Advertisement

ಸಂಭ್ರಮದ ದಿನವೇ ಸಾವಿನ ನರ್ತನ

09:22 AM Apr 23, 2019 | Sriram |

ಕೊಲಂಬೋ: ಅದು ಶ್ರೀಲಂಕಾದ ಪಶ್ಚಿಮ ಕರಾವಳಿ ಭಾಗದ ನೆಗೊಂಬೋ ಪಟ್ಟಣದಲ್ಲಿರುವ ಸೈಂಟ್‌ ಸೆೆಬಾಸ್ಟಿಯನ್ಸ್‌ ಚರ್ಚ್‌. ಈಸ್ಟರ್‌ ಹಬ್ಬವಾದ ಕಾರಣ ಮುಂಜಾನೆಯೇ ಕ್ರಿಶ್ಚಿಯನ್‌ ಸಮುದಾಯದ ನೂರಾರು ಮಂದಿ ವಿಶೇಷ ಪ್ರಾರ್ಥನೆಯಲ್ಲಿ ತೊಡಗಿದ್ದರು. ಪುಟಾಣಿ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೆ ಎಲ್ಲರೂ ಹಬ್ಬದ ಸಂಭ್ರಮದಲ್ಲಿದ್ದರು. ಆದರೆ, ಇನ್ನೇನು ಕೆಲವೇ ಕ್ಷಣಗಳಲ್ಲಿ ತಾವು ನಿಂತಿರುವ ಸ್ಥಳವು ರುದ್ರ ಭೂಮಿಯಾಗಿ ಬದಲಾಗುತ್ತೆ ಎಂದು ಅವರ್ಯಾರೂ ಭಾವಿಸಿರಲಿಕ್ಕಿಲ್ಲ.

Advertisement

ಹೌದು, ಹಲವು ದಶಕಗಳ ಕಾಲ ನಾಗರಿಕ ಯುದ್ಧ ಹಾಗೂ ಜನಾಂಗೀಯ ಸಂಘರ್ಷದ ವೇದನೆಗಳನ್ನು ಅನುಭವಿಸಿ, ಕೊನೆಗೆ ಎಲ್ಲ ಹಿಂಸೆಗಳಿಗೂ ವಿದಾಯ ಹೇಳಿ ಶಾಂತಿಯ ಬೆಳಕಿನಲ್ಲಿ ತಣ್ಣಗೆ ಜೀವಿಸುತ್ತಿದ್ದ ರಾಷ್ಟ್ರ ವೊಂದು ಇತಿಹಾಸದಲ್ಲೇ ಕಂಡರಿಯದ ಭೀಕರ ದಾಳಿಗೆ ರವಿವಾರ ಸಾಕ್ಷಿಯಾಯಿತು. ಒಂದೇ ದಿನ 8 ಕಡೆ ನಡೆದ ಭಯೋತ್ಪಾದಕ ದಾಳಿಗೆ 200ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಳ್ಳಬೇಕಾಯಿತು.

ಬೆಳಗ್ಗೆ ಸರಿಯಾಗಿ 8.45ರ ವೇಳೆಗೆ ಎಲ್ಲರೂ ಈಸ್ಟರ್‌ ಪ್ರಾರ್ಥನೆಯಲ್ಲಿ ತಲ್ಲೀನರಾಗಿರುವಂತೆಯೇ ಏಕಾಏಕಿ ಚರ್ಚಿನೊಳಗೆ ಭೀಕರ ಸ್ಫೋಟ ಸಂಭವಿಸಿತು. ಏನಾಯಿತು, ಹೇಗಾಯಿತು ಎಂದು ಅರಿಯುವಷ್ಟರಲ್ಲೇ ಅಲ್ಲಿದ್ದವರ ದೇಹಗಳು ಚಿಂದಿ ಚಿಂದಿಯಾದವು. ಚರ್ಚಿನ ಗೋಡೆಗಳು, ಛಾವಣಿಯಲ್ಲಿ ಮಾಂಸದ ಮುದ್ದೆಗಳು ಅಂಟಿಕೊಂಡವು. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಒಳಗಿದ್ದವರ ದೇಹದ ಭಾಗಗಳೂ ಚರ್ಚಿನ ಆವರಣದಲ್ಲೂ ಬಿದ್ದಿದ್ದವು. ಬದುಕುಳಿದವರ ಆಕ್ರಂದನ ಮುಗಿಲುಮುಟ್ಟಿತ್ತು. ಕ್ಷಣಮಾತ್ರದಲ್ಲೇ ದೇವಮಂದಿರ ರಕ್ತಸಿಕ್ತ ರಣಾಂಗಣವಾಗಿ ಬದಲಾಯಿತು.

