ಕೊಲಂಬೋ(Colombo): ಆರ್ಥಿಕ ಸಂಕಷ್ಟದಿಂದ ನಲುಗಿ ಹೋಗಿರುವ ದ್ವೀಪರಾಷ್ಟ್ರ ಶ್ರೀಲಂಕಾದ ಸಂಸತ್ ಚುನಾವಣೆಯ ಮತಎಣಿಕೆ ಶುಕ್ರವಾರ (ನ.15) ಆರಂಭಗೊಂಡಿದ್ದು, ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರಾ ದಿಸ್ಸಾನಾಯಕೆ ನೇತೃತ್ವದ ಎಡಪಕ್ಷದ ಮೈತ್ರಿಕೂಟ ಭರ್ಜರಿ ಬಹುಮತದ ಜಯಗಳಿಸಿದೆ ಎಂದು ವರದಿ ತಿಳಿಸಿದೆ.
ಎರಡು ವರ್ಷದ ಬಳಿಕ ಆರ್ಥಿಕ ಸ್ಥಿತಿ ಒಂದು ಹಂತಕ್ಕೆ ಮರಳುತ್ತಿರುವ ಸಂದರ್ಭದಲ್ಲಿ ಸೆಪ್ಟೆಂಬರ್ ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುವ ವೇಳೆ ದಿಸ್ಸಾನಾಯಕೆ ಅವರು, ಭ್ರಷ್ಟಾಚಾರ ನಿಗ್ರಹಿಸಿ, ಕದ್ದೊಯ್ದ ಆಸ್ತಿ-ಪಾಸ್ತಿಯನ್ನು ವಶಪಡಿಸಿಕೊಳ್ಳುವ ಭರವಸೆ ನೀಡಿದ್ದರು.
ಬಳಿಕ ಶೀಘ್ರವೇ ಸಂಸತ್ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ 225 ಸದಸ್ಯ ಬಲದ ಸಂಸತ್ ಚುನಾವಣೆಯಲ್ಲಿ ನ್ಯಾಷನಲ್ ಪೀಪಲ್ಸ್ ಪವರ್ (NPP)ಮೈತ್ರಿಕೂಟ ಕನಿಷ್ಠ 123 ಸ್ಥಾನಗಳಿಸಿ ಜಯಭೇರಿ ಬಾರಿಸಿದ್ದು, ಮತಎಣಿಕೆ ಬಾಕಿ ಇದ್ದು, ಇನ್ನಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ವಿವರಿಸಿದೆ.
ಈವರೆಗೆ ಹಲವು ಸುತ್ತಿನ ಮತಎಣಿಕೆ ನಡೆದಿದ್ದು, ಕುಮಾರಾ ದಿಸ್ಸಾನಾಯಕೆ ಮೈತ್ರಿಕೂಟ ಶೇ.62ರಷ್ಟು ಮತಗಳಿಸಿದೆ. ವಿಪಕ್ಷ ನಾಯಕ ಸಾಜಿತ್ ಪ್ರೇಮಾದಾಸ್ ಅವರ ಪಕ್ಷ ಕೇವಲ ಶೇ.18ರಷ್ಟು ಮತಗಳಿಸಿದೆ.
ಭ್ರಷ್ಟಾಚಾರವನ್ನು ಮಟ್ಟಹಾಕಲು ಹಾಗೂ ಭ್ರಷ್ಟಾಚಾರ ವ್ಯವಸ್ಥೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜನರು ಮತ ಚಲಾಯಿಸಿರುವುದಾಗಿ ಐಟಿ ಉದ್ಯೋಗಿ ಚಾಣಕ್ಯ ರಾಜಪಕ್ಸ ಎಎಫ್ ಪಿಗೆ ತಿಳಿಸಿದ್ದು, ಚಾಣಕ್ಯ ಚುನಾವಣೆಯಲ್ಲಿ ಎನ್ ಪಿಪಿಯನ್ನು ಬೆಂಬಲಿಸಿರುವುದಾಗಿ ತಿಳಿಸಿದ್ದಾರೆ.
ಕುಮಾರಾ ದಿಸ್ಸಾನಾಯಕೆ(55ವರ್ಷ) ಕಾರ್ಮಿಕನ ಪುತ್ರ. ಎಡಪಂಥೀಯ ಒಲವು ಹೊಂದಿರುವ ಕುಮಾರಾ ಶ್ರೀಲಂಕಾದ ಏಳಿಗೆಗೆ ಶ್ರಮಿಸುವುದಾಗಿ ಈ ಹಿಂದೆ ಭರವಸೆ ನೀಡಿದ್ದರು. ಸಂಸತ್ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ನಿರೀಕ್ಷೆ ಇದ್ದಿರುವುದಾಗಿ ದಿಸ್ಸಾನಾಯಕೆ ಪ್ರತಿಕ್ರಿಯೆ ನೀಡಿದ್ದಾರೆ.