Advertisement

ಮಾರಣಕಟ್ಟೆ ಜಾತ್ರೆಗೆ ಹೆಮ್ಮಾಡಿ ಸೇವಂತಿಗೆ ದುಬಾರಿ

09:44 PM Jan 14, 2020 | mahesh |

ಹೆಮ್ಮಾಡಿ: ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರನಿಗೆ ಈಗ ಜಾತ್ರಾ ಮಹೋತ್ಸವದ ಸಂಭ್ರಮ. ಆದರೆ ಬ್ರಹ್ಮಲಿಂಗೇಶ್ವರನಿಗೆ ಪ್ರಿಯವಾದ ಅಪರೂಪದ ಹೆಮ್ಮಾಡಿ ಸೇವಂತಿಗೆ ಹೂವು ಇಳುವರಿ ಕಡಿಮೆಯಾಗಿದ್ದು, ಈ ಬಾರಿ ದುಬಾರಿಯಾಗಿದೆ. ಒಂದು ಸಾವಿರ ಹೂವಿಗೆ 300 ರೂ.ವರೆಗೂ ಮಾರಾಟವಾಗುತ್ತಿದೆ.

Advertisement

ಈ ಬಾರಿ ಪ್ರತಿಕೂಲ ಹವಾಮಾನ ಹಾಗೂ ನುಸಿಬಾಧೆ ಯಿಂದಾಗಿ ಮಾರಣಕಟ್ಟೆ ಜಾತ್ರೆ ವೇಳೆಗೆ ಅರಳಬೇಕಾದ ಹೂವು ಇನ್ನೂ ವಿಳಂಬವಾಗುವುದರಿಂದ ಬೇಡಿಕೆಯಷ್ಟು ಇಳುವರಿಯೇ ಇಲ್ಲದಂತಾಗಿದೆ. ಈ ಕಾರಣದಿಂದಾಗಿ ಹೂವಿನ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

22 ಎಕರೆ ಪ್ರದೇಶ
ಹೆಮ್ಮಾಡಿ ಗ್ರಾಮದ ಬಹುಭಾಗ, ಕಟ್‌ಬೆಲೂ¤ರು, ಕನ್ಯಾನ ಗ್ರಾಮಗಳ ಅಂದಾಜು 22 ಎಕರೆ ಪ್ರದೇಶಗಳಲ್ಲಿ ಸೇವಂತಿಗೆ ಹೂವು ಬೆಳೆಯುತ್ತಾರೆ. ಹೆಮ್ಮಾಡಿಯಲ್ಲಿ 42 ಮಂದಿ, ಕಟ್‌ಬೆಲೂ¤ರು ಗ್ರಾಮದ 6 ಮಂದಿ ಹಾಗೂ ಕನ್ಯಾನ ಗ್ರಾಮದ 6 ಮಂದಿ ಈ ಹೆಮ್ಮಾಡಿ ಸೇವಂತಿಗೆ ಹೂವನ್ನು ಬೆಳೆಯುತ್ತಾರೆ.

ಹೂವು ಅರಳಿದವರಿಗೆ ಲಾಟರಿ..!
ಸೆಕೆ ಜಾಸ್ತಿಯಾಗಿದ್ದರಿಂದ, ಚಳಿಯ ಪ್ರಮಾಣ ಕಡಿಮೆ ಇದ್ದುದರಿಂದ ಆಗಸ್ಟ್‌ನಲ್ಲೇ ಗಿಡ ಬೆಳೆಸಿದ್ದರೂ, ಮಾರಣಕಟ್ಟೆ ಜಾತ್ರೆ ವೇಳೆಗೆ ಮಾತ್ರ ಇನ್ನೂ ಹೂವೇ ಬಿಟ್ಟಿಲ್ಲ. ಕೆಲವೊಂದು ಗಿಡಗಳಲ್ಲಿ ಮೊಗ್ಗುಗಳಿದ್ದರೆ, ಮತ್ತೆ ಕೆಲವು ಬಾಡಿ ಹೋಗಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮಾರಣಕಟ್ಟೆ ಜಾತ್ರೆಗೆ ಲಭ್ಯವಾಗುತ್ತಿದ್ದ ಅರ್ಧಕ್ಕರ್ಧ ಹೂವಿನ ಇಳುವರಿ ಕಡಿಮೆಯಾಗಿದೆ ಎನ್ನುತ್ತಾರೆ ಬೆಳೆಗಾರರು. ಇದರಿಂದ ಈ ಸಮಯದಲ್ಲಿ ಸೇವಂತಿ ಅರಳಿದವರಿಗೆ ಲಾಟರಿ ಹೊಡೆ ದಂತಾಗಿದೆ. ಕಳೆದ ಬಾರಿ ಸಿಗುತ್ತಿದ್ದ ದುಪ್ಪಟ್ಟು ದರ ಈ ಬಾರಿ ಸಿಗುತ್ತಿದೆ. ಬೆಳೆಗಾರರ ಪೈಕಿ ಕೆಲವರದಂತೂ 20 ಸೆಂಟ್ಸ್‌, 40 ಸೆಂಟ್ಸ್‌ ಜಾಗದಲ್ಲಿ ಬೆಳೆಸಿರುವ ಸೇವಂತಿಗೆ ಸಂಪೂರ್ಣ ನಷ್ಟವಾಗಿದೆ. ನಾನು 20 ಸೆಂಟ್ಸ್‌ ಜಾಗದಲ್ಲಿ ಬೆಳೆಸಿರುವ ಹೂವು ಸೆಕೆ, ನುಸಿ ಬಾಧೆಗೆ ಬಲಿಯಾಗಿದೆ. ಪ್ರತಿ ವರ್ಷ 2 ಲಕ್ಷ ಹೂವುಗಳು ಸಿಗುತ್ತಿದ್ದರೆ ಈ ಬಾರಿ ಕೇವಲ 7 ಸಾವಿರ ಹೂವು ಅಷ್ಟೇ ಸಿಕ್ಕಿದೆ ಎನ್ನುವುದು ಸೇವಂತಿಗೆ ಬೆಳೆಗಾರರಾದ ರಾಘು ಅವರ ಬೇಸರದ ನುಡಿ.