ಗಾಜಿನ ಚೂರುಗಳು ದೇಹ ಹೊಕ್ಕವು: “ಆಗಷ್ಟೇ ಈಸ್ಟರ್‌ ಮಾಸ್‌ ಮುಗಿದಿತ್ತು. ಮೂವರು ಪಾದ್ರಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಸ್ಫೋಟ ಸಂಭವಿಸಿದಾಗ ಗಾಜಿನ ಚೂಪಾದ ಚೂರುಗಳು ಬಂದು ಅವರ ದೇಹ ಹೊಕ್ಕ ಕಾರಣ, ಇಬ್ಬರೂ ಗಂಭೀರವಾಗಿ ಗಾಯಗೊಂಡರು. ಒಬ್ಬರು ಮಾತ್ರ ಅಲ್ಪ ಪ್ರಮಾಣದ ಗಾಯಗಳಿಂದ ಪಾರಾದರು.

ಸ್ಫೋಟದ ತೀವ್ರತೆಗೆ ಚರ್ಚಿನ ಛಾವಣಿಯು ಸಂಪೂರ್ಣ ನಾಶವಾಗಿದ್ದು, ಟೈಲ್ಸ್‌, ಗಾಜು ಮತ್ತು ಪೀಠೊಪಕರಣದ ತುಂಡುಗಳು ರಕ್ತದೋಕುಳಿಯಲ್ಲಿ ತೊಯ್ದು ಹೋಗಿವೆ. ಈ ಘಟನೆಗೆ ಕಾರಣರಾದವರು ಕ್ಷಮೆಗೆ ಅನರ್ಹರು. ಅವರಿಗೆ ಕಠಿನ ಶಿಕ್ಷೆ ವಿಧಿಸಬೇಕು’ ಎನ್ನುತ್ತಾರೆ ಘಟನೆ ಬಗ್ಗೆ ವಿವರ ನೀಡಿದ ಪ್ರತ್ಯಕ್ಷದರ್ಶಿ ಫಾದರ್‌ ಎಡ್ಮಂಡ್‌ ತಿಲಕರತ್ನೆ.

Advertisement

ಕ್ರೂರ ಹಿಂಸೆ ಎಂದ ಪೋಪ್‌
ಈಸ್ಟರ್‌ ದಿನ ನಡೆದ ಈ ಘಟನೆಯನ್ನು “ಕ್ರೂರ ಹಿಂಸೆ’ ಎಂದು ಪೋಪ್‌ ಫ್ರಾನ್ಸಿಸ್‌ ಬಣ್ಣಿಸಿದ್ದಾರೆ. “ಪ್ರಾರ್ಥನೆಗೆಂದು ನೆರೆದಿದ್ದ ಕ್ರಿಶ್ಚಿಯನ್‌ ಸಮುದಾಯದ ಮೇಲೆ ನಡೆದ ದಾಳಿಯು ಅತ್ಯಂತ ಕ್ರೂರ ಹಿಂಸೆಯಾಗಿದ್ದು, ಈ ರಕ್ತಪಾತದಿಂದ ನೋವು ಅನುಭವಿಸುತ್ತಿರುವ ಎಲ್ಲರ ಒಳಿತಿಗಾಗಿ ನಾನು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ. ಜೆರುಸಲೇಂನ ಕೆಥೋಲಿಕ್‌ ಚರ್ಚ್‌ ಕೂಡ ದಾಳಿಯನ್ನು ಖಂಡಿಸಿದೆ. ಸಂತ್ರಸ್ತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ. ಭಯೋತ್ಪಾದಕರು ತಮ್ಮ ಕೃತ್ಯದ ಬಗ್ಗೆ ಪಶ್ಚಾತ್ತಾಪ ಪಡುವಂತೆ ಮಾಡು ಎಂದು ಭಗವಂತನಲ್ಲಿ ಕೋರುತ್ತೇವೆ ಎಂದೂ ಚರ್ಚ್‌ ಹೇಳಿದೆ.

