Advertisement

ಜನರಿಗೆ ಜಿನರಾಗಿ ಜನಮನದಿ ಚಿರವಾಗುಳಿದ ಚಾರುಕೀರ್ತಿ ಶ್ರೀ

01:27 PM Dec 05, 2024 | Team Udayavani |

ಕರ್ಮಯೋಗಿ ಸ್ವಸ್ತಿಶ್ರೀಗಳವರಿಂದ ದೀಕ್ಷೆ ಸ್ವೀಕರಿಸಿರುವ ಪ್ರಸಕ್ತ ಪೀಠಾಧೀಶರಾಗಿರುವ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಅರ್ಥಪೂರ್ಣವಾಗಿ ತಮ್ಮ ದೀಕ್ಷಾಗುರುಗಳ ದೂರದರ್ಶಿತ್ವದ ಮಾರ್ಗದರ್ಶನ ಚಾಚೂ ತಪ್ಪದೇ ಪರಿ ಪಾಲಿಸುತ್ತಿದ್ದಾರೆ. ಗುರುಭಕ್ತಿ ಸಮರ್ಪಣೆಗಾಗಿ ‘ನಿಷಿಧಿ ಮಂಟಪ’ ನಿರ್ಮಿಸಿ ಪಾದಚರಣ ಪ್ರತಿ ಷ್ಠಾಪಿಸಿ ನಿತ್ಯವೂ ಸ್ಮರಿಸುವಂತೆ ಭಕ್ತವೃಂದದವರಿಗೆ ಕರೆ ನೀಡಿರುವುದು ಧರ್ಮಸ್ಪರ್ಶ ನೀಡಿದಂತಾಗಿದೆ.

Advertisement

ಸ್ವಸ್ತಿಶ್ರೀಗಳವರು ಐವತ್ಮೂರು ವರ್ಷಗಳ ಕಾಲ ಭಟ್ಟಾರಕ ಪೀಠಾಧಿಕಾರಿಯಾಗಿ, ನಿಜ ಅರ್ಥದಲ್ಲಿ ಪಂಡಿತಾಚಾರ್ಯವರ್ಯ ಎಂದೇ ಗೌರವಾದರಗಳಿಗೆ ಪಾತ್ರರಾಗಿದ್ದರು. ಜೈನಧರ್ಮಶಾಸ್ತ್ರ ಗ್ರಂಥಗಳ ಸ್ವಾದ್ಯಾಯ, ಸಂಶೋಧನೆಯಿಂದ ಗುರು ಗಳಾಗಿದ್ದರು. ಅವರು ಕರ್ನಾಟಕದ ಎಲ್ಲ ಜಿನಮಂದಿರಗಳ ದರ್ಶನ ಮಾಡಿದ್ದರಲ್ಲದೇ ಶಿಥಿಲಾ ವಸ್ಥೆಯ ಜೈನ ಬಸದಿಗಳ ಸಂರಕ್ಷಣೆಗೆ ಪ್ರೇರಣೆ ನೀಡಿದ್ದರು. 1981ನೇ ಇಸವಿಯಲ್ಲಿ ಶ್ರವಣಬೆಳಗೊಳದ ಗೊಮ್ಮಟೇಶ್ವರ ಶ್ರೀ ಬಾಹುಬಲಿ ಸ್ವಾಮಿಯ ಏಕಶಿಲಾ ವಿಗ್ರಹದ ಸಹಸ್ರಾಬ್ದ ಪ್ರತಿಷ್ಠಾ ಮಹೋತ್ಸವ ಮಹಾಮಸ್ತಕಾಭಿಷೇಕವನ್ನು ವಿಶ್ವವ್ಯಾಪಿ ಜೈನ ಸಿದ್ಧಾಂತ, ಬಾಹುಬಲಿಯ ತ್ಯಾಗ-ಅಹಿಂಸಾ ತಣ್ತೀ ವನ್ನು ಪಸರಿಸುವಂತೆ ಆಯೋಜಿ ಸಿದ್ದರು. ದೇಶದಾದ್ಯಂತದಿಂದ ಸರ್ವಧರ್ಮ ಸಮ ನ್ವಯ ಸಮ್ಮೇಳನಕ್ಕೆ ವಿವಿಧ ಪೀಠಾಧೀಶರನ್ನು, ಧರ್ಮ ಮಾರ್ಗ ದರ್ಶಕರನ್ನು ಆಹ್ವಾನಿಸಿದ್ದರು. ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಸ್ವಸ್ತಿಶ್ರೀಗಳವರಿಗೆ ‘ಕರ್ಮ ಯೋಗಿ’ ಉಪಾಧಿ ನೀಡಿ, ಗೌರವ ಸಲ್ಲಿಸಿದುದು ಚರಿತ್ರಾರ್ಹ. 575 ಶಿಲಾಶಾಸನ ಹೊಂದಿರುವ ಶ್ರವಣ ಬೆಳ ಗೊಳದ 60ಕ್ಕೂ ಹೆಚ್ಚು ಜಿನಾಲಯಗಳ ಸಂರಕ್ಷಣೆ ಮತ್ತು ಇತಿಹಾಸ ಪ್ರಕಟನೆಗೆ ಪೂರಕ ಯೋಜನೆ ಅನು ಷ್ಠಾನಗೊಳಿಸಿದರು. ಅಭಯದಾನ, ಔಷಧ ದಾನ, ವಿದ್ಯಾದಾನ, ಆಹಾರದಾನದ ಮಹತ್ವವನ್ನು ಸಾದರಪಡಿಸಿದರು.

