ಬೆಳ್ತಂಗಡಿ: ನಾವಿಂದು ವೈಯಕ್ತಿಕ ಶಾಂತಿಗಾಗಿ ಮಾತ್ರವಲ್ಲ ವಿಶ್ವಶಾಂತಿಗಾಗಿ ಪ್ರಾರ್ಥನೆ ಮಾಡುವ ಸಂದರ್ಭ ಬಂದಿದೆ. ದೂರದ ರಷ್ಯಾನೆರೆ ರಾಷ್ಟ್ರ ಉಕ್ರೇನ್ ವಿರುದ್ಧ ಯುದ್ಧಸಾರಿದೆ. ವಿಶ್ವದ ಯಾವುದೇ ಮೂಲೆಯಲ್ಲಿ ಜೀವಹಾನಿ, ನಷ್ಟ ಅನುಭವಿಸಿದರೂ ನಾವು ಕಳಕಳಿ ತೋರುವ ಮೂಲಕ ಅವರ ಒಳಿತಿಗಾಗಿ ಪ್ರಾರ್ಥಿಸಿದಾಗ ನಾವು ವಿಶ್ವ ಮಾನವರಾಗುತ್ತೇವೆ ಎಂದು ಧರ್ಮಸ್ಥಳ ಶ್ರೀ ಕ್ಷೇತ್ರ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಮಂಗಳವಾರ ಶಿವಪಂಚಾಕ್ಷರಿ ಪಠಣದೊಂದಿಗೆ ಅಹೋರಾತ್ರಿ ಜಾಗರಣೆಯನ್ನು ಉದ್ಘಾಟಿಸಿ ಅವರು ಶುಭ ಹಾರೈಸಿದರು.
ಮಾಣಿಲ ಶ್ರೀಧಾಮದ ಮೋಹನ ದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಪರಿವರ್ತನೆ ಮತ್ತು ಪರಿಮಾರ್ಜನೆ ಕೊಟ್ಟ ಕ್ಷೇತ್ರ ಧರ್ಮಸ್ಥಳ. ಮಂಜುನಾಥನ ಸಾನ್ನಿಧ್ಯಕ್ಕೆ ಎಲ್ಲ ಶ್ರೇಷ್ಠರು ಬಂದು ಹೆಗ್ಗಡೆಯವರಲ್ಲಿ ತೋಡಿಕೊಳ್ಳುವ ವಿಜ್ಞಾಪನೆಗಳಿಗೆ ಅವರು ದೂರದೃಷ್ಟಿತ್ವದಿಂದ ನೀಡುವ ಬಾಂಧವ್ಯದ ಪ್ರೇಮ ಸಂದೇಶ ಮಂಜುನಾಥ ಅವರಿಗೆ ನೀಡಿದ ದಿವ್ಯ ಪ್ರಸಾದ. ಶಿವಪಂಚಾಕ್ಷರಿ ಜಪದಿಂದ ರಾಷ್ಟ್ರ ಹಾಗೂ ಸಮಸ್ತ ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ಹರಸಿದರು.
ಪಾದಯಾತ್ರಿಗಳಾದ ಹನುಮಂತಪ್ಪ ಗುರೂಜಿ, ಮರಿಯಪ್ಪ ಗೌಡ, ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಸಹಿತ ಪ್ರಮುಖರು ಉಪಸ್ಥಿತರಿದ್ದರು. ಶ್ರೀನಿವಾಸ್ ರಾವ್ ಸ್ವಾಗತಿಸಿದರು. ಶಿವಕುಮಾರ್ ಕಾರ್ಯಕ್ರಮ ನಿರ್ವ ಹಿಸಿದರು.
ಮುಂದಿನ ವರ್ಷ ಪಾದಯಾತ್ರೆ ಸಂದರ್ಭ ಭಗವಂತನ ನಾಮ ಸ್ಮರಣೆ ಜತೆಗೆ ಸ್ವತ್ಛತೆಗೆ ಆದ್ಯತೆ ನೀಡಬೇಕು. ಪರಿಸರ ಮಾಲಿನ್ಯವಾಗದಂತೆ ಭಕ್ತಿ ಶ್ರದ್ಧೆಯಿಂದಿರಿ. ಸಮಸ್ಯೆಗಳ ಪರಿಹಾರಕ್ಕಾಗಿ ಮಾತ್ರ ಭಗವಂತನ ನಾಮ ಸ್ಮರಣೆಯಲ್ಲ, ನಮ್ಮತನವನ್ನು ಉಳಿಸಿಕೊಂಡು ಇತರರಿಗೆ ಹಿಂಸೆಯಾಗದಂತೆ ಬಾಳಿ ಬದುಕಬೇಕು. ಕೇವಲ ಭಗವಂತನ ದರ್ಶನ ಮಾತ್ರವಲ್ಲ ನಿಮ್ಮ ನೀವು ದರ್ಶನ ಮಾಡಿ ಎಂದು ಪಾದಯಾತ್ರಿಗಳನ್ನು ಡಾ| ಹೆಗ್ಗಡೆ ಹರಸಿದರು.
ಶಿವರಾತ್ರಿಯ ಮಹತ್ವ
ಶಿವರಾತ್ರಿಯ ಮಹತ್ವವೇ ನಾವೆಲ್ಲ ಜಾಗೃತರಾಗಿರಬೇಕೆಂಬುದು. ನಮ್ಮನ್ನು ನಾವು ಶುದ್ಧೀಕರಿಸುವುದಕ್ಕಾಗಿ ಕ್ಷೇತ್ರ ಯಾತ್ರೆ, ಪಾದಯಾತ್ರೆ ಮಾಡುತ್ತೇವೆ. ಎಲ್ಲವನ್ನು ಹಿತಮಿತಗೊಳಿಸಿ ಜಾಗೃತಾವಸ್ಥೆಯಲ್ಲಿರಿಸು ವುದೇ ಜಾಗರಣೆ. ಯಾವ ಧರ್ಮ ಶ್ರೇಷ್ಠ ಅನ್ನುವುದನ್ನು ವ್ಯಾಖ್ಯಾನಿಸುವುದು ಕಷ್ಟ. ತಿಳುವಳಿಕೆಯಿಂದ ಆಚರಿಸುವುದೇ ಧರ್ಮ. ಧರ್ಮ ಆಚರಣೆ ಮಾಡಬೇಕಾದರೆ ಶಿಸ್ತುಬೇಕು, ಶಿಸ್ತು ಇರಲು ಆಚಾರ ವಿಚಾ ರದ ಜತೆ ಸಚ್ಚಾರಿತ್ರ್ಯದಿಂದ ನಿಯಮ ಪಾಲನೆ ಮಾಡಬೇಕು ಎಂದು ಡಾ| ಹೆಗ್ಗಡೆ ಹೇಳಿದರು.
ಶಿವರಾತ್ರಿ ವಿಶೇಷ
– ಭಕ್ತರಿಂದ ದೇವರ ಪ್ರಾರ್ಥನೆ, ಧ್ಯಾನ, ಭಜನೆಯೊಂದಿಗೆ ಜಾಗರಣೆ
– ಮಂಜುನಾಥನ ಸನ್ನಿಧಿಗೆ ಹೂ, ವಿದ್ಯುತ್ ಅಲಂಕಾರ
– ಸುಮಾರು 2 ಲಕ್ಷಕ್ಕೂ ಮಿಕ್ಕಿ ಭಕ್ತರ ಆಗಮನ
– ನಾಡಿನ ವಿವಿಧ ಕಲಾ ತಂಡಗಳಿಂದ ಕಲಾ ಸೇವೆ