Advertisement
ಬಾಗಲಕೋಟೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625ಕ್ಕೆ ಪಡೆದು ರಾಜ್ಯದ ಗಮನ ಸೆಳೆದ ತಾಲೂಕಿನ ಮುಚಖಂಡಿ ತಾಂಡಾ ನಂ.1ರ ಶ್ರೀ ದುರ್ಗಾದೇವಿ ಪ್ರೌಢಶಾಲೆಗೆ ಆರಂಭದ ಹಿಂದೆ ರೋಚಕ ಕಥೆಯೇ ಇದೆ.
Related Articles
Advertisement
ಮನೆ ಮನೆಗೆ ಹೋಗಿ ದೇಣಿಗೆ: ತಾಂಡಾದ ತಾವರಪ್ಪ, ದೇನಪ್ಪ, ವೈಆರ್. ಲಮಾಣಿ, ಭೀಮಪ್ಪ ಲಮಾಣಿ ಮುಂತಾದವರೆಲ್ಲ ಕೂಡಿ 1987-88ರಲ್ಲಿ ತಂಡಾದ ಮನೆ ಮನೆಗೆ ಹೋಗಿ ಬಾಲ್ಯ ವಿವಾಹ ತಡೆಯೋಣ ಎಂಬ ಜಾಗೃತಿ ಮೂಡಿಸಲಿಲ್ಲ. ಬದಲಾಗಿ ಮನೆ ಮನೆಗೆ ಹೋಗಿ ನಿಮ್ಮಲ್ಲಿರುವ 10ರೂದಿಂದ ಹಿಡಿದು 100 ರೂ. ಕೊಡಿ. ನಮ್ಮೂರಲ್ಲಿ ಶಾಲೆ ಕಟ್ಟೋಣ. ನಮ್ಮ ಹೆಣ್ಣು ಮಕ್ಕಳಿಗೂ ಶಿಕ್ಷಣ ಕೊಡಿಸೋಣ ಎಂದು ಬೇಡಿಕೊಂಡರು. ಇದಕ್ಕೆ ಬಹುತೇಕರು, ತಮ್ಮಲ್ಲಿರುವ ಒಂದಷ್ಟು ಹಣ ಕೊಟ್ಟರು. ಆಗ ಹುಟ್ಟಿಕೊಂಡಿದ್ದೇ ಶ್ರೀ ದುರ್ಗಾದೇವಿ ಪ್ರೌಢಶಾಲೆ.
ಪ್ರಾಥಮಿಕ ಶಾಲೆಗಾಗಿ ಸರ್ಕಾರಿ ಶಾಲೆ ಇತ್ತು. ಪ್ರೌಢಶಾಲೆಗಾಗಿ ನಗರಕ್ಕೆ ಹೋಗುವ ಬದಲು, ತಾಂಡಾದಲ್ಲೇ ಚಿಕ್ಕದಾಗಿ ಶಾಲೆ ಆರಂಭಿಸಿದರು. ಶಿಕ್ಷಕರ ಸಂಬಳ ಕೊಡಲೂ ಹಣ ಇರಲಿಲ್ಲ. ಕಟ್ಟಡ ಕಟ್ಟಲೂ ಆಗಲಿಲ್ಲ. ಆದರೂ, ದೃತಿಗೆಡದೇ ಎಲ್ಲರೂ ತಮ್ಮ ಹೊಲದಲ್ಲಿ ಬೆಳೆದ ಬೆಳೆ ಮಾರಿ, ಶಿಕ್ಷಕರ ಸಂಬಳ ಕೊಟ್ಟು ಶಾಲೆ ಮುನ್ನಡೆಸಿದರು. ಅದರ ಫಲವಾಗಿ ಇದೀಗ ಇಡೀ ತಾಂಡಾದಲ್ಲಿ ಬಹುತೇಕ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಹಕಾರಿಯಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಚಖಂಡಿ ತಾಂಡಾ ನಂ.1ರ ಯುವಕ-ಯುವತಿಯರು, ಹಿರಿಯರು ಹಲವು ಉನ್ನತ ಹುದ್ದೆಯಲ್ಲಿದ್ದಾರೆ. ಅದರಲ್ಲೂ ಪೊಲೀಸ್, ಕಂದಾಯ, ಸಾರಿಗೆ ಸಂಸ್ಥೆ ಹೀಗೆ ಹಲವು ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇಂದಿಗೂ ಸಂಕಷ್ಟ: ಇಂತಹವೊಂದು ಅದ್ಭುತ ಪರಿಕಲ್ಪನೆಯ ಶಾಲೆ ಇಂದಿಗೂ ಸಂಕಷ್ಟ ಎದುರಿಸುತ್ತಲೇ ಇದೆ. ಶಾಲೆಯ ಪರಿಕಲ್ಪನೆ ಗೊತ್ತಿಲ್ಲದ ಸರ್ಕಾರ ಅಥವಾ ಅಧಿಕಾರಿಗಳು, ಇದರ ನೆರವಿಗೆ ಬರುವ ಪ್ರಯತ್ನ ಮಾಡಿಲ್ಲ. ಆದರೂ, ತಾಂಡಾದ ಪ್ರಮುಖರು, ತಮ್ಮೂರ ಶಾಲೆಗೆ ಯಾವುದೇ ಸಮಸ್ಯೆ ಎದುರಾದರೂ ಬೆನ್ನೆಲುಬಾಗಿ ನಿಂತಿದ್ದಾರೆ.