ಶ್ರವಣಬೆಳಗೊಳ ಸ್ವಾಮಿಗಳವರೊಂದಿಗೆ ಎಲ್ಲ ಧರ್ಮೀಯ ಪೀಠಾಧಿಕಾರಿಗಳಿಗೆ ಆತ್ಮೀಯತೆ ಬೆಳೆಯಿತು. ವಿವಿಧ ಧರ್ಮಗಳ ಅನುಯಾಯಿಗಳಾಗಿದ್ದರೂ ಸಾತ್ವಿಕ, ಸರಳ, ಸುಸಂಸ್ಕೃತ ಜೀವನ ನಿರ್ವಹಣೆಗೆ ಮಾರ್ಗದರ್ಶಕರಾದರು. ಸಾಹಿತ್ಯ, ಸಂಗೀತ, ಚಿತ್ರಕಲೆ, ಶಿಲ್ಪಕಲೆ, ವಾಸ್ತುವಿನ್ಯಾಸ-ನಾನಾ ವಿಧದ ಜನಪದ ಕಲೆಗಳ ಉಳಿವಿಗಾಗಿ ಆಸಕ್ತಿ ಹೊಂದಿದ್ದರು. ತುಳು ಭಾಷೆಯಾಗಿದ್ದರೂ ಕನ್ನಡ, ಪ್ರಾಕೃತ, ಸಂಸ್ಕೃತ- ತೆಲುಗು- ತಮಿಳು- ಮಲಯಾಳ-ಮರಾಠಿ, ಹಿಂದಿ, ಬಂಗಾಲಿ, ಗುಜರಾತಿ ಭಾಷೆಗಳಲ್ಲದೇ ಇಂಗ್ಲಿಷ್‌ ಭಾಷಾ ಪ್ರೌಢಿಮೆ ಸಂಪಾ ದಿಸಿದರು. ಅವರ ಗ್ರಂಥಾಲಯವು ವಿಶ್ವಕೋಶ- ಜ್ಞಾನಾಲಯವಿದ್ದಂತೆ! ಇಂತಹ ಕೃತಿ ಓದಿ ಎಂದು ಪುಸ್ತಕಗಳನ್ನು ಕೈಯಾರೆ ನೀಡುತ್ತಿದ್ದರು. ಕೃತಿ ಅವಲೋಕನಕ್ಕಾಗಿ ಸಮಯವನ್ನು ಮೀಸಲಿ ಡುತ್ತಿದ್ದರು. ವಿದ್ವಾಂಸರು, ಸಾಹಿತಿಗಳು ಸ್ವಾಮಿಗಳ ವರೊಂದಿಗೆ ಶ್ರವಣಬೆಳಗೊಳದಲ್ಲಿ ಉಳಿದು ಕೊಂಡು ಜಿಜ್ಞಾಸೆಗಳ ತುಲನಾತ್ಮಕ ಚರ್ಚೆ ನಡೆಸು ತ್ತಿದ್ದರು. ಪ್ರಕೃತಿ ಎಂದರೆ ಅವರ ಭಾವನೆಗಳನ್ನು ಅನಾವರಣಗೊಳಿಸುವ ದೇಗುಲವೇ ಆಗಿತ್ತು. ವನಪ್ರದೇಶ, ನದಿ ತಟ, ಸಮುದ್ರ ತೀರ, ಕೃಷಿತೋಟ ವೀಕ್ಷಣೆ ಮಾಡಿಕೊಳ್ಳುತ್ತಿದ್ದರು. ಪ್ರಾಣಿ-ಪಕ್ಷಿಗಳೆಂದರೆ ಅಚ್ಚುಮೆಚ್ಚು. ದಿನನಿತ್ಯವೂ ಪ್ರಾಣಿ-ಪಕ್ಷಿಗಳಿಗೆ ಅಹಾರ ನೀಡಿ ಸಂತಸಪಡುತ್ತಿದ್ದರು. ಮಾವು, ಬಾಳೆ ಹಣ್ಣುಗಳನ್ನು ಶ್ರೀಮಠದ ಬಳಿಯಲ್ಲಿ ಆಶ್ರಯ ಪಡೆದಿದ್ದ ಮಂಗಗಳು ಅವರ ಕೈಯಿಂದಲೇ ಸ್ವೀಕರಿಸು ತ್ತಿದ್ದವು. ‘ಜೀವಿಸು, ಜೀವಿಸಲು ಸಹಕರಿಸು’ ಎಂಬ ತಣ್ತೀ ಪಾಲಿಸುತ್ತಿದ್ದರು.