10 ವರ್ಷಗಳ ಬಳಿಕ ಹರಿಯಿತು ನೆತ್ತರು
ಶ್ರೀಲಂಕಾವು ರಕ್ತದೋಕುಳಿಯನ್ನು ಕಂಡಿದ್ದು ಇದೇ ಮೊದಲೇನಲ್ಲ. ಪ್ರತ್ಯೇಕ ತಮಿಳು ರಾಜ್ಯಕ್ಕಾಗಿ ಲಿಬರೇಷನ್‌ ಟೈಗರ್ಸ್‌ ಆಫ್ ತಮಿಳ್‌ ಈಳಂ (ಎಲ್‌ಟಿಟಿಇ) ಎಂಬ ಬಂಡುಕೋರರ ಸಂಘಟನೆಯು ಸುಮಾರು 30 ವರ್ಷಗಳ ಕಾಲ ಶ್ರೀಲಂಕಾವನ್ನು ಹಿಂಸೆ ಹಾಗೂ ಯುದ್ಧದ ಕರಿನೆರಳಿಗೆ ನೂಕಿತ್ತು. ಈ ಅವಧಿಯಲ್ಲಿ ನಡೆದ ಜನಾಂಗೀಯ ಹಿಂಸಾಚಾರ, ನಾಗರಿಕ ಯುದ್ಧವು ಸಾವಿರಾರು ಮಂದಿಯನ್ನು ಬಲಿತೆಗೆದುಕೊಂಡಿತ್ತು. ಸರಿಯಾಗಿ 10 ವರ್ಷಗಳ ಹಿಂದೆ ಅಂದರೆ 2009ರಲ್ಲಿ ಎಲ್‌ಟಿಟಿಇ ಅಧಿನಾಯಕ ವಿ. ಪ್ರಭಾಕರನ್‌ ಕೊಲೆಯಲ್ಲಿ ಈ ರಕ್ತಸಿಕ್ತ ಇತಿಹಾಸಕ್ಕೆ ಪೂರ್ಣವಿರಾಮ ಬಿದ್ದಿತ್ತು. ತದಅನಂತರದ 10 ವರ್ಷಗಳನ್ನು ಶಾಂತಿ, ಸೌಹಾರ್ದದಿಂದ ಕಳೆದಿದ್ದ ಲಂಕೆಗೆ ಇದೀಗ ಹೊಸ ರೂಪದ ಭಯೋತ್ಪಾದನೆ ವಕ್ಕರಿಸಿದೆ.

ತಾಳ್ಮೆಯಿಂದ ಕಾಯುತ್ತಿದ್ದ ಬಾಂಬರ್‌!
ಸಿನೆಮನ್‌ ಗ್ರ್ಯಾಂಡ್‌ ಹೊಟೇಲ್‌ನಲ್ಲಿ ದಾಳಿ ನಡೆಸಿದ್ದು ಆತ್ಮಾಹುತಿ ಬಾಂಬರ್‌. ಆತ ತನ್ನ ಬೆನ್ನಿಗೆ ಹಾಕಿದ್ದ ಬ್ಯಾಗ್‌ನಲ್ಲಿ ಸ್ಫೋಟಕಗಳನ್ನು ತುಂಬಿಕೊಂಡಿದ್ದ. ಹೊಟೇಲ್‌ನಲ್ಲಿ ಈಸ್ಟರ್‌ ಸಂಡೆ ನಿಮಿತ್ತ ಬೆಳಗ್ಗೆ ಬಫೆ ಉಪಾಹಾರ ಏರ್ಪಡಿಸ ಲಾಗಿತ್ತು. ಹಿಂದಿನ ದಿನವೇ ಹೊಟೇಲ್‌ನಲ್ಲಿ ಮೊಹಮ್ಮದ್‌ ಅಜಾಂ ಮೊಹಮ್ಮದ್‌ ಎಂಬ ಹೆಸರಿನಲ್ಲಿ ನೋಂದಣಿ ಮಾಡಿಕೊಂಡಿದ್ದ ದಾಳಿಕೋರ, ಬೆಳಗ್ಗೆಯೇ ಬ್ರೇಕ್‌ಫಾಸ್ಟ್‌ಗಾಗಿ ಕಾಯುತ್ತಿದ್ದವರ ಜತೆ ಸರದಿಯಲ್ಲಿ ನಿಂತು ತಾಳ್ಮೆಯಿಂದ ಕಾಯುತ್ತಿದ್ದ. ಅನಂತರ ಏಕಾಏಕಿ ತನ್ನನ್ನು ತಾನು ಸ್ಫೋಟಿಸಿಕೊಂಡ.

