ಮುಂಬಯಿ: ಶ್ರೀ ಮದ್ಭಾರತ ಮಂಡಳಿ ಮುಂಬಯಿ ಇದರ ಸಂಚಾಲಕತ್ವದ ಶ್ರೀ ಲಕ್ಷ್ಮೀನಾರಾಯಣ ಮಂದಿರದ ಹದಿನಾರನೇ ವಾರ್ಷಿಕ ವರ್ಧಂತಿ ಮಹೋತ್ಸವವು ಮಾ. 29 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಅಂಧೇರಿ ಪಶ್ಚಿಮದ ವೀರ ದೇಸಾಯಿರೋಡ್‌ನ ಶ್ರೀ ಲಕ್ಷ್ಮೀನಾರಾಯಣ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 8.30 ರಿಂದ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಪ್ರಧಾನ ಹೋಮ, ನವಕ ಕಲಶಪೂಜೆ, ಪರಿವಾರ ಸಹಿತ ಶ್ರೀ ಲಕ್ಷ್ಮೀನಾರಾಯಣ ದೇವರಿಗೆ ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಮಹಾಪೂಜೆ, ದೇವ ಉತ್ಸವ ಬಲಿಯು ಬ್ರಾಹ್ಮಣೋತ್ತಮರಿಂದ ವಿಧಿವತ್ತಾಗಿ ನಡೆಯಿತು.
ಮಧ್ಯಾಹ್ನ 12ರಿಂದ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀ ಮದ್ಭಾರತ ಮಂಡಳಿ ಮತ್ತು ಶ್ರೀ ಮಹಾಲಕ್ಷ್ಮೀ ಭಜನ ಮಂಡಳಿಯವರಿಂದ ಭಜನ ಕಾರ್ಯಕ್ರಮ ನಡೆಯಿತು. ಅಪರಾಹ್ನ 4 ರಿಂದ ಸಂಜೆ 6 ರವರೆಗೆ ವಿದ್ವಾನ್ ನಾರಾಯಣ ಬಂಗೇರ ಮಿತ್ರಪಟ್ಣ ಇವರಿಂದ ಗಧಾವೇಗ ಭಂಗ-ಭೀಮ ಭಕ್ತಿ ಸಂಘ ಎಂಬ ಹರಿಕಥಾ ಕಾಲಕ್ಷೇಪವನ್ನು ಆಯೋಜಿಸಲಾಗಿತ್ತು. ಸಂಜೆ 7 ರಿಂದ ರಂಗಪೂಜೆಯನ್ನು ಆಯೋಜಿಸಲಾಗಿತ್ತು.
ಮಂದಿರದ ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಕೃಷ್ಣರಾಜ್ ಭಟ್ ಬಪ್ಪನಾಡು ಮತ್ತು ಸುರೇಶ್ ಭಟ್ ಕುಂಟಾಡಿ ಇವರು ಸಹಕರಿಸಿದರು. ಕುಂಟಾಡಿ ಸುರೇಶ್ ಭಟ್ ಇವರಿಂದ ದೇವರ ಬಲಿ ಉತ್ಸವ ನಡೆಯಿತು.
ಶ್ರೀ ಮದ್ಭಾರತ ಮಂಡಳಿ ಮುಂಬಯಿ ಇದರ ಅಧ್ಯಕ್ಷ ಜಗನ್ನಾಥ ಪಿ. ಪುತ್ರನ್, ಉಪಾಧ್ಯಕ್ಷರುಗಳಾದ ರಘುನಾಥ ಬಿ. ಕುಂದರ್ ಮತ್ತು ಸಂಜೀವ ಬಿ. ಚಂದನ್, ಗೌರವ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ, ಗೌರವ ಜತೆ ಕಾರ್ಯದರ್ಶಿಗಳಾದ ಲೋಕನಾಥ್ ಪಿ. ಕಾಂಚನ್ ಮತ್ತು ಹರಿಶ್ಚಂದ್ರ ಸಿ. ಕಾಂಚನ್, ಗೌರವ ಪ್ರಧಾನ ಕೋಶಾಧಿಕಾರಿ ಕೇಶವ ಆರ್. ಪುತ್ರನ್, ಗೌರವ ಜೊತೆ ಕೋಶಾಧಿಕಾರಿಗಳಾದ ಶ್ಯಾಮ್ ಕೆ. ಪುತ್ರನ್ ಮತ್ತು ಅಶೋಕ್ ಎನ್. ಸುವರ್ಣ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿತು.
ಅಪರಾಹ್ನ 4 ರಿಂದ ಸಂಜೆ 6.30 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. ಭಕ್ತಾದಿಗಳು, ತುಳು-ಕನ್ನಡಿಗರು, ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸ್ಥಳೀಯ ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜ ಸೇವಕರು, ಉದ್ಯಮಿಗಳು ಪಾಲ್ಗೊಂಡರು.