Advertisement

ಕೃಷ್ಣಾ ನೀ ಬೇಗನೆ ಬಾರೋ !

10:49 AM Aug 19, 2019 | Team Udayavani |

ಶ್ರೀಕೃಷ್ಣ ಜನ್ಮಾಷ್ಟಮಿಗೆ ಇನ್ನೇನು ಕೆಲವೇ ದಿನಗಳು! ಮಳೆಯ ದೇವತೆ ಇಂದ್ರ  ಮುನಿಸಿಕೊಂಡಿದ್ದಾನೆ. ನದಿಗಳು ಉನ್ಮಾದದಿಂದ ದಡ ಮೀರಿ ಹರಿದು ಜನರನ್ನು ಕಂಗೆಡಿಸಿವೆ. ಹಬ್ಬದ ಸುಗ್ಗಿ , ನೆರೆಯ ಸಂಕಟದ ಸಂದಿಗ್ಧವಿದು. ಮತ್ತೆ ಗೋವರ್ಧನಗಿರಿಧಾರಿಯ ಚಿತ್ರವೇ , ಆ ಕಾರಣಿಕದ ಗುಲಾಬಿ ಗೆಂಪಿನ ಕೋಮಲ ಕಿರು ಬೆರಳಿನ ನೆನಪೇ ಮನಸ್ಸಿಗೆ ಬರುತ್ತಿದೆ…

Advertisement

ಮತ್ತೆ ಮಳೆ, ಮತ್ತೆ ಮಳೆ ಮೇಲೆ ಮೇಲೆ ಬರುತ್ತಿದೆ, ಬರುವ ಆ ರಭಸವೋ. ಜಂಭ, ಅಹಂಕಾರ, ಉಡಾಪು ಎಲ್ಲವೂ ಸೇರಿ ಘೀಳಿಟ್ಟ ಹಾಗೆ. ಅದರ ರಭಸಕ್ಕೆ ಸೂರ್ಯ ಕೂಡ ಸಜ್ಜನರ ಉಪಾಯದಂತೆ ದಾರಿ ಬಿಟ್ಟು ಮರೆ ನಿಂತಿ¨ªಾನೆ.

ಮನೆಯೊಳಗೆ ಕತ್ತಲು ಕವಿದಿದೆ. ಮಳೆಗತ್ತಲಲ್ಲಿ ಕುಳಿತುಕೊಳ್ಳುವುದೆಂದರೆ ತಾಯಿಯ ಗರ್ಭದಲ್ಲಿ ಹೊಕ್ಕು ಬೆಚ್ಚಗೆ ಕುಳಿತಂತೆ ಅನಿಸುತ್ತಿತ್ತು ಮುಂಚೆಲ್ಲ. ಇಂದೇಕೆ ಹೀಗೆ ಬಳಲಿಕೆಯಾಗುತ್ತಿದೆ. ಸಂತಧಾರ ಸುರಿವ ಮಳೆಯನ್ನು ನೋಡುತ್ತಿದ್ದರೆ ಅಂತರಂಗದಲ್ಲಿ ಶೋಕದ ಅಲೆ ಏಳುತ್ತಿದೆ. ಕಂಠದ ನರ ಬಿಗಿಯುತ್ತಿದೆ. ಕಳೆದು ಹೋದವರೆಲ್ಲರ ನೆನಪು ಕುದಿ ಮರಳುತ್ತಿದೆ. ತೀರಿದ ಆಪ್ತರ‌ ತಃಖೆ¤ ಕಣ್ಣ ಮುಂದೆ ತಾನಾಗಿ ಮೂಡುತ್ತ ಮನತುಂಬ ಕಳವಳದ ಕಾವಳ ಕವಿಯುತ್ತಿದೆ. ಈಗ ಅವರೆಲ್ಲ ಎಲ್ಲಿರಬಹುದು? ಇಂಥ ಮಳೆಯಲ್ಲಿ ಎಲ್ಲಿ ಅಡಗಿ ನಿಂತಿರಬಹುದು? ನಭದಲ್ಲಿ ನಿಲ್ದಾಣವಿದೆಯೆ? ಇದು ಯಾರ ಕಣ್ಣೀರು, ಮಳೆಯದೋ ಇಳೆಯದೋ? ಕಳೆದವರದೋ ಇರುವವರದೋ? ಗತಿಸಿದ ವ್ಯಕ್ತಿಗಳೆಲ್ಲ ಮಳೆಯ ಸರಿಧಾರೆ ಹಿಡಿದು ಭೂಮಿಗೆ ಮರಳುತ್ತಾರಂತೆ, ಮತ್ತೆ ಜನ್ಮ ತಾಳುತ್ತಾರಂತೆ. ಸುಳ್ಳೆನ್ನ ಬೇಡಿ, ಹೌದೆನ್ನಿ. ದೈತ್ಯಮಳೆ ಕಸಿದೊಯ್ದ ಮಂದಿಯೆಲ್ಲ ಒಮ್ಮೆ ಮರಳಲಿ¨ªಾರೆ ಎಂಬುದೇ ಎಂಥ ಆಪ್ಯಾಯಮಾನ ಸಂಗತಿ !