ಭಾರತದ ಹೈಕಮಿಷನ್‌ ಟಾರ್ಗೆಟ್‌?
10 ದಿನಗಳ ಹಿಂದಷ್ಟೇ ಇಂಥದ್ದೊಂದು ಭೀಕರ ಆತ್ಮಾಹುತಿ ದಾಳಿ ಬಗ್ಗೆ ಶ್ರೀಲಂಕಾದ ಪೊಲೀಸ್‌ ಮುಖ್ಯಸ್ಥರು ಮುನ್ಸೂಚನೆ ನೀಡಿದ್ದರು. ಪೊಲೀಸ್‌ ಮುಖ್ಯಸ್ಥ ಪುಜುತ್‌ ಜಯಸುಂದರ ಎ. 11ರಂದು ಉನ್ನತ ಅಧಿಕಾರಿಗಳಿಗೆ ಗುಪ್ತಚರ ಮುನ್ನೆಚ್ಚರಿಕೆಯನ್ನು ರವಾನಿಸಿದ್ದಲ್ಲದೆ, ದೇಶದ ಪ್ರಮುಖ ಚರ್ಚುಗಳು ಹಾಗೂ ಕೊಲಂಬೋದಲ್ಲಿರುವ ಭಾರತೀಯ ಹೈಕಮಿಷನ್‌ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂದು ಮಾಹಿತಿ ನೀಡಿದ್ದರು. ಅಲ್ಲದೆ, ನ್ಯಾಶನಲ್‌ ತೌಹೀತ್‌ ಜಮಾತ್‌ (ಎನ್‌ಟಿಜೆ) ಎಂಬ ಸಂಘಟನೆಯೇ ಈ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದರು. ಎನ್‌ಟಿಜೆ ಎನ್ನುವುದು ಶ್ರೀಲಂಕಾದ ಮುಸ್ಲಿಂ ತೀವ್ರಗಾಮಿ ಸಂಘಟನೆಯಾಗಿದ್ದು, ಕಳೆದ ವರ್ಷ ಬೌದ್ಧ ಧರ್ಮೀಯರಿಗೆ ಸಂಬಂಧಿಸಿದ ಪ್ರತಿಮೆಗಳನ್ನು ಧ್ವಂಸಗೈದ ಪ್ರಕರಣದ ಬಳಿಕ ಇದು ಮುನ್ನೆಲೆಗೆ ಬಂದಿತ್ತು.

ವಿಶ್ವ ನಾಯಕರಿಂದ ಖಂಡನೆ
ಶ್ರೀಲಂಕಾದ ಚರ್ಚ್‌ಗಳು ಹಾಗೂ ಹೊಟೇಲ್‌ಗ‌ಳಲ್ಲಿ ನಡೆದ ಸರಣಿ ಸ್ಫೋಟಕ್ಕೆ ಭಾರತ, ಅಮೆರಿಕ, ಯುಕೆ, ರಷ್ಯಾ, ನ್ಯೂಜಿಲೆಂಡ್‌, ಪಾಕಿಸ್ಥಾನ, ಬಾಂಗ್ಲಾದೇಶ ಸಹಿತ ವಿಶ್ವಾದ್ಯಂತದ ಬಹುತೇಕ ರಾಷ್ಟ್ರಗಳು ತೀವ್ರ ಖಂಡನೆ ವ್ಯಕ್ತಪಡಿಸಿವೆ. “ಬೀಭತ್ಸ ದಾಳಿಯನ್ನು ಕಂಡ ಶ್ರೀಲಂಕಾದ ಜನತೆಗೆ ನಾನು ಹೃದಯಾಂತರಾಳದಿಂದ ಸಾಂತ್ವನ ಹೇಳಬಯಸುತ್ತೇನೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದರೆ, ಯುಕೆ ಪ್ರಧಾನಿ ಥೆರೇಸಾ ಮೇ ದಾಳಿಯನ್ನು ಆಘಾತಕಾರಿ ಎಂದು ಕರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹಾಗೂ ಪ್ರಧಾನಿ ರಣಿಲ್‌ ವಿಕ್ರಮಸಿಂಘೆ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ದಾಳಿಯನ್ನು ಅತ್ಯಂತ ಹೇಯ ಕೃತ್ಯ ಎಂದು ಬಣ್ಣಿಸಿದ್ದಾರೆ.