ಸರ್ವಧರ್ಮ ಸಮನ್ವಯ, ಪ್ರಕೃತಿ ಪರಿಸರ ಸಂರಕ್ಷಣೆ, ಭಾರತೀಯ ಸನಾತನ ಧರ್ಮ- ಧಾರ್ಮಿಕ ವಿಧಿವಿಧಾನ ಪರಂಪರೆ, ಹಸ್ತಪ್ರತಿ- ಧರ್ಮ ಶಾಸ್ತ್ರ ಗ್ರಂಥಗಳ ರಕ್ಷಣೆ, ಸಾಹಿತ್ಯ- ಲಲಿತ ಕಲೆ-ನೃತ್ಯ-ನಾಟಕ-ಜನಪದ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರವಣಬೆಳಗೊಳದ ಪೂರ್ವಭಟ್ಟಾರಕ ರಾಗಿದ್ದ ಕರ್ಮಯೋಗಿ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ಸಂಸ್ಮರಣೆಗಾಗಿ ‘ನಿಷಿಧಿ ಮಂಟಪ’ ನಿರ್ಮಿಸಿ, ಶ್ರವಣಬೆಳಗೊಳದಲ್ಲಿ ಲೋಕಾರ್ಪಣೆ ಕಾರ್ಯಕ್ರಮ ಔಚಿತ್ಯಪೂರ್ಣವಾದುದು.

