ಸಿದ್ದಾಪುರ: ಮನುಷ್ಯನಿಗೆ ಜ್ಞಾನ ಹಾಗೂ ವಿವೇಕ ಇರಬೇಕು. ವಿವೇಕ ಬರಬೇಕಾದರೆ ದೇವಿಯ ಅನುಗ್ರಹವಾಗಬೇಕು. ವಿವೇಕ ಬಂದಾಗ ಸಂಪತ್ತು ಬರುತ್ತದೆ. ಸಂಪತ್ತಿನ ಸದ್ವಿನಿಯೋಗದಿಂದ ಬದುಕು ಸುಂದರವಾಗುತ್ತದೆ ಎಂದು ಶ್ರೀ ಶೃಂಗೇರಿ ಮಠಾಧೀಶ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿ ಅವರು ನುಡಿದರು.
ಅವರು ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮಿà ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಮೂರು ಅಂತಸ್ತಿನ ನೂತನ ಭೋಜನ ಶಾಲೆ ಲೋಕಾರ್ಪಣೆ ಹಾಗೂ ದೇವಸ್ಥಾನದ ರಜತದ್ವಾರ ಉದ್ಘಾಟನೆ ಮತ್ತು ಶ್ರೀ ಬ್ರಾಹ್ಮಿà ದುರ್ಗಾಪರಮೇಶ್ವರೀ ದೇವಿಗೆ ಬ್ರಹ್ಮಕುಂಭಾಭಿಷೇಕ ನೆರವೇರಿಸಿ ಆಶೀರ್ವಚನ ನೀಡಿದರು.
ನಮ್ಮ ಸಂಪ್ರದಾಯಗಳ ಪಾಲನೆ ಅತೀ ಅಗತ್ಯ. ಅನ್ಯರ ಟೀಕೆಗಳಿಗೆ ಕಿವಿಗೊಡದೆ ನಮ್ಮತನದೊಂದಿಗೆ ಬದುಕಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಾಗ ಆ ಮಗು ಉತ್ತಮ ನಾಗರಿಕನಾಗುತ್ತಾನೆ. ಉತ್ತಮ ಸಂಸ್ಕಾರದಿಂದ ವಿದ್ಯೆ, ಕೀರ್ತಿ ಮತ್ತು ಸಂಪತ್ತು ಬರುತ್ತದೆ ಎಂದರು.
ಕಮಲಶಿಲೆ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಎಸ್. ಸಚ್ಚಿದಾನಂದ ಚಾತ್ರ ಪ್ರಸ್ತಾವನೆಗೈದು, ಈ ಮೂರು ಅಂತಸ್ತಿನ ಕಟ್ಟಡವು ಕೇವಲ ಭಕ್ತರ ಹಣದಿಂದ ನಿರ್ಮಾಣಗೊಂಡಿದೆ. ಕಾರ್ಮಿಕರ ಅವಿರತ ಶ್ರಮವೂ ಇದರ ಹಿಂದೆ ಇದೆ. ಮುಂದಿನ ದಿನಗಳಲ್ಲಿ ದೇವಸ್ಥಾನದ ಶಿಖರಕ್ಕೆ ಚಿನ್ನದ ಕಳಸ ನಿರ್ಮಿಸುವ ಉದ್ದೇಶ ಇದೆ ಎಂದು ಹೇಳಿದರು.
ಉದ್ಯಮಿಗಳಾದ ಡಾ| ಜಿ. ಶಂಕರ್ ಅಂಬಲಪಾಡಿ ಉಡುಪಿ, ರಮೇಶ ರೆಡ್ಡಿ ಬೆಂಗಳೂರು, ಕೊಡ್ಲಾಡಿ ಚಂದ್ರಶೇಖರ ಶೆಟ್ಟಿ, ಸುಮನ ಕೆ. ಶರ್ಮ ಮತ್ತು ಕೆ.ಎಂ.ಕೆ. ಶರ್ಮ ಚಿಕ್ಕಮಗಳೂರು, ರೇಷ್ಮೆ ಆಮದು ಮತ್ತು ರಫ್ತುದರರಾದ ವಿ.ವೈ. ಇಂದ್ರಾಣಿ ಮತ್ತು ವಿ.ಟಿ. ಸೋಮಶೇಖರ ಬೆಂಗಳೂರು, ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಬಿ. ಲಕ್ಷ್ಮೀಶ ಯಡಿಯಾಳ, ದೇವಸ್ಥಾನದ ಸಹ ಮೊಕ್ತೇಸರರಾದ ಬರೆಗುಂಡಿ ಶ್ರೀನಿವಾಸ ಚಾತ್ರ ಹಾಗೂ ಎ. ಚಂದ್ರಶೇಖರ ಶೆಟ್ಟಿ ಹೆನ್ನಾಬೈಲು ಉಪಸ್ಥಿತರಿದ್ದರು.
ಬಿ. ಶ್ರೀನಿವಾಸ ಚಾತ್ರ ಬರೆಗುಂಡಿ ಸ್ವಾಗತಿಸಿದರು. ಶ್ರೀಧರ ಅಡಿಗ ಕಮಲಶಿಲೆ ನಿರೂಪಿಸಿದರು. ಎಸ್. ಸದಾನಂದ ಚಾತ್ರ ವಂದಿಸಿದರು.