ಬ್ರಹ್ಮಲಿಂಗೇಶ್ವರ ಪ್ರಿಯ
ಮಾರಣಕಟ್ಟೆ ಜಾತ್ರೆಯಲ್ಲಿ ಹೆಮ್ಮಾಡಿ ಸೇವಂತಿಗೆಗೆ ಭಾರೀ ಬೇಡಿಕೆಯಿದೆ. ಬ್ರಹ್ಮಲಿಂಗೇಶ್ವರನಿಗೆ ಹೆಮ್ಮಾಡಿ ಸೇವಂತಿಗೆ ಅತ್ಯಂತ ಪ್ರಿಯವಾಗಿದ್ದು, ಈ ಹೂವನ್ನು ಅರ್ಪಿಸಿ, ಭಕ್ತಿಯಿಂದ ಕೇಳಿದರೆ, ಇಷ್ಟಾರ್ಥವೆಲ್ಲ ಈಡೇರುತ್ತದೆ ಎನ್ನುವ ಪ್ರತೀತಿಯಿದೆ. ಒಬ್ಬೊಬ್ಬ ವ್ಯಾಪಾರಿಗಳಿಗೂ ಕನಿಷ್ಠ 4ರಿಂದ 5 ಲಕ್ಷದವರೆಗೆ ಹೂವು ಅಗತ್ಯವಿದ್ದು, ಆದರೆ ಈಗ ಇಲ್ಲಿ ಹೆಚ್ಚಿನವರಿಗೆ ಸಿಕ್ಕಿರುವುದು ಕೇವಲ 20 ಸಾವಿರ ಹೂವು ಮಾತ್ರ.

Advertisement

ಸಾವಿರ ಹೂವಿಗೆ 250 ರೂ…!
ಈ ಬಾರಿ ಹೂವಿನ ಬೆಳೆ ಹೇಗಿದೆಯೆಂದರೆ ಒಂದು ಸಾವಿರ ಹೂವಿಗೆ 200 ರಿಂದ 250 ರೂ.ವರೆಗೆ ಖರೀದಿಯಾಗುತ್ತಿದೆ. ಒಳ್ಳೆಯ ಹಾಗೂ ದೊಡ್ಡ – ದೊಡ್ಡ ಹೂವುಗಳಿದ್ದರೆ ಅದಕ್ಕೂ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಮಾರುಕಟ್ಟೆಗಳಲ್ಲಿ 1 ಸಾವಿರ ಹೂವಿಗೆ 300 ರೂ. ವರೆಗೆ ಮಾರಾಟವಾಗುತ್ತಿದೆ. ಇದೇ ಸಮಯದಲ್ಲಿ ಕಳೆದ ಬಾರಿ ಒಂದು ಸಾವಿರ ಹೂವಿಗೆ ಬೆಳೆಗಾರರಿಂದ 100 ರೂ. ಗೆ ಖರೀದಿಯಾಗಿತ್ತು. ಹೆಚ್ಚೆಂದರೆ 150 ರೂ. ವರೆಗೆ ಅಷ್ಟೇ ಖರೀದಿಸಲಾಗಿತ್ತು. ಹೆಚ್ಚಿನ ಸಮಯದವರೆಗೆ ಇದೇ ದರ ಸ್ಥಿರವಾಗಿತ್ತು. ಮಾರ್ಚ್‌ ಕೊನೆಯಲ್ಲಿ ಇದು 50 ರೂ. ಗೆ ಇಳಿದಿತ್ತು.