ಯೋಚಿಸುತ್ತಿದ್ದಂತೆ ವರ್ತಮಾನದಿಂದ ಪುರಾಣದವರೆಗೂ ಪ್ರಸಂಗಗಳು ಬಿಚ್ಚಿ ಕೊಳ್ಳುತ್ತವೆ.

ಶ್ರಾವಣದ ನಟ್ಟಿರುಳ ಕತ್ತಲಲೀ
ಕಾವಲಿರುವ ಖೂಳರಿರುವ ಸೆರೆಯ ಮನೆಯಲೀ
ದೇವಕಿಯ ಎಂಟನೆಯ ಗರ್ಭದಲೀ
ನವ ಮಾಸದಲೀ
ದೈತ್ಯ ಕಾ…ಲ

Advertisement

ಜನ್ಮಾಷ್ಟಮಿಯ ಸಂಜೆಯ ಭಜನೆಗೆ ಇದನ್ನು ಹಾಡದೆ ಕಳೆಯದು.
ಆ ದೈತ್ಯಕಾಲನಾಗಿ ಶ್ರೀಕೃಷ್ಣ ಹುಟ್ಟಿ ಬಂದಾಗಲೂ ಇಂಥದೇ ಮಳೆ ಎನ್ನುತ್ತ ಭಾಗವತದ ಪುಟಗಳು ಶ್ರವಣಕ್ಕಾಗಿ ತೆರೆದುಕೊಳ್ಳುತ್ತವೆ. ಅದೋ, ನುಣುಪು ಕಾಗದದ ಮೇಲೆ ಬಣ್ಣದ ಚಿತ್ರ. ಪುಟ್ಟ ನೀಲಗೋಪಾಲಕನ ಗುಲಾಬಿಗೆಂಪು ಕಿರುಬೆರಳ ತುದಿಯ ಆಧಾರದಲ್ಲಿ ಗಿರಿಯೊಂದು ಗೋವYಳಿಗೆ ಬಿರುಮಳೆ ತಾಗದಂತೆ ಸ್ವತಃ ತಾನೇ ಕೊಡೆಯಾಗಿ ಹೇಗೆ ನಿಂತಿದೆ ! ಸಾಮಾನ್ಯ ಬೆಟ್ಟವೊಂದು ಅಸಾಮಾನ್ಯ ಸ್ಪರ್ಶದಿಂದ ಗೋವರ್ಧನ ಗಿರಿಯಾಗಿ ರೂಪಾಂತರಗೊಂಡ ಅಮರ ಕತೆಯದು. ಅರರೆ ಗೋವುಗಳೇ! ಕೆಲವು ಕಕ್ಕಾಬಿಕ್ಕಿ ನಿಂತು ನೋಡುತಿದ್ದರೆ ಕೆಲವಂತೂ ಮಳೆ ಮರೆತು ಅÇÉೇ ಗಿರಿಯಡಿಯಲ್ಲಿ ನಿಶ್ಚಿಂತೆಯೇ ತಾವೆಂಬಂತೆ ಹುಲ್ಲು ಬೇರೆ ಮೇಯುತ್ತಿವೆ! ಚಿತ್ರವೆಂದರೆ ಚಿತ್ರ. ಅಂದ ಹಾಗೆ ಆ ಸಣ್ಣ ಕಿರುಬೆರಳು ಗಿರಿಯನ್ನು ಎತ್ತಿತಾದರೂ ಹೇಗೆ? ಅದಕ್ಕೆ ನೋವಾಗಲಿಲ್ಲವೆ? ಮಳೆ ನಿಂತಮೇಲೆ ಆ ಬೆರಳು ಗಿರಿಯನ್ನು ಕೆಳಗಿಳಿಸಿತೇ ಇಲ್ಲವೆ?

