಾದ್ದರಿಂದ ಅದನ್ನು ಮುಂದೂಡಲಾಗಿತ್ತು. ಮಾ.20ರಂದು ಲಾಕ್‌ಡೌನ್ ಘೋಷಿಸಲಾಗಿದ್ದು, ಜೂ.20ರಂದು ಚುನಾವಣೆ ನಡೆಸಲು ಉದ್ದೇಶಿಸಲಾಗಿತ್ತು. ಈವರೆಗೆ ಶ್ರೀಲಂಕಾದಲ್ಲಿ 1900 ಮಂದಿಗೆ ಕೋವಿಡ್ ತಗುಲಿದೆ.
ಗಾಲೆ ಜಿಲ್ಲೆಯ ಆ್ಯಂಬ್ಲಿನ್‌ಗೊಂಡಾ ಎಂಬಲ್ಲಿ ಸುಮಾರು 200 ಮತದಾರರನ್ನು ಬಳಸಿ ಅಣಕು ಮತದಾನ ನಡೆಸಲಾಗಿದೆ.
ಪ್ರತಿಯೊಂದು ಮತದಾರರಿಗೆ ಮುಂಚಿತವಾಗಿ ತಿಳಿಸಿ ಮಾಸ್ಕ್ ಹಾಕಿಕೊಂಡು ಬರಲು ಮತ್ತು ಅವರೇ ಒಂದು ಪೆನ್ ತರಲು ಹೇಳಲಾಗಿತ್ತು. ಮತದಾನ ಕೇಂದ್ರದಲ್ಲಿ ಸಾಮಾಜಿಕ ಅಂತರ, ಕೈತೊಳೆಯಲು ವ್ಯವಸ್ಥೆ, ಸ್ಯಾನಿಟೈಸರ್‌ಗಳನ್ನು ಇಡಲಾಗಿತ್ತು.
ಜತೆಗೆ ಮಾಸ್ಕ್ ಇಲ್ಲದವರಿಗೆ ಮಾಸ್ಕ್ ಗಳನ್ನೂ ನೀಡಲಾಯಿತು. ಮತದಾನಕ್ಕೆ ಪೇಪರ್‌ಗಳನ್ನು ನೀಡುವುದು ಮತ್ತು ಸೀಲ್ ಹಾಕುವುದು ಇತ್ಯಾದಿ ಪ್ರಕ್ರಿಯೆಗಳು ಇರುವುದರಿಂದ ಮತಗಟ್ಟೆಯ ಅಧಿಕಾರಿಗಳೂ ಕೈಗೆ ಗ್ಲೌಸ್ ಮತ್ತು ಮುಖಕ್ಕೆ ಪ್ಲಾಸ್ಟಿಕ್ ಶೀಲ್ಡ್ ಇಡುವುದನ್ನು ಕಡ್ಡಾಯ ಮಾಡಲಾಗಿತ್ತು. ಮತದಾನದ ಪ್ರಕ್ರಿಯೆಗಳನ್ನು ಮುಖ್ಯ ಚುನಾವಣ ಆಯುಕ್ತ ಮಹಿಂದಾ ದೇಶಪ್ರಿಯಾ ಅವರು ಪರಿಶೀಲಿಸಿದ್ದಾರೆ. ಕೋವಿಡ್ ಸಂದರ್ಭ ಸುರಕ್ಷಿತ ಚುನಾವಣೆ ನಡೆಸುವುದು ಆದ್ಯತೆಯಾಗಿದ್ದು, ಅದನ್ನು ಹೇಗೆ ನಡೆಸಬಹುದು ಎಂಬುದನ್ನು ಪ್ರಾಯೋಗಿಕವಾಗಿ ಇಲ್ಲಿ ಪರಿಶೀಲಿಸಲಾಗಿದೆ ಎಂದು ಹಿರಿಯ ಚುನಾವಣಾಧಿಕಾರಿಯೊಬ್ಬರು ಹೇಳಿದ್ದಾರೆ.
ಇದೇ ವೇಳೆ ಕೋವಿಡ್ ಸಂದರ್ಭದಲ್ಲಿ ಚುನಾವಣೆ ನಡೆಸುವುದಕ್ಕೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಇದರಿಂದ ಕಾಯಿಲೆ ಇನ್ನಷ್ಟು ಹರಡಬಹುದು ಎಂದು ಹೇಳಿವೆ.
ಶ್ರೀಲಂಕಾದಲ್ಲಿ ಸುಮಾರು 16 ಲಕ್ಷ ಮತದಾರರಿದ್ದಾರೆ. 225 ಮಂದಿ ಪ್ರತಿನಿಧಿಗಳಿರುವ ಸಂಸತ್ತು ಇದಾಗಿದೆ.