ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಕುಟುಂಬದ ನಿಷ್ಠಾವಂತ; ಜೊಹಾನ್ಸೆನ್ ಫೆರ್ನಾಂಡೊ ಬಂಧನದಿಂದ ಪಾರಾಗಲು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಮೇ 9ರಂದು ನಡೆದ ಹಿಂಸಾಚಾರಕ್ಕೆ ಜೊಹಾನ್ಸೆನ್ ಅವರೇ ನೇರ ಕಾರಣ ಎಂದು ಆರೋಪಿಸಲಾಗಿದೆ. ಶ್ರೀಲಂಕಾ ಸಿಐಡಿ ತಂಡ ಮೇ 24ರಂದು ಅವರನ್ನು ವಿಚಾರಣೆಗೊಳಪಡಿಸಿದೆ.
ಮೇ 9ರಂದು ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟನ್ನು ವಿರೋಧಿಸಿ ಜನರು ಶಾಂತಿಯಿಂದ ಪ್ರತಿಭಟನೆ ನಡೆಸುತ್ತಿದ್ದರು. ಆ ವೇಳೆ ಪ್ರತಿಭಟನಾಕಾರರ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ. ಇದಕ್ಕೆ ಫೆರ್ನಾಂಡೊ ಪ್ರಚೋದನೆಯೇ ಕಾರಣ ಎನ್ನಲಾಗಿದೆ.
ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಪ್ರತಿದಾಳಿ ನಡೆಸಿದರು. ಇದು ದೇಶಾದ್ಯಂತ ಗಲಭೆಗಳು ನಡೆಯಲು ಪ್ರೇರಣೆಯಾಯಿತು. ಈ ಪ್ರತಿದಾಳಿಗಳಲ್ಲಿ 10 ಮಂದಿ ಕೊಲ್ಲಲ್ಪಟ್ಟಿದ್ದಾರೆ. ಇದರಲ್ಲಿ ಫೆರ್ನಾಂಡೊ ಸಂಸತ್ ಸಹೋದ್ಯೋಗಿಯೂ ಒಬ್ಬರು!
ನ್ಯಾಯಾಲಯ ಫೆರ್ನಾಂಡೊ ಅವರ ಅರ್ಜಿಯನ್ನು ಸ್ವೀಕರಿಸಿದೆ. ಯಾವಾಗ ವಿಚಾರಣೆ ಎನ್ನುವುದು ಸ್ಪಷ್ಟವಾಗಿಲ್ಲ. ಈ ನಡುವೆ ಸಚಿವರ ಬಂಧನವಾದರೂ ಅಚ್ಚರಿಯಿಲ್ಲ.
ಶೀಘ್ರ ಲಂಕಾಕ್ಕೆ ಬನ್ನಿ: ಐಎಂಎಫ್ ಗೆ ವಿಕ್ರಮಸಿಂಘೆ ಆಗ್ರಹ
ಆರ್ಥಿಕ ಮುಗ್ಗಟ್ಟಿನಿಂದ ತೊಳಲಾಡುತ್ತಿರುವ ಶ್ರೀಲಂಕಾಕ್ಕೆ ಬೇಗ ಬಂದು ಪರಿಸ್ಥಿತಿ ಪರಿಶೀಲಿಸಿ, ಆಗ ಬೇಗ ಒಂದು ಒಪ್ಪಂದ ಮಾಡಿಕೊಳ್ಳಬಹುದು ಎಂದು ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಐಎಂಎಫ್ ಗೆ ಆಗ್ರಹಿಸಿದ್ದಾರೆ. ಸದ್ಯ ಲಂಕಾ ಐಎಂಎಫ್ ನಿಂದ 6 ಬಿಲಿಯನ್ ಡಾಲರ್ ಸಾಲವನ್ನು ನಿರೀಕ್ಷೆ ಮಾಡುತ್ತಿದೆ.