ಮಗುವೊಂದರ ಕುತೂಹಲದ ಪ್ರಶ್ನೆಗೆ ದೊಡ್ಡವರು ನಗುತ್ತ, “ಇದು ಇಲ್ಲಿಗೆ ಮುಗಿಯಿತು. ಇನ್ನು ಬೇರೆ ಪುಟ’ ಅಂತ ಪುಟ ತಿರುಗಿಸುತ್ತಾರೆ. ಗಿರಿಯನ್ನು ಕೆಳಗಿಳಿಸಿದ ಚಿತ್ರವೇ ಎಲ್ಲಿಯೂ ಇಲ್ಲ; “ಅದರರ್ಥ, ದೈವ ಒಮ್ಮೆ ಎತ್ತಿ ಹಿಡಿಯಿತೆಂದರೆ, ಉದ್ಧರಿಸಿತೆಂದರೆ, ಮತ್ತೆ ಕೆಳಗಿಳಿಸುವ ಪ್ರಶ್ನೆಯೇ ಇಲ್ಲ’ ಮುಂತಾಗಿ ಅಲ್ಲÇÉೇ ಮನೆಮಂದಿಯಲ್ಲಿ ಆಧ್ಯಾತ್ಮದ ವ್ಯಾಖ್ಯಾನವೂ ಪುಟಿಯುತ್ತದೆ.

ಇಂದೀಗ ಕಣ್ಮುಂದೆ ಮತ್ತೆ ಆ ಚಿತ್ರ. ಬಿರುಬೀಸು ಮಳೆಗೆ ಬೆಟ್ಟಕ್ಕೆ ಬೆಟ್ಟವೇ ಕುಸಿಯುವುದನ್ನು, ಜರಿದು ಬೀಳುವುದನ್ನು ಜನ-ಜಾನುವಾರು ನೀರುಪಾಲು ಮಣ್ಣುಪಾಲು ಆಗುವುದನ್ನು ನೋಡುವಾಗೆಲ್ಲ, ಆ ಕಾರಣಿಕದ ಗುಲಾಬಿಗೆಂಪಿನ ಕೋಮಲ ಕಿರುಬೆರಳಿನ ನೆನಪು. ಜೀವಿಗಳ ಬದುಕು ನಾಶವಾಗದಂತೆ ಕಾಪಾಡುವ, ಸಕಲ ಜೀವಜಾತರಿಗೆ ಅಭಯ ನೀಡುವ ದೈವ, ಇವತ್ತು ಯಾರಿಗೂ ಕಾಣದಂತೆ ಎಲ್ಲಡಗಿದೆ, ಯಾಕೆ ಸುಮ್ಮಗಿದೆ? ಭಾಗವತದ ಆ ಪುಟದಿಂದೆದ್ದು ಅದು ಹೊರಬಂದೀತೆ? ಕೆಸರು ಮಣ್ಣಿನ ರಾಡಿಯಾಗಿರುವ ಭೂಮಿಯನ್ನು ಮುಂಚಿನಂತೆಯೇ ಸಸ್ಯಶಾಲಿನಿಯಾಗಿ ಮಾಡೀತೆ? ನಾವು ಮಾಡಿದ ಅಪರಾಧಂಗಳ ಅಪಚಾರಂಗಳ ಕ್ಷಮಿಸೀತೆ?

ಚೆದುರಿ ಚೆಲ್ಲಿ ಲಾಚಾರವೆದ್ದ ಬದುಕುಗಳ ಉದ್ಧಾರಕ್ಕೆ ಆ ದೈವ ಆಧುನಿಕದ ಯಾವ ರೂಪದÇÉಾದರೂ ಅಭಯರೂಪಿಯಾಗಿ ಬರಬೇಕಿದೆ.

