Advertisement

ಮಾನವನನ್ನು ದೈವತ್ವಕ್ಕೇರಿಸಲು ಅವತರಿಸಿದ ಕೃಷ್ಣ

07:10 AM Sep 14, 2017 | |

ಉಡುಪಿ: ಶ್ರೀಕೃಷ್ಣನು ಭಗವಂತನಾಗಿ, ಮಾನವನಾಗಿ ಎರಡಲ್ಲೂ ಆದರ್ಶ ವ್ಯಕ್ತಿತ್ವವನ್ನು ಹೊಂದಿದ್ದು, ಮಾನವನನ್ನು ದೈವತ್ವಕ್ಕೇರಿಸಲು ಮಾನವನಾಗಿ ಅವತರಿಸಿದ ದೇವ ಅವನು ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

Advertisement

ಅವರು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ ಬುಧವಾರ ನಡೆದ ಶ್ರೀಕೃಷ್ಣನ ಉದಾರತೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿದರು.

ಕೃಷ್ಣನು ವೇದವನ್ನು ತಿರಸ್ಕಾರ ಮಾಡಿಲ್ಲ. ವೇದವನ್ನು ವಾದವಾಗಿಸದೇ ಅದರ ನಿಜಾರ್ಥ ತಿಳಿದುಕೊಳ್ಳಿ ಎಂದು ಹೇಳಿದ್ದಾನೆ. ಸಿಕ್ಕ ಅಧಿಕಾರವನ್ನು ತ್ಯಜಿಸಿ ಲೋಕದ ರಕ್ಷಣೆ ಮಾಡುವ ಮೂಲಕ ಉದಾತ್ತ ವ್ಯಕ್ತಿತ್ವವನ್ನು ಜಗತ್ತಿಗೆ ತೋರಿಸಿದ್ದಾನೆ ಎಂದು ಹೇಳಿದರು.

ಶ್ರೀ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಭಗ ವಂತ ನನ್ನು ಅನನ್ಯ ಭಕ್ತಿಯಿಂದ ಭಜಿಸಿದರೆ, ನಿಮ್ಮ ಯೋಗಕ್ಷೇಮದ ಹೊಣೆ ನನ್ನದು ಎಂದು ಶ್ರೀಕೃಷ್ಣ ಹೇಳುತ್ತಾನೆ. ಆತನ ಆದೇಶ, ಮಾರ್ಗದರ್ಶನದಂತೆ ನಡೆಯುವುದೇ ನೈಜ ಭಕ್ತಿ. ದೇಶದ ಸಂವಿಧಾನವನ್ನು ಸರ್ವತ್ರ ಗೌರವಿಸಿದವ ನಿಜವಾದ ದೇಶಭಕ್ತನಾಗುತ್ತಾನೆ. ಅಧಿಕಾರದ ಆಸೆ, ರಾಜಕಾರಣದ ಓಲೈಕೆಗೆ ಒಳಗಾಗುವುದು ದೇಶಭಕ್ತಿ ಆಗಲಾರದು ಎಂದರು.

ಜಗತ್ತಿನ ಅದ್ಭುತ ನಾಯಕ
ತಳ ಸಮುದಾಯದಿಂದ ಬಂದ ಮಹಾನ್‌ ನಾಯಕ ಶ್ರೀಕೃಷ್ಣ, ಪ್ರಾಚೀನ ಹಾಗೂ ಪ್ರಸ್ತುತ ಭಾರತ ಕಂಡಂತಹ ಅದ್ಭುತ ನಾಯಕನೂ ಹೌದು. ಧ್ಯಾನ, ಯೋಗ ಇತ್ಯಾದಿಗಳ ಜತೆಗೆ ಪಾಂಡಿತ್ಯವೂ ಬೇಕು ಎಂದು ಪ್ರತಿ ಪಾದಿಸಿದ್ದ ಶ್ರೀಕೃಷ್ಣ, ಅಂತಹ ಪಾಂಡಿತ್ಯಕ್ಕೆ ಪರಿಣಾಮಕಾರಿಯಾದ ಪರಿಣತಿ ಹೊಂದಿರಬೇಕು ಎನ್ನು ವು ದಾಗಿ ಹೇಳಿದ್ದಾನೆ ಎಂದು ಯಕ್ಷಗಾನ ಕಲಾವಿದ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ| ಪ್ರಭಾಕರ ಜೋಶಿ ಹೇಳಿದರು.

Advertisement

ಸಮಾಜ ಒಂದು ಶಕ್ತಿಯ ಸ್ವರೂಪ. ಸಮಾಜದಲ್ಲಿ ಒತ್ತಡ ಸೃಷ್ಟಿಯಾದಾಗ ನಾಯಕತ್ವ ಸೃಷ್ಟಿಯಾಗುತ್ತದೆ. ಶ್ರೀಕೃಷ್ಣ ಪರಮಾತ್ಮನು ಹಾಗೇ ಅವತರಿಸಿದ ನಾಯಕ. ಶ್ರೀ ಕೃಷ್ಣನು ಒಂದು ಶ್ರೇಷ್ಠ ಗ್ರಂಥ. ವ್ಯವಹಾರ, ವೇದಾಂತ ಎಲ್ಲವೂ ಆತನ ವ್ಯಕ್ತಿತ್ವದಲ್ಲಿ ಇದೆ ಎಂದರು.

ಶ್ರೀ ಕೃಷ್ಣಮಠದ ಸಾಂಸ್ಕೃತಿಕ ಕಾರ್ಯ ಕ್ರಮ ಸಂಯೋಜಕ ಎಂ.ಎಲ್‌. ಸಾಮಗ  ಕಾರ್ಯಕ್ರಮ ನಿರ್ವಹಿಸಿದರು.

“ಗೀತೆ-ಉಪದೇಶ ಮುದುಕರಿಗಲ್ಲ’
ಗೀತೆ-ಉಪದೇಶ, ರಾಮಯಾಣ ಇರುವುದು ಮುದುಕರಿಗಲ್ಲ, ಯುವಕ ರಿಗೆ. ಮುಂದಿನ ಪೀಳಿಗೆಗೆ ಬೇಕಾದ ಸಂದೇಶ ಆ ಶ್ರೇಷ್ಠ ಕಾವ್ಯಗಳಲ್ಲಿದೆ. ಕೃಷ್ಣನಿಂದ ಪ್ರೇರಣೆ ಪಡೆದು, ಬದುಕಿನಲ್ಲಿ ಮುನ್ನಡೆದರೆ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ಡಾ| ಪ್ರಭಾಕರ ಜೋಶಿ ಹೇಳಿದರು.

“ಪರಮ ಪ್ರೇಮದ ಸ್ವರೂಪ’
ಶ್ರೀ ಕೃಷ್ಣನನಲ್ಲಿ ಅಸಾಧ್ಯ, ಅಸಾಧಾರಣ ಜೀವನದ ಜತೆಗೆ, ಶೌರ್ಯ, ರಾಜನೀತಿ, ಎಲ್ಲರೊಡನೆ ಒಂದಾಗುವ ಪ್ರೀತಿಯನ್ನು ಕಾಣಬಹುದು. ಆತ ಪರಮ ಪ್ರೇಮ – ವಾತ್ಸಲ್ಯದ ಸಂಕೇತ ಎಂದು ಡಾ| ಜೋಶಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next