ನಷ್ಟ ಪರಿಹಾರ ಕೊಡಲಿ
ಮಾರಣಕಟ್ಟೆ ಜಾತ್ರೆ ವೇಳೆಗೆ ಉತ್ತಮ ಇಳುವರಿ ಸಿಕ್ಕಿದರೆ ಮಾತ್ರ ಲಾಭ. ಆದರೆ ಈ ಬಾರಿ ಅರ್ಧಕ್ಕರ್ಧ ಬೆಳೆ ಕಡಿಮೆಯಾಗಿದೆ. ಕಳೆದ ಬಾರಿ ಎಕರೆಗೆ 6 ಸಾವಿರ ರೂ. ಅಂತೆ ಪರಿಹಾರವನ್ನು ತೋಟಗಾರಿಕಾ ಇಲಾಖೆಯವರು ಕೊಟ್ಟಿದ್ದರು. ಈ ಬಾರಿಯೂ ನಷ್ಟ ಪರಿಹಾರ ಸಿಕ್ಕರೆ ಪ್ರಯೋಜನವಾಗಲಿದೆ. ಆದರೆ ನಮ್ಮಲ್ಲಿ ಹೆಚ್ಚಿನವರು ಎಕರೆಯಲ್ಲಿ ಬೆಳೆಯದೇ ಸೆಂಟ್ಸ್‌ ಲೆಕ್ಕಾಚಾರದಲ್ಲಿ ಬೆಳೆಯುತ್ತಾರೆ. ಅದಲ್ಲದೆ ಕೆಲವರು ಲೀಸ್‌ಗೆ ಪಡೆದು ಬೆಳೆಯುತ್ತಾರೆ. ಅವರಿಗೂ ಪರಿಹಾರ ಸಿಗಬೇಕು.
– ಮಹಾಬಲ ದೇವಾಡಿಗ, ಅಧ್ಯಕ್ಷರು ಹೆಮ್ಮಾಡಿ ಸೇವಂತಿಗೆ ಬೆಳೆಗಾರರ ಸಂಘ

ಬೆಳೆ ಕಡಿಮೆ
ಸೆಕೆಯಿಂದಾಗಿ ಬೆಳೆ ಕಡಿಮೆಯಾಗಿದೆ. ಇದರಿಂದ ಈ ಬಾರಿ ಎಲ್ಲರಿಗೂ ನಷ್ಟ ಉಂಟಾಗಿದೆ. ಮಾರಣಕಟ್ಟೆ ಜಾತ್ರೆಗೆ ಈ ಬಾರಿ ಅಗತ್ಯದಷ್ಟು ಸೇವಂತಿಗೆ ಹೂವು ಇಲ್ಲದಿರುವುದರಿಂದ ಹೂವಿನ ವ್ಯಾಪಾರಸ್ಥರು ಚಿತ್ರದುರ್ಗ ಮತ್ತಿತರ ಜಿಲ್ಲೆಗಳಿಂದ ಕಸ್ತೂರಿ ಸೇವಂತಿಗೆಯನ್ನೇ ಹೋಲುವ ಶ್ಯಾಮಿನಿ ಹೂವು ತರಿಸಿದ್ದಾರೆ. ಅದು ದುಬಾರಿಯಾಗಿದ್ದು, 1 ಕೆಜಿಗೆ 180 ರೂ., 1 ಕ್ವಿಂಟಲ್‌ ಹೂವಿಗೆ 18 ಸಾವಿರ ರೂ. ಕೊಟ್ಟು ತರಲಾಗಿದೆ.
– ದಿವಾಕರ್‌ ಕೋಟ್ಯಾನ್‌, ಸೇವಂತಿಗೆ ಬೆಳೆಗಾರರು, ವ್ಯಾಪಾರಿಗಳು

ಪರಿಹಾರಕ್ಕೆ ಪ್ರಯತ್ನ
ಕಳೆದ ಬಾರಿ ಸೇವಂತಿಗೆ ಬೆಳೆಗಾರರಿಗೆ ಇಲಾಖೆಯಿಂದ ನಷ್ಟ ಪರಿಹಾರವನ್ನು ಕೊಡಲು ಎಲ್ಲ ರೀತಿಯಿಂದಲೂ ಪ್ರಯತ್ನ ಮಾಡಲಾಗಿತ್ತು. ಈ ಬಾರಿ ಬೆಳೆಗಾರರಿಗೆ ನಿರೀಕ್ಷಿತ ಪ್ರಮಾಣದ ಹೂವು ಸಿಗದೇ ನಷ್ಟದಲ್ಲಿದ್ದು, ನಷ್ಟ ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುವುದು.
– ಶೋಭಾ ಜಿ. ಪುತ್ರನ್‌, ಅಧ್ಯಕ್ಷರು, ಸಾಮಾಜಿಕ ನ್ಯಾಯ ಸಮಿತಿ ಉಡುಪಿ ಜಿ.ಪಂ.

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next