Advertisement

ಹೊತ್ತಿ ಉರಿದ ಲಂಕೆ; ಸರಕಾರದ ಪರ-ವಿರೋಧಿ ಪ್ರತಿಭಟನಕಾರರ ನಡುವೆ ಘರ್ಷಣೆ

12:23 AM May 10, 2022 | Team Udayavani |

ಕೊಲೊಂಬೋ: ಹಿಂದೆಂದೂ ಕಂಡಿರದಂಥ ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ಶ್ರೀಲಂಕಾ ಸೋಮವಾರ ಏಕಾಏಕಿ ಹೊತ್ತಿ ಉರಿಯತೊಡಗಿದೆ.

Advertisement

ಸರಕಾರ‌ದ ಪರ ಹಾಗೂ ವಿರೋಧಿ ಪ್ರತಿಭಟನಕಾರರ ನಡುವೆ ನಡೆದ ಘರ್ಷಣೆಯು ಭಾರೀ ಹಿಂಸಾಚಾರಕ್ಕೆ ತಿರುಗಿದ್ದು, ಕನಿಷ್ಠ ಮೂವರು ಮೃತಪಟ್ಟು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಶ್ರೀಲಂಕಾ ಪ್ರಧಾನಿ ಮಹೀಂದಾ ರಾಜಪಕ್ಸ ಅವರು ರಾಜೀನಾಮೆ ನೀಡುವ ಸ್ವಲ್ಪ ಹೊತ್ತಿಗೆ ಮುನ್ನ ಈ ಎಲ್ಲ ಘಟನೆಗಳು ನಡೆದಿವೆ. ಆರ್ಥಿಕ ಬಿಕ್ಕಟ್ಟಿನಿಂದ ಜನರನ್ನು ರಕ್ಷಿಸುವಲ್ಲಿ ವಿಫ‌ಲವಾದ ಅಧ್ಯಕ್ಷ ಗೋಟಬಯ ರಾಜೀ ನಾಮೆ ನೀಡಬೇಕೆಂದು ಒತ್ತಾಯಿಸಿ ಎ.9 ರಿಂದಲೇ ಅಧ್ಯಕ್ಷರ ನಿವಾಸದ ಮುಂದೆ ಶಾಂತಿಯುತ ಪ್ರತಿಭಟನೆ ನಡೆಯುತ್ತಿತ್ತು.

ಸೋಮವಾರ ಮಹೀಂದಾ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆಯೇ, ಅವರ ಬೆಂಬಲಿಗರು ಏಕಾಏಕಿ ಅಧ್ಯಕ್ಷರ ಮನೆ ಮುಂದೆ ಪ್ರತಿಭಟಿಸುತ್ತಿದ್ದವರ ಮೇಲೆ ದಾಳಿ ಮಾಡಿದ್ದಾರೆ.

ಬಸ್‌ಗಳಲ್ಲಿ ಬಂದರು: ಲಂಕಾದ ಗ್ರಾಮೀಣ ಪ್ರದೇಶ ಗಳಿಂದ ಸರಕಾರದ ಬೆಂಬಲಿಗರಗಳನ್ನು ಸಾಲು ಸಾಲು ಬಸ್‌ಗಳಲ್ಲಿ ಕರೆತರಲಾಗಿತ್ತು. ಅಧ್ಯಕ್ಷರ ನಿವಾಸದ ಮುಂದೆ ಬಂದು ನಿಂತ ಬಸ್‌ಗಳಿಂದ ಇಳಿದ ಸಾವಿ ರಾರು ಮಂದಿ ಏಕಾಏಕಿ ಪ್ರತಿಭಟನಕಾರರ ಮೇಲೆರಗಿ ದರು. ಅಲ್ಲಿದ್ದ ಟೆಂಟ್‌ಗಳು, ಸರಕಾರ‌ ವಿರೋಧಿ ಬ್ಯಾನ ರ್‌ ಗಳನ್ನು ಕಿತ್ತುಹಾಕಿದರು. ಕೂಡಲೇ ಪೊಲೀಸರು ಅಶ್ರು ವಾಯು ಸಿಡಿಸಿ, ಜಲಫಿರಂಗಿ ಪ್ರಯೋಗಿಸಿ ಕರ್ಫ್ಯೂ ಘೋಷಿಸಿದರೂ ಜನರನ್ನು ಚದುರಿಸಲು ಸಾಧ್ಯವಾಗಲಿಲ್ಲ. ಕೊನೆಗೆ ದೇಶವ್ಯಾಪಿ ಕರ್ಫ್ಯೂ ಘೋಷಿಸಿ, ಕೊಲೊಂ ಬೋಗೆ ಸೇನಾಪಡೆಯನ್ನು ರವಾನಿಸಲಾಯಿತು.