ಚಿತ್ರಮಾತ್ರದಲ್ಲಿರುವ ಗೋವರ್ಧನ ಗಿರಿಯ ಕತೆ ಸಚೇತನವಾಗಿ ಮತ್ತೆ ಜಗತ್ತಿಗೆ ಮರಳಬೇಕಿದೆ. ಕಿರುಬೆರಳಿನ ಅಂದಿನ ಆ ಅದ್ಭುತ ಮಹಿಮಾತ್ಮಕ ಕ್ರಿಯೆ ಇವತ್ತಿಗನುಸಾರ ಹೊಸತಾಗಿ ಮರುಕಳಿಸಬೇಕಿದೆ.

“ಕೃಷ್ಣಾ ನೀ ಬೇಗನೆ ಬಾರೋ’- ಇವತ್ತು ಕೇವಲ ಕಛೇರಿಯಲ್ಲಿ ಯಮನ್‌ ಕಲ್ಯಾಣಿಯಲ್ಲಿ ಮನದುಂಬುವಂತೆ ಹಾಡುವ, ಶ್ರೋತೃಗಳು ತಲೆದೂಗುವ ಹಾಡುಗಾರಿಕೆಯಷ್ಟಕೇ ನಿಲ್ಲದೆ, ಜಗತ್‌ ಕಲ್ಯಾಣಕ್ಕಾಗಿ ಕೃಷ್ಣನೆಂಬ ದೈವವನ್ನು ಇನ್ನಿಲ್ಲದ ಆರ್ತತೆಯಿಂದ ಕರೆಯುವ ಸಾಲಾಗಿ ಕಾಣುತ್ತಿಲ್ಲವೆ?

ಶ್ರಾವಣದ ಹೊಸಿಲಿನಲಿ
ಹುರುಳಿ ಹೂವನು ಕಿತ್ತು
ಹುರುಳಿ ಹೂವನು ತೊಳೆದು
ಹುರುಳಿ ಹೂವನು ವಾಸ್ತು ಹೊಸಿಲಿಗಿಟ್ಟಳು ಗೋಪಿ
ಹೊಸಿಲು ಕಾದಿತು ಹಗಲು
ರಾತ್ರಿ ಬೆಳಗೂ ಕಳೆದು
ದೇವ ಬಾರದೆ ಹೂವು
ಹೊರಳಿ ಹೋಯ್ತು

ರಾಗಿ ಕಾಳನು ನೆನೆಸಿ
ರಾಗಿ ಹೂವನು ಬೆಳೆದು
ಮಸ್ತು ಹೂವನು ತೊಳೆದು ಹೊಸ್ತಿಲಿಗಿಟ್ಟು
ರಂಗ ಬಂದಾನೆಂದು ರಂಗವಲ್ಲಿಯ ಬರೆದು
ರಾಗರಂಜಿತ ದಿನಕೆ ಪೂಜೆ ಗೈದಳು ಗೋಪಿ
ಹೊಸಿಲು ಕಾದಿತು ಹಗಲು
ರಾತ್ರಿ ಬೆಳಗೂ ಕಳೆದು
ರಂಗ ಬಾರದೆ ಹೂವು
ಸೊರಗಿ ಹೋಯ್ತು!

ಯಾವ ತಾಪತ್ರಯದಲೋ
ಕಣ್ಣೀರ ಕತೆಗಳಲೋ
ಬಂದಿಯಾಗಿಹ ದೇವ
ನಿಂದಿಸಲೆಲ್ಲಿ?
ಎಂದು ತನ್ನನೆ ತಾನು ತಲೆದಡವಿ ಸಂತೈಸಿ
ರಾಗೀ ಡೊಂಕಾದರೇನು
ರಾಗ ಡೊಂಕೆ ವಿಠಲ
ಭಜನೆ ಹಾಡುತ್ತ ತಾಳ
ತಟ್ಟಿದಳು!

– ವೈದೇಹಿ

Advertisement

Udayavani is now on Telegram. Click here to join our channel and stay updated with the latest news.

Next