Advertisement
ಹದಿನಾರನೆಯ ಶತಮಾನದ ಹೊತ್ತಿಗೆ ಭಾರತದ್ದು ಪ್ರಕ್ಷುಬ್ಧ ಪರಿಸ್ಥಿತಿ. ಮ್ಲೆತ್ಛರ ಆಕ್ರಮಣ, ಆಗಮನಗಳೆರಡೂ ಆಗಿದ್ದವು. ಭಾರತದ ಹಿಂದೂ ರಾಜರು ತಮ್ಮ ನೆಲೆ ಕಳಕೊಂಡಿದ್ದರು. ಬಹುತೇಕರು ಪದಚ್ಯುತರಾಗಿ ಸ್ವರಾಜ್ಯಸ್ಥಾಪನೆಯ ಕನಸು ಕಾಣುತ್ತಿದ್ದರು. ಇಸ್ಲಾಂ ರಿಲಿಜನ್ ನಿಧಾನವಾಗಿ ಎಲ್ಲೆಡೆ ಪಸರಿಸತೊಡಗಿತ್ತು. ಕ್ರಿಶ್ಚಿಯಾನಿಟಿಯ ಪ್ರವೇಶವೂ ಆಗಿಬಿಟ್ಟಿತ್ತು. ಭಾರತದ ಸನಾತನ ಸಂಸ್ಕೃತಿಗೆ ಬಹು ದೊಡ್ಡ ಹೊಡೆತ ಬಿದ್ದಿತ್ತು. ಗುರುಕುಲಗಳಿಗೆ ರಾಜಾಶ್ರಯ ತಪ್ಪಿತ್ತು. ವೇದ-ವೇದಾಂತಗಳನ್ನು ಓದಿಕೊಂಡವರ ಬದುಕು, ಭವಿಷ್ಯಗಳು ಅನಿಶ್ಚಿತವಾಗಿದ್ದವು. ಈ ಸಂದರ್ಭದಲ್ಲಿ ಜನಜಾಗೃತಿಯ ಮೂಲಕ ಭಕ್ತಿಪರಂಪರೆಯ ಪುನರುಜ್ಜೀವನ ಮಾಡಲು ಯತ್ನಿಸಿದ ಹಲವು ಸಾಧಕರಲ್ಲಿ ಎದ್ದು ಕಾಣುವ ವಿಶಿಷ್ಟ ವ್ಯಕ್ತಿತ್ವ ಶ್ರೀಕೃಷ್ಣಚೈತನ್ಯರದು.
Related Articles
Advertisement
ಶ್ರೀ ಚೈತನ್ಯರು ಕರ್ಮಯೋಗದ ಮಹತ್ವವನ್ನು ಹೇಳಿದ ರೀತಿಯೂ ವಿಶಿಷ್ಟವೇ. ಅವರ ಜೀವಿತದ ಬಹುಪಾಲು ಭಾಗ ಕಳೆದುದು ಪುರಿಯ ಜಗನ್ನಾಥನ ಸನ್ನಿಧಿಯಲ್ಲಿ. ಸನ್ಯಾಸ ವನ್ನು ಸ್ವೀಕರಿಸಿದ ಅನಂತರದ ಹದಿನೆಂಟು ವರ್ಷ ಗಳನ್ನು ಶ್ರೀ ಚೈತನ್ಯರು ಅಲ್ಲಿ ಕಳೆದರು. ಅಲ್ಲಿದ್ದಷ್ಟೂ ಸಮಯವೂ ಗಾನ, ಸಂಕೀರ್ತನೆಗಳು ನಿರಂತರ ವಾಗಿ ನಡೆದವು. ಅವರನ್ನು ನೋಡಲು ಪ್ರತಿನಿತ್ಯ ಜನ ದಂಡುಕಟ್ಟಿಕೊಂಡು ಬರುವುದು, ಅವರಲ್ಲಿ ಹಲವರು ಶ್ರೀ ಚೈತನ್ಯರ ಪ್ರಭಾವಲಯಕ್ಕೆ ಸೆಳೆಯಲ್ಪಟ್ಟು ಅಲ್ಲೇ ಅವರೊಂದಿಗೆ ಒಂದಿಲ್ಲೊಂದು ಸೇವೆ ಮಾಡುತ್ತ ಉಳಿದುಬಿಡು ವುದೂ ನಡೆಯುತ್ತಿತ್ತು. ಶ್ರೀ ಚೈತನ್ಯರು ಪುರಿಯಿಂದ ವೃಂದಾವನಕ್ಕೆ ಹೊರಟು, ಅಲ್ಲಿ ಪಾಳುಬಿದ್ದಿದ್ದ ಅನೇಕ ದೇವಾಲಯಗಳನ್ನು ದುರಸ್ತಿ ಮಾಡಿಸಿದರು. ಹಾಗೆಯೇ ಪುರಿಯಲ್ಲೂ ಜಗನ್ನಾಥನ ವಾರ್ಷಿಕ ರಥೋತ್ಸವದ ಹಿಂದಿನ ದಿನ ಅವರು ಇಡೀ ದೇವಾಲಯದ ಪ್ರಾಂಗಣವನ್ನು ತನ್ನ ಶಿಷ್ಯರೊಂದಿಗೆ ಸೇರಿ ಶುಚಿಗೊಳಿಸುವ, ಪುರಿಯನ್ನು ರಥೋತ್ಸವಕ್ಕೆ ಅಣಿಗೊಳಿಸುವ ಕೆಲಸಕ್ಕೆ ಟೊಂಕಕಟ್ಟಿ ನಿಂತರು. ಆ ಮಹಾ ದೇಗುಲ ಪ್ರಾಕಾರದ ಉದ್ದಗಲಕ್ಕೂ, ಒಂದಿಂಚೂ ಬಿಡದಂತೆ ಭಕ್ತಗಡಣ ಸಂಪೂರ್ಣವಾಗಿ ಶುಚಿಗೊಳಿಸಿತು (ಈ ಕ್ರಮ, ಇಂದಿಗೂ ಆನೂಚಾನ ನಡೆದುಬಂದಿದೆ!). ದೇವರ ಪ್ರೀತಿಯನ್ನು ಗೆಲ್ಲುವುದೆಂದರೆ ದೊಡ್ಡ ಗ್ರಂಥಗಳ ಪಠನ, ಪಾರಾಯಣ ಮಾತ್ರವಲ್ಲ; ಹರೇ ಕೃಷ್ಣದಂಥ ಹದಿನಾರು ನುಡಿಗಳ ಸರಳ ಶ್ಲೋಕದ ಪಾರಾಯಣವೂ ಸೈ; ಮೈಮುರಿದು ಶ್ರಮವಹಿಸಿ ಮಾಡುವ ದೈಹಿಕ ಕೆಲಸವೂ ಸೈ ಎಂಬುದು ಶ್ರೀ ಚೈತನ್ಯರ ಸಂದೇಶ.
ಹೀಗೆ ದೇವರನ್ನು ಮುಟ್ಟಲು ಜ್ಞಾನ, ಭಕ್ತಿ, ಕಾಯಕದ ಯಾವ ದಾರಿಯನ್ನಾದರೂ ನಾವು ಆರಿಸಿಕೊಳ್ಳಬಹುದು. ಅದರಲ್ಲಿ ಅದಮ್ಯ ಪ್ರೀತಿ ಮತ್ತು ತಾದಾತ್ಮವನ್ನು ಸಾಧಿಸಬೇಕು ಅಷ್ಟೆ – ಎಂಬುದನ್ನು, ಒಣ ಉಪನ್ಯಾಸಗಳಿಲ್ಲದೆ, ಸ್ವತಃ ಆ ಮೂರೂ ದಾರಿಗಳಲ್ಲೂ ನಡೆದುತೋರಿದ ಸಂತ ಶ್ರೀ ಚೈತನ್ಯರು.
– ರೋಹಿತ್ ಚಕ್ರತೀರ್ಥ