ಕ್ರಿಸ್ತಶಕ 9ನೇ ಶತಮಾನದಿಂದ ಮೊದಲ್ಗೊಂಡು ಶ್ರೀಮತಿಸಾಗರ ಭಟ್ಟಾರಕರು ಆದಿಯಾಗಿ ಶ್ರೀ ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿ, ಶುಭಚಂದ್ರ ಭಟ್ಟಾರಕ ಪಂಡಿತಾಚಾರ್ಯರು ಒಳಗೊಂಡು ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕರ ವರೆಗೂ ಧರ್ಮಕ್ಕೆ, ಸಮಾಜಕ್ಕೆ, ರಾಜ್ಯಕ್ಕೆ ಬೆಳಕಾಗಿ ನಿಂತಿರುವ ಗುರು  ಪರಂಪರೆ ನಮ್ಮದಾಗಿದೆ. ಕೆರೆಕಟ್ಟೆಗಳ ನಿರ್ಮಾಣ, ಜಿನಬಸದಿಗಳ ಜೀರ್ಣೋದ್ಧಾರ, ಶೈಕ್ಷಣಿಕ ಸಂಸ್ಥೆಗಳು, ಗುರುಕುಲಗಳ ಸ್ಥಾಪನೆ, ಧರ್ಮಪ್ರಭಾವನೆ, ಕ್ಷೇತ್ರಗಳ ನಗರೀಕರಣ ಸೇರಿದಂತೆ ಚತುರ್ವಿಧ ದಾನ ಪರಂಪರೆಯನ್ನು ಮುಂದು ವರಿಸಿಕೊಂಡು ಬಂದ ಹೆಗ್ಗಳಿಕೆಯನ್ನು ಶ್ರವಣಬೆಳಗೊಳದ ಧರ್ಮ ಪೀಠ ಪರಂಪರೆ ಒಳಗೊಂಡಿದೆ. ಆಗಮ ಭಾಷೆಯಾದ ಪ್ರಾಕೃತ, ಸಂಸ್ಕೃತ ಸೇರಿದಂತೆ ಕನ್ನಡ ನಾಡಿನ ಭಾಷೆಯಾದ ಕನ್ನಡ ಭಾಷಾ ಸಂಸ್ಕೃತಿಯೊಂದಿಗೆ ನಾಡು-ನುಡಿಯನ್ನು ಬೆಳೆ ಸಿದ ಕೀರ್ತಿಯನ್ನು ಹೊಂದಿದೆ. ಅಲ್ಲದೆ ಕನ್ನಡ ನಾಡಿನ ಹಿರಿಮೆ-ಗರಿಮೆಗಳನ್ನು ಎತ್ತಿ ಹಿಡಿದು ಅಪಾರ ಮನ್ನಣೆಗೆ ಪಾತ್ರರಾದ ಧರ್ಮಪೀಠವಾಗಿದೆ.

Advertisement

ಶ್ರವಣಬೆಳಗೊಳ ಗುರುಪೀಠವು ಗಂಗಾ, ಹೊಯ್ಸಳ, ವಿಜಯನಗರ, ಮೈಸೂರು ಸಾಮ್ರಾಜ್ಯದ ಅರಸರಿಂದ ಗುರುಮನ್ನಣೆಗೆ ಪಾತ್ರ ವಾಗಿ ಬೆಳಗಿದ ಪರಂಪರೆಯನ್ನು ಹೊಂದಿದೆ. ಅಲ್ಲದೆ ಪ್ರಮುಖ ದಿಗಂಬರಾಚಾರ್ಯರು ಧರ್ಮಪೀಠ ವನ್ನು ಅಲಂಕರಿಸಿ ಧರ್ಮ ಪ್ರಭಾವನೆ, ರಕ್ಷಣೆ ಯೊಂದಿಗೆ ಆತ್ಮಕಲ್ಯಾಣದ ಹಾದಿಯಲ್ಲಿ ನಡೆದು ಶ್ರೀಪೀಠ ಪರಂಪರೆಯನ್ನು ಪ್ರಾಜ್ವಲ್ಯಮಾನಗೊಳಿಸಿದ್ದಾರೆ.

