Advertisement

ಏಕದಿನ: ಜಿಂಬಾಬ್ವೆ ವಿರುದ್ಧ ಲಂಕಾಗೆ 2-1ರ ಮುನ್ನಡೆ

03:50 AM Jul 07, 2017 | Team Udayavani |

ಹಂಬಂತೋಟ: ಆತಿಥೇಯ ಶ್ರೀಲಂಕಾ ಎದುರಿನ 3ನೇ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ 310 ರನ್‌ ಪೇರಿಸಿಯೂ ಸೋತಿದೆ. ಆರಂಭಿಕರ ಶತಕದಾಟ ಹಾಗೂ ದ್ವಿಶತಕದ ಜತೆಯಾಟದ ಸಾಹಸದಿಂದ ಲಂಕಾ 8 ವಿಕೆಟ್‌ ಜಯದೊಂದಿಗೆ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.

Advertisement

ಗುರುವಾರ ಹಂಬಂತೋಟದಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಜಿಂಬಾಬ್ವೆ, ಓಪನರ್‌ ಹ್ಯಾಮಿಲ್ಟನ್‌ ಮಸಕಝ ಅವರ ಶತಕದ ನೆರವಿನಿಂದ 8 ವಿಕೆಟಿಗೆ 310 ರನ್‌ ಪೇರಿಸಿ ಸವಾಲೊಡ್ಡಿತು. ಆದರೆ ಯಾವುದೇ ಒತ್ತಡವಿಲ್ಲದೆ ಈ ಮೊತ್ತವನ್ನು ಬೆನ್ನಟ್ಟತೊಡಗಿದ ಶ್ರೀಲಂಕಾ 47.2 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 312 ರನ್‌ ಬಾರಿಸಿ ಸತತ 2ನೇ ಜಯ ದಾಖಲಿಸಿತು. ಮೊದಲ ಪಂದ್ಯವನ್ನು ಜಿಂಬಾಬ್ವೆ ಗೆದ್ದಿತ್ತು.

ಮೊದಲ ವಿಕೆಟಿಗೆ 229 ರನ್‌
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಲಂಕೆಗೆ ಎಡಗೈ ಆರಂಭಿಕರಾದ ನಿರೋಷನ್‌ ಡಿಕ್ವೆಲ್ಲ ಮತ್ತು ದನುಷ್ಕ ಗುಣತಿಲಕ ಅವರ ದ್ವಿಶತಕದ ಜತೆಯಾಟ ಆಸರೆಯಾಯಿತು. ಭರ್ತಿ 37 ಓವರ್‌ಗಳನ್ನು ಯಾವುದೇ ಒತ್ತಡವಿಲ್ಲದೆ ನಿಭಾಯಿಸಿದ ಇವರು 229 ರನ್‌ ಪೇರಿಸಿದರು. ಇದು ಶ್ರೀಲಂಕಾ ಏಕದಿನ ಇತಿಹಾಸದಲ್ಲಿ ಮೊದಲ ವಿಕೆಟಿಗೆ ದಾಖಲಾದ 10ನೇ ದ್ವಿಶತಕದ ಜತೆಯಾಟ. ಇಂಗ್ಲೆಂಡ್‌ ಎದುರಿನ 2006ರ ಲೀಡ್ಸ್‌ ಪಂದ್ಯದಲ್ಲಿ ಸನತ್‌ ಜಯಸೂರ್ಯ-ಉಪುಲ್‌ ತರಂಗ 286 ರನ್‌ ಪೇರಿಸಿದ್ದು ದಾಖಲೆ.

ಈ ಮ್ಯಾರಥಾನ್‌ ಜತೆಯಾಟದ ವೇಳೆ ಇಬ್ಬರೂ ತಮ್ಮ ಮೊದಲ ಶತಕ ಸಂಭ್ರವನ್ನಾಚರಿಸಿದರು. 17ನೇ ಏಕದಿನ ಪಂದ್ಯವಾಡಿದ ಡಿಕ್ವೆಲ್ಲ ಗಳಿಕೆ 116 ಎಸೆತಗಳಿಂದ 102 ರನ್‌. ಇದು 14 ಬೌಂಡರಿಗಳನ್ನೊಳಗೊಂಡಿತ್ತು. 24ನೇ ಪಂದ್ಯದಲ್ಲಿ ಕಾಣಿಸಿಕೊಂಡ ಗುಣತಿಲಕ 111 ಎಸೆತಗಳಿಂದ 116 ರನ್‌ ಬಾರಿಸಿ ಪಂದ್ಯಶ್ರೇಷ್ಠರೆನಿಸಿದರು. ಇದರಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿತ್ತು. ಏಕದಿನ ಚರಿತ್ರೆಯಲ್ಲಿ ಆರಂಭಿಕರಿಬ್ಬರು ಒಂದೇ ಪಂದ್ಯದಲ್ಲಿ ಶತಕ ದಾಖಲಿಸಿದ 34ನೇ ದೃಷ್ಟಾಂತ ಇದಾಗಿದೆ. ಉಪುಲ್‌ ತರಂಗ (44) ಮತ್ತು ಕುಸಲ್‌ ಮೆಂಡಿಸ್‌ (28) ಔಟಾಗದೆ ಉಳಿದರು.

ಮಸಕಝ 5ನೇ ಶತಕ
ಜಿಂಬಾಬ್ವೆಯ ಮೊತ್ತ ಮುನ್ನೂರರ ಗಡಿ ದಾಟಿಸುವಲ್ಲಿ ಮುಖ್ಯ ಪಾತ್ರ ವಹಿಸಿದವರು ಆರಂಭಕಕಾರ ಹ್ಯಾಮಿಲ್ಟನ್‌ ಮಸಕಝ. 176ನೇ ಪಂದ್ಯವಾಡಲಿಳಿದ ಅವರು 111 ರನ್‌ ಬಾರಿಸಿ 5ನೇ ಶತಕದೊಂದಿಗೆ ಮಿಂಚಿದರು. 98 ಎಸೆತಗಳ ಈ ಆಟದಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಯಲ್ಪಟ್ಟಿತು. ಆದರೆ ಈ ಶತಕ ಫ‌ಲ ಕೊಡಲಿಲ್ಲ.

Advertisement

ಮುಸಕಂಡ 48, ವಿಲಿಯಮ್ಸ್‌ 43 ರನ್‌ ಮಾಡಿದರು. ಸರಣಿಯ 4ನೇ ಪಂದ್ಯ ಶನಿವಾರ ಇದೇ ಅಂಗಳದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next