Advertisement

ಗುರುಗಳಿಗೇ ಮಹಾನ್‌ ಗುರುಗಳಾಗಿದ್ದ ಜಯದೇವ ಶ್ರೀ

01:14 PM Mar 27, 2017 | |

ದಾವಣಗೆರೆ: ಶೈಕ್ಷಣಿಕ ಕ್ಷೇತ್ರಕ್ಕೆ ಮಠಮಾನ್ಯಗಳು ಶೇ.75ರಷ್ಟು ವಿದ್ಯಾವಂತರನ್ನ ಸಮಾಜಕ್ಕೆ ಕಾಣಿಕೆಯಾಗಿ ನೀಡಿವೆ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ. ಬಸವ ಚೇತನ ಶ್ರೀ ಜಯದೇವ ಸ್ವಾಮೀಜಿಯವರ 60ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಅಂಗವಾಗಿ ಭಾನುವಾರ ಶ್ರೀ ಜಯದೇವಲೀಲೆ ಪ್ರವಚನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. 

Advertisement

ಚಿತ್ರದುರ್ಗ ಬೃಹನ್ಮಠದಂತಹ ಮಠಾಧೀಶರಾಗಿದ್ದ ಅವರು ತಮ್ಮ ಸಮಾಜಮುಖೀ, ಸಮಾಜಯೋಗಿಯಾಗಿ ಆಲೋಚನೆ ಮಾಡಿ ಉಚಿತ ಜಯದೇವ ಪ್ರಸಾದ ನಿಲಯ ಪ್ರಾರಂಭಿಸುವ ಮೂಲಕ ಮಹತ್ತರ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದವರು. ಸಾವಿರಾರು ಜನರ ಬದುಕಿಗೆ ಬೆಳಕಾದವರು ಎಂದು ಸ್ಮರಿಸಿದರು. ನೀರಿನ ಮೂಲದಿಂದ ಸೃಷ್ಟಿಯಾದ ಉಪ್ಪು, ಆಲೆಕಲ್ಲು ಕರಗುತ್ತದೆ. ಆದರೆ, ಮುತ್ತು ಕರುಗುವುದೇ ಇಲ್ಲ.

ಮುತ್ತುವಿನಂತೆ ಜೀವನ ನಡೆಸಿದವರು ಬಸವಾದಿ ಶರಣರು. ಅಂತಹವರ ಸಾಲಿನಲ್ಲಿ ಜಯದೇವ ಸ್ವಾಮೀಜಿಯವರು ಸಹ ಒಬ್ಬರು. ಬಸವಾದಿ ಶರಣರಂತೆಯೇ ಜಯದೇವ ಸ್ವಾಮೀಜಿಯವರು ಆದರ್ಶಕ್ಕೆ ಮಹತ್ವ ಕೊಟ್ಟವರು. ಅವರ ಯುಗವನ್ನು ಸುವರ್ಣ ಯುಗ ಎನ್ನಲಾಗುತ್ತದೆ. ಅವರು ಮಾಡಿರುವಂತಹ ಕಾಯಕ ಯುಗ ಯುಗ ಕಳೆದರೂ ಅವಿಸ್ಮರಣೀಯವಾಗಿರುತ್ತವೆ ಎಂದು ತಿಳಿಸಿದರು. 

ತ್ರಿವಿಧ ದಾಸೋಹ ಮೂರ್ತಿಗಳಾಗಿದ್ದ ಜಯದೇವ ಸ್ವಾಮೀಜಿಯವರು ದಾವಣಗೆರೆಯಲ್ಲಿ 1907 ರಲ್ಲಿ ಉಚಿತ ಪ್ರಸಾದ ನಿಲಯ ಪ್ರಾರಂಭಿಸುವ ಮೂಲಕ ಉಚಿತ ಪ್ರಸಾದ ನಿಲಯಕ್ಕೆ ಕಾರಣೀಭೂತರಾದರು. ಹಾಗಾಗಿಯೇ ಅವರನ್ನು ಉಚಿತ ಪ್ರಸಾದ ನಿಲಯಗಳ ಪಿತಾಮಹಾ, ಸಮಾಜಯೋಗಿ, ಯುಗಪುರುಷ, ಯುಗಪ್ರವರ್ತಕ ಎಂದೇ ಗುರುತಿಸಲ್ಪಡುತ್ತಾರೆ.

