Advertisement
ಡಾ| ಸಂಪತ್ ಕುಮಾರ್ ಕೋಟೇಶ್ವರ, ಐಶು ಭಟ್, ಐಶ್ವರ್ಯ ಶೆಟ್ಟಿ ಮತ್ತು ಲಕ್ಷ್ಮೀ ಕೆ. ರಾವ್ ಆರೋಪಿಗಳು. ಜು. 29ರಂದು ಆರೋಪಿ ಡಾ| ಸಂಪತ್ ಕುಮಾರ್ ಫೇಸ್‌ಬುಕ್‌ನಲ್ಲಿ ದುಡ್ಡಿಗೋಸ್ಕರ ಎರಡೆರಡು ಅಷ್ಟಮಿ ಆಚರಿಸುವ ಉಡುಪಿಯ ಧರ್ಮ ಪಾಖಂಡಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಪ್ರಚುರಪಡಿಸಿದ್ದರು.ಈ ಕುರಿತು ಭಕ್ತವೃಂದ ಪ್ರತಿಕ್ರಿಯಿಸಿದ್ದಕ್ಕೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಫೇಸ್‌ಬುಕ್‌ನಲ್ಲಿ ಪ್ರಚುರಪಡಿಸಿದ್ದಾರೆ. ಮಾತ್ರವಲ್ಲದೆ ಅವರ ಅನುಯಾಯಿಗಳಾದ ಐಶು, ಐಶ್ವರ್ಯ ಮತ್ತು ಲಕ್ಷ್ಮೀ ಅವರು ಜು. 29, 30ರಂದು ಶ್ರೀಕೃಷ್ಣ ಮಠದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾರೆ ಎಂದು ಡಾ| ಯೋಗೀಶ್ ಶೇಟ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಹಿಂದಿನಿಂದಲೂ ಚಾಂದ್ರಮಾನ ಮತ್ತು ಸೌರಮಾನ ಎಂಬ ಎರಡು ರೀತಿಯ ತಿಂಗಳಿನ ಕ್ರಮವಿದೆ. ಚಾಂದ್ರಮಾನ ತಿಂಗಳು ಅಮಾವಾಸ್ಯೆ ಮರುದಿನದಿಂದ ಮತ್ತು ಸೌರಮಾನ ತಿಂಗಳು ಸಂಕ್ರಾಂತಿ ಮರುದಿನದಿಂದ ಆರಂಭವಾಗುತ್ತದೆ. ಚೈತ್ರ, ವೈಶಾಖ ಇತ್ಯಾದಿಗಳು ಚಾಂದ್ರಮಾನ ಕ್ರಮದ ತಿಂಗಳ ಹೆಸರು. ಮೇಷ, ವೃಷಭ ಇತ್ಯಾದಿಗಳು ಸೌರಮಾನ ಕ್ರಮದ ತಿಂಗಳ ಹೆಸರು. ಹಳ್ಳಿ ಜನರು ಮೇಷ ಮಾಸಕ್ಕೆ ಹಗ್ಗಿನ ತಿಂಗಳು (ತುಳುವಿನಲ್ಲಿ ಪಗ್ಗು), ವೃಷಭಕ್ಕೆ ಬೇಸಗೆ ತಿಂಗಳು (ಬೇಶ -ತುಳು), ಮಿಥುನಕ್ಕೆ ಕಾರ್ ತಿಂಗಳು (ಕಾರ್ತೆಲ್- ತುಳು), ಕರ್ಕಾಟಕಕ್ಕೆ ಆಸಾಡಿ ತಿಂಗಳು (ಆಟಿ – ತುಳು), ಸಿಂಹ ಮಾಸಕ್ಕೆ ಸೋಣೆ ತಿಂಗಳು (ಸೋಣಾ -ತುಳು), ಕನ್ಯಾ ಮಾಸಕ್ಕೆ ಕನ್ನೆ ತಿಂಗಳು (ನಿರ್ನಾಲ- ತುಳು), ತುಲಾ ಮಾಸಕ್ಕೆ ದಿವಾಳಿ (ಬೋಂತೆಲ್ -ತುಳು), ವೃಶ್ಚಿಕಕ್ಕೆ ಕೊಡಿ ತಿಂಗಳು (ಜಾರ್ದೆ -ತುಳು), ಧನುರ್ಮಾಸಕ್ಕೆ ಧನಿನ ತಿಂಗಳು (ಪೆರಾರ್ದೆ- ತುಳು), ಮಕರಕ್ಕೆ ಭಾರತ್ ತಿಂಗಳು (ಪೊನ್ನಿ -ತುಳು), ಕುಂಭಕ್ಕೆ ಶಿವರಾತ್ರಿ ತಿಂಗಳು (ಮಾಯಿ- ತುಳು), ಮೀನ ಮಾಸಕ್ಕೆ ಸುಗ್ಗಿ (ತುಳುವಿನಲ್ಲಿಯೂ ಇದೇ ಹೆಸರು) ಎಂದು ಕರೆಯುವ ರೂಢಿ ಇದೆ. ಈ ರೀತಿಯಲ್ಲಿ ಕನ್ನಡ, ತುಳುವಿನ ಹೆಸರು ಚಾಂದ್ರಮಾನದ ತಿಂಗಳುಗಳಿಗೆ ಇಲ್ಲ. ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದ ಕರಾವಳಿ ಭಾಗಗಳಲ್ಲಿ ಸೌರಮಾನ ಕ್ರಮ ಆಚರಣೆಯಾದರೆ, ಕರ್ನಾಟಕದ ಬೇರೆ ಭಾಗ, ಉತ್ತರ ಭಾರತದಲ್ಲಿ ಚಾಂದ್ರಮಾನ ಕ್ರಮ ಹೆಚ್ಚಿಗೆ ಚಾಲ್ತಿಯಲ್ಲಿದೆ. ಚಾಂದ್ರಮಾನ ಕ್ರಮದಂತೆ ಕೃಷ್ಣಾಷ್ಟಮಿ ಆಗಸ್ಟ್ ನಲ್ಲಿ, ಸೌರಮಾನ ಕ್ರಮದಂತೆ ಸೆಪ್ಟಂಬರ್‌ನಲ್ಲಿ ಬರುತ್ತದೆ. ಉಡುಪಿಯಲ್ಲಿ ಹಿಂದಿನಿಂದಲೂ ಸೌರಮಾನ ಕ್ರಮದ ಅಷ್ಟಮಿ ಆಚರಿಸಲಾಗುತ್ತಿದೆ.
Related Articles
Advertisement