ಚಿತ್ತಾಪುರ: ದಂಡೋತಿ ಸಮೀಪದ ಕಾಗಿಣಾ ನದಿ ದಂಡೆಯಲ್ಲಿ ಗ್ರಾಪಂನಿಂದ ಕಟ್ಟಡ ಪರವಾನಗಿ ಪಡೆಯದೇ ಶ್ರೀ ಸಿಮೆಂಟ್ ಕಂಪನಿ ಕಟ್ಟಡ ಕಾಮಗಾರಿ ಕೈಗೊಳ್ಳುತ್ತಿದ್ದು, ಕೂಡಲೇ ಇದನ್ನು ತಡೆಯಬೇಕುಎಂದು ಕರವೇ ತೆಂಗಳಿ ವಲಯ ಅಧ್ಯಕ್ಷ ಸಾಯಬಣ್ಣ ಭರಾಟೆ ನೇತೃತ್ವದಲ್ಲಿ ಕಾರ್ಯಕರ್ತರು ಪಂಚಾಯಿತಿ ಲೆಕ್ಕಾಧಿಕಾರಿ ಸಾಬಣ್ಣ ಕೋಳಕೂರಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ದಂಡೋತಿ ಸಮೀಪದ ಕಾಗಿಣಾ ನದಿ ದಂಡೆಯಲ್ಲಿ ಖಾಸಗಿ ಜಮೀನಿನಲ್ಲಿ ಶ್ರೀ ಸಿಮೆಂಟ್ ಕಂಪನಿ ಪರವಾನಗಿ ಪಡೆಯದೆ ಕಟ್ಟಡ ಕಾಮಗಾರಿ ಕೈಗೊಳ್ಳುತ್ತಿದೆ. ಕಾರ್ಖಾನೆ ಸ್ಥಾಪಿಸಲು ಬಾವಿ, ವಿದ್ಯುತ್ ಸ್ಥಾವರ, ಇತರೆ ಕಟ್ಟಡ ಕಟ್ಟಲು ಪಂಚಾಯಿತಿ ಪರವಾನಗಿ ನೀಡಿಲ್ಲ. ಆದರೂ ಶ್ರೀ ಸಿಮೆಂಟ್ ಕಂಪನಿ ಮನಸ್ಸಿಗೆ ಬಂದಂತೆ ಕಟ್ಟಡಗಳನ್ನು ನಿರ್ಮಿಸುತ್ತಿದೆ ಎಂದು ಆರೋಪಿಸಿದರು.
ಕಳೆದ ಎಂಟಹತ್ತು ತಿಂಗಳಿನಿಂದ ಕಾಮಗಾರಿ ಪ್ರಗತಿಯಲ್ಲಿದೆ. ಪಂಪ್‌ಹೌಸ್ ಘಟಕ ನಿರ್ಮಿಸಲು ದಂಡೋತಿ ಗ್ರಾಪಂ ಪರವಾನಗಿ ಪಡೆದುಕೊಳ್ಳಬೇಕಿತ್ತು. ಆದರೆ ಕೇವಲ ಎನ್‌ಒಸಿ ತೆಗೆದುಕೊಂಡು ಕಾಮಗಾರಿ ಪ್ರಾರಂಭಿಸಿದ್ದಾರೆ. ಇದು ನಿಯಮ ಬಾಹಿರವಾಗಿದೆ. ಅಲ್ಲದೇ ಘಟಕ ನಿರ್ಮಿಸಲು ರೈತರಿಂದ ಪಡೆದ ಜಮೀನಿಗಿಂತ ನದಿ ಪಾತ್ರದ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ. ಹೀಗಾಗಿ ನದಿ ಪಾತ್ರದ ಪರಿಸರ ಹಾಳಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದರು.
ಹಿಂಗಾರು ಮತ್ತು ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ನದಿ ಪಾತ್ರದಲ್ಲಿ ನೀರಿನ ಮಟ್ಟ ಇಳಿದಿದೆ. ಇಲ್ಲಿಯ ನೀರೇ ದಂಡೋತಿ, ಚಿತ್ತಾಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಹೋಗುತ್ತದೆ. ಶ್ರೀ ಸಿಮೆಂಟ್ ಒಂದು ವೇಳೆ ನೀರನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರೆ ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಕುಡಿಯಲು ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಯಕರ್ತರಾದ ಸಂತೋಷ ಕೊಂಕನಳ್ಳಿ, ಈರಪ್ಪ ಕೊಳ್ಳಿ, ಸಾಬಣ್ಣ ಗಂಗಬೋ, ಜಗನ್ನಾಥ ಕೊಂಕನಳ್ಳಿ, ರಂಗನಾಥ ಜಿರಕಿ ಹಾಗೂ ಇತರರು ಇದ್ದರು.