ಅವರು ಬೆಂಗಳೂರು, ಮೈಸೂರು, ಕೊಲ್ಲಾಪುರ, ತುಮಕೂರು ಇತರೆಡೆ ಪ್ರಾರಂಭಿಸಿದಂತಹ ಉಚಿತ ಪ್ರಸಾದ ನಿಲಯಗಳು ಶತಮಾನ ಕಂಡರೂ ಈ ಕ್ಷಣಕ್ಕೂ ಯಶಸ್ವಿಯಾಗಿ ನಡೆಯುತ್ತಿರುವುದಕ್ಕೆ ಅವರ ದೂರದೃಷ್ಟಿತ್ವವೇ  ಕಾರಣ ಎಂದು ತಿಳಿಸಿದರು. ಜಯದೇವಶ್ರೀಗಳು ಗುರುಗಳಿಗೇ ಗುರುಗಳಾಗಿದ್ದಂತಹವರು. ಕರ್ನಾಟಕದ ಏಕೀಕರಣಕ್ಕೆ ಮಹತ್ತರ ಕಾಣಿಕೆ ನೀಡಿದವರು. 

Advertisement

ರಾಷ್ಟ್ರಪಿತ ಮಹಾತ್ಮಗಾಂಧೀಜಿ 1937 ರಲ್ಲಿ ಹಾವೇರಿಯ ಹೊಂಡದಮಠದಲ್ಲಿ ಜಯದೇವಶ್ರೀಗಳು ಅವರನ್ನು ಭೇಟಿ ಮಾಡಿ, ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದರು. 12ನೇ ಶತಮಾನದಲ್ಲಿ ಬಸವಣ್ಣನವರು ನಡೆಸಿದ ಕ್ರಾಂತಿಯನ್ನು ಗಾಂಧೀಜಿಯವರಿಗೆ ತಿಳಿಸಿದ್ದರು. ಅಂತಹವರ ಸ್ಮರಣೆಯನ್ನು ನಿತ್ಯವೂ ಮಾಡಬೇಕು ಎಂದು ತಿಳಿಸಿದರು. ಜಯದೇವಶ್ರೀಗಳು ಚಿತ್ರದುರ್ಗ ಮಠಕ್ಕೆ ಬಂದಾಗ ಮಠದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಸಾಲದಲ್ಲಿತ್ತು.

ಅಂತಹ ಮಠವನ್ನು ಶ್ರೀಮಂತ ಮಠವನ್ನಾಗಿ ಮಾಡುವ ಮೂಲಕ ನವಕೋಟಿ ನಾರಾಯಣ ಎಂಬ ಹೆಸರನ್ನು ಪಡೆದಿದ್ದು ಅವರಲ್ಲಿನ ಕತೃìತ್ವ ಶಕ್ತಿಯ ಪ್ರತೀಕ ಎಂದು ತಿಳಿಸಿದರು. ಶ್ರೀ ಜಯದೇವ ಲೀಲೆ ಪ್ರವಚನ ನೀಡಿದ ಯಲಬುರ್ಗದ ಮಹಾಂತೇಶ್‌ ಶಾಸ್ತ್ರಿ ಮಾತನಾಡಿ, ಇಂದಿನ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲೂಕಿನ ಬಿನ್ನಾಳದಲ್ಲಿ ಚನ್ನಬಸವಯ್ಯ ಹಾಗೂ ಭ್ರಮರಾಂಬ ದಂಪತಿಗಳ ಪುಣ್ಯಗರ್ಭದಲ್ಲಿ ಜನಿಸಿದ

ಚನ್ನವೀರಯ್ಯ ಮುಂದೆ ಜಯದೇವ ಸ್ವಾಮೀಜಿಯಾಗಿ ಚಿತ್ರದುರ್ಗ ಮಠದ ಅಧಿಪತಿಯಾಗಿ ಸಮಾಜಕ್ಕೆ ಉತ್ತಮ ಸೇವೆ  ಸಲ್ಲಿಸಿದರು. ಜಯದೇವ ಸ್ವಾಮೀಜಿಯವರು ದೀಕ್ಷೆ, ಶಿಕ್ಷೆ ಮತ್ತು ಮೋಕ್ಷ ಎಂಬ ಮೂರು ಮಂತ್ರಗಳ ಮೂಲಕ ಸಮಾಜಮುಖೀಯಾದವರು ಎಂದು ತಿಳಿಸಿದರು. ಮಾಜಿ ಶಾಸಕ ಮೋತಿ ವೀರಣ್ಣ ಉದ್ಘಾಟಿಸಿದರು. ಡಾ| ಎಸ್‌.ಎಂ. ಎಲಿ ಇತರರು ಇದ್ದರು. ದಮಯಂತಿಗೌಡ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next