ಈ ಪರಂಪರೆಯಲ್ಲಿ ಬಂದ 33ನೇ ಭಟ್ಟಾರಕರಾಗಿ ಪಟ್ಟಾಭಿಷಿಕ್ತರಾಗಿ 20-21ನೇ ಶತಮಾನದಲ್ಲಿ ಶ್ರವಣಬೆಳಗೊಳದ ಕೀರ್ತಿ ಪತಾಕೆಯನ್ನು ವಿಶ್ವದೆತ್ತರಕ್ಕೆ ಕೊಂಡೊಯ್ದ ಭಟ್ಟಾರಕ ಗುರುಗಳೆಂದರೆ ನಮ್ಮ ದೀಕ್ಷಾ ಗುರುಗಳಾದ ಭಟ್ಟಾರಕ ಚೂಡಾಮಣಿ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು. ಜ್ಞಾನಕ್ಕೆ ಬೆಳಕಾಗಿ, ಧ್ಯಾನಕ್ಕೆ ಗುರುವಾಗಿ, ಧರ್ಮಕ್ಕೆ ಉಸಿರಾಗಿ, ತ್ಯಾಗಕ್ಕೆ ತನುವಾಗಿ, ಸತ್ಯಕ್ಕೆ ಪಥವಾಗಿ, ಮೈತ್ರಿಗೆ ಮರವಾಗಿ, ಜಿನರಿಗೆ ಸಖರಾಗಿ, ಜನರಿಗೆ ಜಿನರಾಗಿ ಜನಮನದಿ ಚಿರವಾಗಿ ಉಳಿದವರು.

ನಿಷಿಧಿ ಮಂಟಪದಲ್ಲಿ ಏನಿದೆ?
ಹಾಸನ: ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಜಿನೈಕ್ಯರಾಗಿ 2 ವರ್ಷ ಸಮೀಪಿಸುತ್ತಿದೆ. ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಶ್ರವಣಬೆಳಗೊಳದ ಚಂದ್ರಗಿರಿ (ಚಿಕ್ಕಬೆಟ್ಟ) ತಪ್ಪಲಿನಲ್ಲಿ ನೆರವೇರಿದ್ದ ಸ್ಥಳ ಇದೀಗ ನಿಷಿಧಿ ಮಂಟಪವಾಗಿ ರೂಪುಗೊಂಡಿದ್ದು, ಡಿ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಷಿಧಿ ಮಂಟಪವನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮ ನಿಗದಿಯಾಗಿದೆ. ಆಂಧ್ರಪ್ರದೇಶದಿಂದ ತರಿಸಿದ ವಿಶೇಷ ಶಿಲೆಯಿಂದ ನಿಷಿಧಿ, 7 ಅಡಿ ಎತ್ತರ, 6 ಅಡಿ ಅಗಲದ ಮಂಟಪ ನಿರ್ಮಿಸಲಾಗಿದೆ. ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಬಳಸುತ್ತಿದ್ದ ಪಾದುಕೆಗಳನ್ನೂ ಮಂಟಪದ ಬಳಿ ಪ್ರತಿಷ್ಠಾಪಿಸಲಾಗಿದೆ. ಪೂರ್ವ ಜಿನೈಕ್ಯ ಭಟ್ಟಾರಕ ಸ್ವಾಮೀಜಿಗಳ ನಿಷಿಧಿ ಮಂಟಪಗಳೂ ಬೆಟ್ಟದಲ್ಲಿ ನಿರ್ಮಾಣವಾಗಿದ್ದರೂ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವ ನಿಷಿಧಿ ಮಂಟಪ ಬೃಹತ್‌ ಹಾಗೂ ವಿಶೇಷ ಅಕರ್ಷಣೀಯವಾಗಿದೆ. ಜತೆಗೆ ಇದೀಗ ಪೂರ್ವಭಟ್ಟಾರಕರ ನಿಷಿಧಿ ಬೆಟ್ಟಕ್ಕೆ ಇದೀಗ ಹೊಸದಾಗಿ 124 ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆ. ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಯವರು ಮಾವಿನ ಹಣ್ಣಿನ ಪ್ರಿಯರು. ಹೀಗಾಗಿ, ಬೆಟ್ಟದ ಪರಿಸರದಲ್ಲಿ ಮಾವಿನ ಗಿಡಗಳನ್ನು ನೆಡಲಾಗಿದ್ದು, ಮಂಟಪ ಲೋಕಾರ್ಪಣೆಯ ದಿನ 10 ಸಾವಿರ ಮಾವಿನ ಗಿಡಗಳ ವಿತರಣೆಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next