– ದಾಳಿ ಹಿನ್ನೆಲೆ ರವಿವಾರ ಸಂಜೆ 6ರಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಶ್ರೀಲಂಕಾದ್ಯಂತ ಕರ್ಫ್ಯೂ ಜಾರಿ

– ಎಲ್ಲ ಧಾರ್ಮಿಕ ಸ್ಥಳಗಳಲ್ಲೂ ಭದ್ರತೆ ಹೆಚ್ಚಳ

– ವದಂತಿ ಹರಡುವುದನ್ನು ತಪ್ಪಿಸಲು ಎಲ್ಲ ರೀತಿಯ ಸಾಮಾಜಿಕ ಜಾಲತಾಣಗಳಿಗೂ ನಿಷೇಧ

– ಲಂಕಾ ದಾಳಿ ಹಿನ್ನೆಲೆ ಗೋವಾದ ಎಲ್ಲ ಚರ್ಚ್‌ಗಳಲ್ಲಿಭದ್ರತೆ ಬಿಗಿ. ಹೈ ಅಲರ್ಟ್‌ ಘೋಷಣೆ

– ಎ. 24ರ ವರೆಗೆ ಕೊಲಂಬೋಗೆ ಹೋಗುವ ಮತ್ತು ಬರುವ ವಿಮಾನಗಳ ಟಿಕೆಟ್‌ ರದ್ದತಿ ಮತ್ತು ಸಮಯ ಬದಲಾವಣೆಯ ಶುಲ್ಕ ಮನ್ನಾ ಮಾಡಿದ ಏರ್‌ ಇಂಡಿಯಾ

ಲಂಕೆಯ ರಕ್ತಸಿಕ್ತ ಇತಿಹಾಸ
– 1985 ಶ್ರೀ ಮಹಾಬೋಧಿ ದಾಳಿ- ಎಲ್‌ಟಿಟಿಇ ಬಂಡುಕೋರರಿಂದ 146 ಮಂದಿಯ ಹತ್ಯೆ

– 1987 ಅಲುತ್‌ ಒಯಾ ನರಮೇಧ- ಎಲ್‌ಟಿಟಿಇ ಬಂಡುಕೋರರಿಂದ 127 ಸಿಂಹಳೀಯರ ಸಾವು

– 1987 ಸಂಸತ್‌ನಲ್ಲಿ ಗ್ರೆನೇಡ್‌ ದಾಳಿ- ಸಂಸತ್‌ ನೊಳಗೆ ಕುಳಿತಿದ್ದ ಸಂಸದರ ಮೇಲೆ ಗ್ರೆನೇಡ್‌ ಎಸೆತದಿಂದ ಇಬ್ಬರ ಸಾವು

-1987 ಬಸ್‌ನಿಲ್ದಾಣದ ಮೇಲೆ ದಾಳಿ- ಕೊಲಂಬೋದಲ್ಲಿ ಕಾರ್‌ ಬಾಂಬ್‌ ಸ್ಫೋಟಕ್ಕೆ 113 ಬಲಿ

-1990 ಕಟ್ಟಂಕುಡಿ ಮಸೀದಿ ಮೇಲೆ ದಾಳಿ- ಎಲ್‌ಟಿಟಿಇ ಉಗ್ರರಿಂದ 147 ಮುಸ್ಲಿಮರ ಹತ್ಯೆ

-1992 ಪಲ್ಲುಯಗೊಡೆಲ್ಲಾ ನರಮೇಧ- ಎಲ್‌ಟಿಟಿಇ ಉಗ್ರರಿಂದ 285 ಸಿಂಹಳೀಯರ ಹತ್ಯೆ

-1996 ಸೆಂಟ್ರಲ್‌ ಬ್ಯಾಂಕ್‌ ಬಾಂಬ್‌- ಕೊಲಂಬೋ ಸೆಂಟ್ರಲ್‌ಬಾÂಂಕ್‌ನ ಗೇಟ್‌ಗೆ ಬಾಂಬ್‌ ತುಂಬಿದ ಟ್ರಕ್‌ ಢಿಕ್ಕಿ ಹೊಡೆಸಿದ ಎಲ್‌ಟಿಟಿಇ- 91 ಸಾವು

-2006 ದಿಗಂಪಟ್ಟಣ ಬಾಂಬ್‌ ದಾಳಿ- 15 ಸೇನಾ ಬಸ್ಸುಗಳ ಮೇಲೆ ಸ್ಫೋಟಕ ತುಂಬಿದ ಟ್ರಕ್‌ ಢಿಕ್ಕಿ – 120 ಸಾವು.

Advertisement

Udayavani is now on Telegram. Click here to join our channel and stay updated with the latest news.

Next