ಒಮ್ಮೆ ಗೋಪಾಲಕರೆಲ್ಲ ಕಾಡಿನಲ್ಲಿ ಕ್ರೀಡೆಯಲ್ಲಿ ಆಸಕ್ತರಾಗಿದ್ದರು. ಗೋವುಗಳು ಸ್ವತ್ಛಂದವಾಗಿ ವಿಹರಿಸುತ್ತ ಹುಲ್ಲಿನ ಆಸೆಯಿಂದ ಅರಣ್ಯವೊಂದನ್ನು ಪ್ರವೇಶಿಸಿದವು. ಆ ಬೃಹದಾರಣ್ಯದಲ್ಲಿ ಸಮೃದ್ಧವಾಗಿ ಹುಲ್ಲು ಬೆಳೆದಿತ್ತು. ಆಟದಲ್ಲಿ ಆಸಕ್ತರಾಗಿದ್ದ ಗೋಪಾಲಕರಿಗೆ ಗೋವುಗಳು ಇನ್ನೊಂದು ಕಾಡಿಗೆ ಹೋಗಿದ್ದು ಗಮನಕ್ಕೆ ಬರಲಿಲ್ಲ.
ಗೋವುಗಳನ್ನು ಕಾಣದೆ ಗಾಬರಿ ಗೊಂಡರು. ಹುಡುಕಲು ಪ್ರಾರಂಭಿಸಿದರು. ಗೋವುಗಳು ಸಾಗಿದ ದಾರಿಯಲ್ಲಿ ಹೆಜ್ಜೆಗಳನ್ನು ಗುರುತಿಸುತ್ತ ಸಾಗಿದರು. ಆದರೆ ಎಷ್ಟು ದೂರ ಸಾಗಿದರೂ ಗೋವುಗಳು ಕಾಣಲಿಲ್ಲ, ಬಳಲಿ ಬೆಂಡಾದರು. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನಿರಾಶರಾಗಿ ತಿರುಗಿ ಹೊರಡಲು ನಿಶ್ಚಯಿಸಿದರು.
ಆಗ ಕರುಣಾಮೂರ್ತಿಯಾದ ಶ್ರೀಕೃಷ್ಣ ಇವರನ್ನು ಸಮಾಧಾನಪಡಿಸಿದನು. ಮೇಘದಂತೆ ಗಂಭೀರವಾದ ಧ್ವನಿಯಿಂದ ಗಂಗಾ- ಯಮುನಾ ಮುಂತಾದ ಒಂದೊಂದೇ ನಾಮಗಳಿಂದ ಗೋವುಗಳನ್ನು ಕರೆಯಲಾರಂಭಿಸಿದನು. ಶ್ರೀಕೃಷ್ಣನ ಧ್ವನಿಯನ್ನು ಕೇಳುತ್ತಲೇ ಸಂತೋಷಗೊಂಡ ಗೋವುಗಳು ಅಂಬಾ ಎಂದು ಪ್ರತಿಧ್ವನಿಸಿದವು. ಇದು ಶ್ರೀಕೃಷ್ಣನು ಗೋವುಗಳನ್ನು ಪ್ರೀತಿಸುವ ಬಗೆ.
ಇದನ್ನೇ ನಮ್ಮ ಹರಿದಾಸರು “ಕಾದನಾ ವತ್ಸವ ಹರಿ ಕಾದನಾ’ಎಂದು ವರ್ಣಿಸಿದ್ದಾರೆ. ಶ್ರೀಕೃಷ್ಣನ ಕೊಳಲಿನ ಧ್ವನಿಗೆ ಗೋವುಗಳು ಅತ್ಯಂತ ಹರ್ಷದಿಂದ ಸ್ಪಂದಿಸು ತ್ತಿದ್ದವು. ಗೋವುಗಳು ದಟ್ಟಾರಣ್ಯದಿಂದ ವಾಪಸಾಗುತ್ತಿರುವಂತೆಯೇ ಕಾಳ್ಗಿಚ್ಚು ಉಲ್ಬಣಗೊಂಡು ಗಿಡ-ಮರಗಳನ್ನು, ಪಶು-ಪಕ್ಷಿಗಳನ್ನು ನಾಶಮಾಡುತ್ತಾ ಸಾಗಿತು. ಈ ಭಯಾನಕವಾದ ಕಾಳ್ಗಿಚ್ಚು ನೋಡಿ ಭಯಭೀತವಾದ ಗೋವುಗಳು ಮತ್ತು ಗೋಪಾಲಕರು ಆಕ್ರಂದನವನ್ನು ಮಾಡಿದರು. ಶ್ರೀಕೃಷ್ಣನನ್ನು ಶರಣು ಹೊಂದಿದರು. ಆಗ ಕೃಪಣವತ್ಸಲನಾದ ಶ್ರೀಕೃಷ್ಣನು ಅವರಿಗೆಲ್ಲ ಧೈರ್ಯದಿಂದಿರಲು ತಿಳಿಸಿ ಕಣ್ಣು ಮುಚ್ಚಿಕೊಳ್ಳುವಂತೆ ಹೇಳಿದನು.
ಯೋಗೇಶ್ವರನಾದ ಶ್ರೀಕೃಷ್ಣನು ಹಬ್ಬಿರುವ ಅತ್ಯಂತ ಕ್ರೂರವಾದ ಬೆಂಕಿಯನ್ನು ಅನಾಯಾಸವಾಗಿ ಪಾನ ಮಾಡಿದನು. ಈ ಮೂಲಕ ಆ ಗೋಪಾಲಕರು ಮತ್ತು ಗೋವುಗಳನ್ನು ರಕ್ಷಿಸಿದನು. ಶ್ರೀಕೃಷ್ಣನ ರಕ್ಷಣೆಯಲ್ಲಿ ಗೋವುಗಳು ಸಂತೋಷದಿಂದ ಸಂಚರಿಸಿದವು. ಶ್ರೀಕೃಷ್ಣನ ಅಗಮ್ಯವಾದ ಈ ಮಹಿಮೆಯನ್ನು ನೋಡಿದ ಗೋಪಾಲಕರಿಗೆ ಎಲ್ಲಿಲ್ಲದ ಆನಂದ. ಭಕ್ತರ ಸಂಸಾರವೆಂಬ ಕಾಳ್ಗಿಚ್ಚು ನುಂಗಿ ಅನುಗ್ರಹಿಸುವ ದೇವನಿಗೆ ಇದೇನೂ ಅಚ್ಚರಿಯ ವಿಷಯವಲ್ಲ.
-ಡಾ| ಬಿ.ಗೋಪಾಲಾಚಾರ್
ನಿರ್ದೇಶಕರು, ಶ್ರೀವಾದಿರಾಜ ಸಂಶೋಧನ ಪ್ರತಿಷ್ಠಾನ, ಉಡುಪಿ