Advertisement

ಶ್ರೀ ಕಾಲಕಾಲೇಶ್ವರ ಸ್ವಾಮಿ ಮಹಾ ರಥೋತ್ಸವ

03:22 PM Apr 17, 2022 | Team Udayavani |

ಗಜೇಂದ್ರಗಡ: ನಾಡಿನ ಅಸಂಖ್ಯಾತ ಭಕ್ತರ ಆರಾಧ್ಯ ದೈವ ದಕ್ಷಿಣ ಕಾಶಿ ಖ್ಯಾತಿಯ ಐತಿಹಾಸಿಕ ಶ್ರೀ ಕಾಲಕಾಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಪುಷ್ಪಾಲಂಕೃತ ಮಹಾ ರಥೋತ್ಸವ ಶನಿವಾರ ಮುಗಿಲು ಮುಟ್ಟಿದ ಸದ್ಭಕ್ತರ ಹರ್ಷೋ ದ್ಘಾರಗಳ ಮಧ್ಯೆ ಸಂಭ್ರಮದಿಂದ ನಡೆಯಿತು.

Advertisement

ಜಾತ್ರಾ ಮಹೋತ್ಸವದ ಪ್ರಯುಕ್ತ ಬೆಳಗ್ಗೆಯಿಂದಲೇ ಶ್ರೀ ಕಾಲಕಾಲೇಶ್ವರನಿಗೆ ವಿಶೇಷ ಪೂಜೆ, ಹೋಮ-ಹವನಗಳು ನಡೆದವು. ಕ್ಷೇತ್ರದ ಧರ್ಮದರ್ಶಿಗಳಾದ ಮಂಗಳಾದೇವಿ ದೇಶಮುಖ, ಕೀರ್ತಿಮಾಲಿನಿ ಘೋರ್ಪಡೆ ಅವರು ಬೆಳಿಗ್ಗೆ ಕುಶಾಲ ತೊಪುಗಳ ಭಕ್ತಿ ಗೌರವ ಸಮರ್ಪಣೆ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಸಂಜೆ ವಿಶೇಷ ಪೂಜೆಯ ಬಳಿಕ ದವನಾರ್ಪಣೆ ಸಲ್ಲಿಸಿ ಭಕ್ತ ಸಮೂಹ ಹರಹರ ಮಹಾದೇವ, ಶ್ರೀ ಕಾಲಕಾಲೇಶ್ವರ ಮಹರಾಜ ಕೀ ಜೈ ಎಂಬ ಜೈಕಾರ ಮೊಳಗಿಸುತ್ತ, ಭಜನೆ, ಝಾಂಜ ಮೇಳ, ಡೊಳ್ಳು, ನಾನಾ ಸಂಗೀತ ವಾದ್ಯವೈಭವಗಳೊಂದಿಗೆ ನಂದಿಕೊಲು ಛತ್ರ ಚಾಮರ ಸಹಿತ ಭಕ್ತಿಭಾವದಿಂದ ತೇರು ಎಳೆದು ಕೃತಾರ್ಥರಾದರು.

ಹರಿದು ಬಂದು ಭಕ್ತ ಸಮೂಹ: ಹತ್ತಾರು ಪವಾಡ ಸದೃಶ ವಿಶಿಷ್ಟತೆಗಳನ್ನು ಹೊಂದಿರುವ ಶ್ರೀ ಕಾಲಕಾಲೇಶ್ವರನ ಜಾತ್ರೆಯ ದಿನದಂದು ದೂರದೂರಿನಿಂದ ಭಕ್ತರು ದೇವರ ದರ್ಶನ ಭಾಗ್ಯ ಪಡೆಯಲು ಆಗಮಿಸಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಶ್ರೀ ಕಾಲಕಾಲೇಶ್ವರ ಜಾತ್ರೆಯಂದು ನೀರಿಕ್ಷೆಗೂ ಮೀರಿ ರಾಜ್ಯ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಿಂದ ಭಕ್ತ ಸಮೂಹದ ದಂಡೇ ಹರಿದು ಬಂದಿತ್ತು.

ಪೊಲೀಸ್‌ ಬಂದೋಬಸ್ತ್: ಕೋವಿಡ್‌ನಿಂದಾಗಿ ಎರಡು ವರ್ಷಗಳ ಕಾಲ ರಥೋತ್ಸವ ರದ್ದು ಮಾಡಿದ್ದರಿಂದ ಈ ಬಾರಿ ಅದ್ಧೂರಿಯಾಗಿ ಜಾತ್ರೆ ಆಚರಿಸಬೇಕು ಎನ್ನುವ ಭಕ್ತರ ಅಭಿಲಾಷೆಯಂತೆಯೇ, ಮಹಾರಥೋತ್ಸವಕ್ಕೆ ಜನಸಾಗರವೇ ಹರಿದು ಬಂದಿತ್ತು.

Advertisement

ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಠಾಣೆ ವತಿಯಿಂದ ಪೊಲೀಸ್‌ ಚೆಕ್‌ಪೋಸ್ಟ್‌ ತೆರೆದು ವಾಹನಗಳನ್ನು 2 ಕಿ.ಮೀ. ದೂರದಲ್ಲೇ ನಿಲ್ಲಿಸಿ, ಭಕ್ತರನ್ನು ಮಾತ್ರ ದೇವಸ್ಥಾನಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಪೊಲೀಸ್‌ ಅಧಿಕಾರಿಗಳು ಮಾಡಿದ್ದರು.

ವರುಣನ ಸಿಂಚನ: ಸ್ವಯಂಭು ಲಿಂಗ ಶ್ರೀ ಕಾಲಕಾಲೇಶ್ವರನ ಸನ್ನಿಧಾನದಲ್ಲಿ ಮಹಾರ ಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ವರುಣ ದೇವ ಸಿಂಚನಗೈಯುವ ಮೂಲಕ ರಥೋತ್ಸವಕ್ಕೆ ಶುಭ ಕೋರಿದಂತಾಯಿತು. ಜಾತ್ರಾ ಮಹೋತ್ಸವದಲ್ಲಿ ಸುರಿದ ಮಳೆ ಶುಭ ಸೂಚನೆಯಾಗಿದೆ ಎನ್ನುತ್ತಲೇ ಭಕ್ತರು ಹರಹರ ಮಹಾದೇವ ಉದ್ಘೋಷದೊಂದಿಗೆ ರಥೋತ್ಸವದಲ್ಲಿ ಹೆಜ್ಜೆ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next