ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯು ಗತ ಯಕ್ಷವರ್ಷದ ತಿರುಗಾಟಕ್ಕೆ ಜೂ. 9 ರಂದು ಸಂಜೆ ಮಂಗಳವನ್ನಾಡಿತು. ವೇಷಭೂಷಣಗಳ ಜೊತೆಗೆ ಯಕ್ಷಚೌಕಿಗೆ ಪೂಜೆ ನೆರವೇರಿಸಿದ ಬಳಿಕ ಬಿಲ್ಲವರ ಭವನದ ಮಂದಿರ ದಲ್ಲಿ ಪ್ರತಿಷ್ಠಾಪಿತ ಬ್ರಹ್ಮಶ್ರೀ ನಾರಾ ಯಣ ಗುರುಗಳ ಪ್ರತಿಮೆಗೆ ಪೂಜೆ ನೆರವೇರಿಸಿ ಆರತಿಗೈದ ಮಂಡಳಿಯ ಸದಸ್ಯರು ಹಾಗೂ ಯಕ್ಷ ಕಲಾವಿದರು ಕೊನೆಯಲ್ಲಿ ಸಾಯಿಕೇರ್ ಲಾಜಿಸ್ಟಿಕ್ಸ್ ಸಂಸ್ಥೆಯ ಸುರೇಂದ್ರ ಎ. ಪೂಜಾರಿ ಪರಿವಾರದ ಪ್ರಾಯೋಜಕತ್ವದಲ್ಲಿ ವಿದ್ಯುನ್ಮತಿ ಕಲ್ಯಾಣ ಯಕ್ಷಗಾನ ಬಯಲಾಟ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಮಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನ ನೀಡಿ, ಕರ್ನಾಟಕದ ಗಂಡುಕಲೆ ಯಕ್ಷಗಾನ ಕಲೆಯ ಉಳಿವಿಗೆ ಹಗಲಿರುಳು ಎನ್ನದೆ ಶ್ರಮಿಸುವ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮತ್ತು ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಶ್ರಮ ಅಭಿನಂದನೀಯ. ಶ್ರೀ ಗುರು ನಾರಾಯಣ ಯಕ್ಷಗಾನ ಮಂಡ ಳಿಯು ಜಯ ಸಿ. ಸುವರ್ಣ ಅವರ ಮಾತೋಶ್ರೀ ದಿ| ಅಚ್ಚು ಸಿ. ಸುವರ್ಣ ಸ್ಮರಣಾರ್ಥ ವಾರ್ಷಿಕವಾಗಿ ಕೊಡಮಾಡುವ ಯಕ್ಷಗಾನ ಕಲಾ ಪ್ರಶಸ್ತಿ ಆಗಲಿ, ಅಸೋಸಿಯೇಶನ್‌ನ ಸಾಂಸ್ಕೃತಿಕ ಉಪ ಸಮಿತಿ ಆಯೋಜಿಸುತ್ತಿರುವ ಶ್ರೀ ಗುರುನಾರಾಯಣ ತುಳು ನಾಟಕ ಸ್ಪರ್ಧೆ ಅನುಕರಣೀಯ. ಒಟ್ಟಾರೆಯಾಗಿ ಈ ಬಿಲ್ಲವರ ಅಸೋಸಿಯೇಶನ್ ವಿಶ್ವದ ಬಿಲ್ಲವರ ಆಸ್ತಿಯಾದರೆ ನಾಡಿನ ಸಮಸ್ತ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ನುಡಿದು ಶುಭ ಹಾರೈಸಿದರು. ಅಂತೆಯೇ ಬರುವ ಸೆಪ್ಟೆಂಬರ್‌ನಲ್ಲಿ ಕನ್ಯಾಡಿ ಕ್ಷೇತ್ರದಲ್ಲಿ ಆಯೋಜಿಸಿರುವ ತನ್ನ ಪಟ್ಟಾಭೀಷೇಕ ದಶಮಾನೋತ್ಸವ ಸಂಭ್ರಮ ನಿಮಿತ್ತ ಶ್ರೀ ರಾಮ ತಾರಕ ಮಂತ್ರ ಯಜ್ಞ ಹಾಗೂ ಧರ್ಮ ಸಂಸದ್‌ನ ಯಶಸ್ಸಿಗೆ ಮುಂಬಯಿಯ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸಬೇಕು. ಹೆಚ್ಚಿನ ಮಾಹಿತಿ ಗಾಗಿ ನಿಮ್ಮವರೇ ಆದ ಹಾಗೂ ಭಾರತ್ ಬ್ಯಾಂಕ್‌ನ ನಿರ್ದೇಶಕ ಗಂಗಾಧರ್ ಜೆ. ಪೂಜಾರಿ ಅವರನ್ನು ಸಂಪರ್ಕಿಸುವಂತೆ ತಿಳಿಸಿದರು. ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಮತ್ತು ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಶ್ರೀಗಳಿಗೆ ಫಲಪುಷ್ಪಗಳಿಂದ ಗೌರವಿಸಿದರು.
ಸಭೆಯಲ್ಲಿ ಕನ್ಯಾಡಿ ಕ್ಷೇತ್ರದ ಸಂಚಾಲಕ ಕೃಷ್ಣಪ್ಪ ಪೂಜಾರಿ, ಅಸೋಸಿಯೇಶನ್‌ನ ಪದಾಧಿಕಾರಿ ಗಳು, ಮಾಜಿ ಅಧ್ಯಕ್ಷ ಎಲ್. ವಿ. ಅಮೀನ್, ಮಾಜಿ ಗೌರವ ಪ್ರಧಾನ ಕೋಶಾಧಿಕಾರಿ ಎನ್. ಎಂ. ಸನೀಲ್, ಭಾರತ್ ಬ್ಯಾಂಕಿನ ನಿರ್ದೇಶಕರು ಉಪಸ್ಥಿತರಿದ್ದು ಧಾರ್ಮಿಕ ಉಪ ಸಮಿತಿಯ ಕಾರ್ಯದರ್ಶಿ ರವೀಂದ್ರ ಶಾಂತಿ ಮತ್ತು ಬಳಗ ಭಜನೆ ನೆರವೇರಿಸಿತು.
ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮ ಪಾಲ ಜಿ. ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ್ ಆರ್. ಪೂಜಾರಿ ಅವರು ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್