Advertisement

ಕೂಡಲೇ ಏರ್‌ಪೋರ್ಟ್‌ ತಲುಪಿ
ರಾಷ್ಟ್ರವ್ಯಾಪಿ ಕರ್ಫ್ಯೂ ಘೋಷಣೆಯಾಗುತ್ತಿದ್ದಂತೆಯೇ, “ಚೆಕ್‌ಪಾಯಿಂಟ್‌ಗಳಲ್ಲಿ ನಿಮ್ಮ ಪಾಸ್‌ಪೋರ್ಟ್‌ ಹಾಗೂ ವಿಮಾನ ಟಿಕೆಟ್‌ ಅನ್ನು ತೋರಿಸಿ ಈ ಕೂಡಲೇ ಬಂಡಾರನಾಯಿಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿ’ ಎಂದು ಪ್ರಯಾಣಿಕರಿಗೆ ಶ್ರೀಲಂಕಾ ಏರ್‌ಲೈನ್ಸ್‌ ಸೂಚನೆ ಕೊಟ್ಟಿದೆ. ಟಿಕೆಟ್‌ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ವಿಶೇಷವಾಗಿ ದ್ವೀಪರಾಷ್ಟ್ರಕ್ಕೆ ಭೇಟಿ ನೀಡಿರುವ ವಿದೇಶಿ ಪ್ರವಾಸಿಗರಿಗೆ ಇಂಥದ್ದೊಂದು ಸೂಚನೆ ನೀಡಲಾಗಿದೆ. ಎಲ್ಲರನ್ನೂ ಸುರಕ್ಷಿತವಾಗಿ ಅವರವರ ದೇಶಕ್ಕೆ ಕಳುಹಿಸುವ ಉದ್ದೇಶದಿಂದ ಈ ಸಂದೇಶ ಕಳುಹಿಸಲಾಗಿದೆ ಎಂದು ಏರ್‌ಲೈನ್ಸ್‌ ತಿಳಿಸಿದೆ.

ಮಾಜಿ ಸಚಿವರ ಮನೆಗಳಿಗೆ ಬೆಂಕಿ
ಶ್ರೀಲಂಕಾದ ಶಾಸಕರು, ಮಾಜಿ ಸಚಿವರ ಮನೆಗಳಿಗೆ ಸೋಮ ವಾರ ಸಂಜೆ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ. ಹಲವು ಕಟ್ಟಡಗಳು, ಮನೆಗಳು ಹೊತ್ತಿ ಉರಿಯುತ್ತಿ ರುವಂಥ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಬೆಳಗ್ಗೆ ಪ್ರಧಾನಿಯವರ ನಿವಾಸದಲ್ಲಿ ಸೇರಿದ್ದ ಈ ದುಷ್ಕರ್ಮಿಗಳು, ಅಲ್ಲಿಂದ ನೇರವಾಗಿ ಹೋಗಿ ಶಾಂತಿಯುತ ಪ್ರತಿಭಟನಕಾರರ ಮೇಲೆ ದಾಳಿ ಮಾಡಿದ್ದಾರೆ. ಇಂಥದ್ದು ನಡೆಯಲು ಹೇಗೆ ಸಾಧ್ಯ? ಪೊಲೀಸರು ಮೂಕಪ್ರೇಕ್ಷಕರಾಗಿ ನಿಂತಿದ್ದೇಕೆ?
-ಮಹೇಲ ಜಯವರ್ದೆನ, ಲಂಕಾ ಕ್ರಿಕೆಟಿಗ

ಯಾವುದೇ ಪಕ್ಷದವರಾಗಿರಲಿ, ಗಲಭೆಗೆ ಪ್ರಚೋದನೆ ನೀಡುವುದು, ಹಿಂಸಾಚಾರದಲ್ಲಿ ತೊಡಗುವುದನ್ನು ನಾನು ಖಂಡಿಸುತ್ತೇನೆ. ಹಿಂಸೆಯಿಂದ ಯಾವುದೇ ಸಮಸ್ಯೆಗೂ ಪರಿಹಾರ ಸಿಗದು.
-ಮಹಿಂದಾ ರಾಜಪಕ್ಸ,
ನಿರ್ಗಮಿತ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next