ಮುಂಬಯಿ: ನಲ ಸೋಪರ ಪಶ್ಚಿಮದಲ್ಲಿ ಕಾರಣಿಕ ಕ್ಷೇತ್ರವಾಗಿ ಪ್ರಸಿದ್ಧಿಯನ್ನು ಪಡೆದ ಶ್ರೀ ಧರ್ಮ ಮಾರಿಯಮ್ಮ ದೇವಸ್ಥಾನದಲ್ಲಿ ವಾರ್ಷಿಕ ನವರಾತ್ರಿ ಉತ್ಸವವು ಅ. 10 ರಂದು ಪ್ರಾರಂಭಗೊಂಡಿದ್ದು, ಅ. 19 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಅರ್ಚಕ ವಿಶ್ವನಾಥ್ ಭಟ್ ಅವರ ಪೌರೋಹಿತ್ಯದಲ್ಲಿ ಅ.10 ರಂದು ಬೆಳಗ್ಗೆ ಕಲಶ ಪ್ರತಿಷ್ಠಾಪನೆಯೊಂದಿಗೆ ಪ್ರಾರಂಭಗೊಂಡ ಉತ್ಸವವು ದಿನಂಪ್ರತಿ ಭಜನೆ, ವಿಶೇಷ ಪೂಜೆ, ಮಂಗಳಾರತಿಯೊಂದಿಗೆ ವಿಧಿವತ್ತಾಗಿ ನಡೆಯಿತು. ಅ. 17ರಂದು ಶ್ರೀಕ್ಷೇತ್ರದಲ್ಲಿ ಪೂರ್ವಾಹ್ನ 11.30 ರಿಂದ ಚಂಡಿಕಾ ಯಾಗ ನಡೆಯಿತು. ಆನಂತರ ಯಾಗದ ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಬಹು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಅ. 19ರಂದು ದಸರಾ ವಿಜಯ ದಶಮಿಯ ಪೂಜಾ ಕೈಂಕರ್ಯಗಳು ನೆರವೇರಿತು. ಮಧ್ಯಾಹ್ನ 12 ರಿಂದ ಮಹಾಪೂಜೆ, ಮಹಾಮಂಗಳಾತಿ ನಡೆಯಿತು. ಅಲ್ಲದೆ ಮಧ್ಯಾಹ್ನ 1ರಿಂದ ಮಹಾ ಅನ್ನದಾನವನ್ನು ಆಯೋಜಿಸಲಾಗಿತ್ತು. ಸಂಜೆ 5 ರಿಂದ ದೇವಸ್ಥಾನದ ಸದಸ್ಯರಿಂದ, ಸ್ಥಳೀಯರಿಂದ ಭಜನಾ ಕಾರ್ಯಕ್ರಮ, ಸಂಜೆ 6.30ರಿಂದ ದೇವಿ ಆವೇಶ ದರ್ಶನ, ಬಲಿ ಉತ್ಸವ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನೆರವೇರಿತು. ನವರಾತ್ರಿ ಉತ್ಸವದಲ್ಲಿ ತುಳು-ಕನ್ನಡಿಗ ಭಕ್ತಾದಿಗಳಲ್ಲದೆ, ಅನ್ಯಭಾಷಿಗ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.
ತುಳು-ಕನ್ನಡಿಗರಿಂದ ಪ್ರಾರಂಭ ದಲ್ಲಿ ಶನಿ ಮಂದಿರವಾಗಿ ಸ್ಥಾಪನೆಗೊಂಡು ಆನಂತರ ದೇವಸ್ಥಾನ ದಲ್ಲಿ ಶ್ರಿ ಧರ್ಮ ಮಾರಿಯಮ್ಮ, ಶ್ರೀ ಶನಿದೇವರು, ಶ್ರೀ ದುರ್ಗಾ ಪರಮೇಶ್ವರಿ, ಶ್ರೀ ಮಹಾಕಾಳಿ, ಶ್ರೀ ಗಣಪತಿ, ಶ್ರೀ ರುದ್ರದೇವರ ಗುಡಿಗಳನ್ನು ಸ್ಥಾಪಿಸಲಾಗಿದೆ. ಪ್ರತೀ ದಿನ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳಲ್ಲದೆ, ಉತ್ಸವದ ಸಂದರ್ಭದಲ್ಲಿ ವಿಶೇಷ ಸೇವೆಗಳು ನಡೆಯುತ್ತಿವೆ.
ಚಾರಿಟೆಬಲ್ ಟ್ರಸ್ಟ್ ಅಧೀನದಲ್ಲಿ ರುವ ದೇವಸ್ಥಾನವು ಜೀರ್ಣೋದ್ಧಾರ ಯೋಜನೆಯನ್ನು ಹೊಂದಿದ್ದು, ಭವಿಷ್ಯದಲ್ಲಿ ಬೃಹತ್ ಮಂದಿರವಾಗಿ ನಲಸೋಪರ ಪರಿಸರ ದಲ್ಲಿ ತಲೆಎತ್ತಲಿದೆ.
ಚಿತ್ರ-ವರದಿ : ರಮೇಶ್ ಉದ್ಯಾವರ