ಯಳಂದೂರು: ತಾಲೂಕಿನ ಪೌರಾಣಿಕ, ಜಾನಪ ದೀಯ ಪ್ರಸಿದ್ಧ ಗಿರಿಧಾಮವಾಗಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ ಶ್ರೀ ಬಿಳಿಗಿರಿರಂಗನಾಥ ಸ್ವಾಮಿಯ ಚಿಕ್ಕ ಜಾತ್ರೆ 5 ವರ್ಷಗಳ ನಂತರ ನಡೆಯುತ್ತಿದ್ದು ಇದಕ್ಕಾಗಿ ಭರಪೂರ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಪೌರಾಣಿಕ ಪ್ರಸಿದ್ಧ ಯಾತ್ರಸ್ಥಳ: ಬಿಳಿಗಿರಿರಂಗನಾಥ ಸ್ವಾಮಿ ದೇಗುಲವನ್ನು ತನ್ನೊಡಲಿ ನಲ್ಲಿಟ್ಟು ಕೊಂಡಿರುವ ಬಿಳಿಗಿರಿರಂಗನಬೆಟ್ಟ ಪೌರಾಣಿಕ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ತಿರುಪತಿಯಿಂದ ತಲೆಶೂಲೆಗೆ ಮದ್ದನ್ನು ತರಲು ಬಂದ ದೇವರು ಇಲ್ಲಿಯೇ ಬಿಳಿಗಿರಿರಂಗನಾಥಸ್ವಾಮಿಯಾಗಿ ಉಳಿದನೆಂಬ ಪ್ರತೀತಿ ಇದೆ. ಇದರೊಂದಿಗೆ ಪರಶು ರಾಮ ಮಾತೃಹತ್ಯೆ ದೋಷಕ್ಕಾಗಿ ಇಲ್ಲಿ ಹರಿಯುವ ಭಾರ್ಗವಿ ನದಿಯಲ್ಲಿ ಸ್ನಾನಮಾಡಿದ್ದರೂ ಎಂಬುದು ಮತ್ತೂಂದು ಕತೆಯಿಂದ ಸ್ಪಷ್ಟವಾಗುತ್ತದೆ. ಅಲ್ಲದೆ ಅನೇಕ ಬಗೆಯ ಜಾನಪದ ಹಾಡ್ಗವಿತೆಗಳು, ಕತೆಗಳು, ಇಡೀ ರಾತ್ರಿ ಕತೆಯನ್ನು ಮಾಡುವ ಅಪಾರ ಸಂಪತ್ತು ಈ ದೇವರಿಗಿದೆ. ಜಿಲ್ಲೆಯ ಮಲೆಮಹ ದೇಶ್ವರ, ರಾಚ ಪ್ಪಾಜಿ, ಸಿದ್ಧಪ್ಪಾಜಿಯಂತೆ ಇಲ್ಲಿನ ಬಿಳಿ ಗಿರಿರಂಗನು ಪುರಾಣ ಹಾಗೂ ಜಾನಪದ ಇಬ್ಬ ರಿಂದಲೂ ಸ್ಥಾನ ಗಿಟ್ಟಿಸಿಕೊಂಡಿರುವುದು ವಿಶೇಷ.
ಸೋಲಿಗರ ಆರಾಧ್ಯ ದೈವ: ಪ್ರತಿ ವರ್ಷ ಇಲ್ಲಿ ಸಂಕ್ರಾಂತಿ ಹಬ್ಬದ ಮಾರನೇ ದಿನ ಚಿಕ್ಕಜಾತ್ರೆ ನಡೆದರೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಇಲ್ಲಿನ ಸೋಲಿಗರ ಆರಾಧ್ಯ ದೈವವಾಗಿರುವ ಬಿಳಿಗಿರಿರಂಗನಾಥಸ್ವಾಮಿಯ ನಿಶ್ಚಿತಾರ್ಥ ಚಿಕ್ಕಜಾತ್ರೆ ಎಂತಲೂ, ಮದುವೆ, ದೊಡ್ಡ ಜಾತ್ರೆ ಎಂತಲೂ ಇಲ್ಲಿನ ಸೋಲಿಗರು ತಮ್ಮ ಕುಲದ ಕುಸುಮಾಲೆಯನ್ನು ವರಿಸಿದ ರಂಗಪ್ಪನನ್ನು ರಂಗಭಾವ ಎಂದು ಕರೆಯುವ ವಾಡಿಕೆ ಇದೆ. 2017ರಲ್ಲಿ ನಡೆದಿದ್ದ ಚಿಕ್ಕಜಾತ್ರೆ: 2017ರಲ್ಲಿ ಚಿಕ್ಕಜಾತ್ರೆ ನಡೆದಿತ್ತು. ನಂತರ ದೇಗುಲವನ್ನು ಜೀರ್ಣೋದ್ಧಾರ ಮಾಡುವ ಉದ್ದೇಶದಿಂದ ಬಂದ್ ಮಾಡಲಾಗಿತ್ತು. 2021 ಏಪ್ರಿಲ್‌ನಲ್ಲಿ ದೇಗುಲ ಆರಂಭಗೊಂಡಿತಾದರೂ ನಂತರ ಕೋವಿಡ್ ಹಾಗೂ ದೇಗುಲದ ಮುಂಭಾಗದ ನೆಲಹಾಸು ಕಾಮಗಾರಿ ಪೂರ್ಣ ಗೊಂಡಿರದ ಕಾರಣ ಜಾತ್ರೆ ನಡೆದಿರಲಿಲ್ಲ. ಈಗ ನೆಲಹಾಸು ಕಾಮಗಾರಿ ಪೂರ್ಣಗೊಂಡಿದೆ.
ಶೌಚಾಲಯ ಕಾಮಗಾರಿ ಪೂರ್ಣಗೊಳಿಸಿ: ದೇಗುಲಕ್ಕೆ ಅನತಿ ದೂರದಲ್ಲೇ ವಾಹನ ನಿಲ್ದಾಣವಿದ್ದು ಇಲ್ಲಿ ಅನೇಕ ತಿಂಗಳುಗಳಿಂದ ಶೌಚಾಲಯ ಕಾಮ ಗಾರಿ ನಡೆಯುತ್ತಿದ್ದು ಇದು ಪೂರ್ಣ ಗೊಂಡಿಲ್ಲ. ಜಾತ್ರೆಗಾದರೂ ಇದನ್ನು ಪೂರ್ಣಗೊಳಿಸಬೇಕು. ಅಲ್ಲದೆ ಇಲ್ಲಿರುವ ನೀರಿನ ಓವರ್‌ಹೆಡ್ ಟ್ಯಾಂಕ್‌ಗೆ ನೀರು ತುಂಬಿಸಬೇಕು. ಈ ಬಾರಿ ಬೆಟ್ಟಕ್ಕೆ ಹೆಚ್ಚಿನ ಜನರು ಬರುವ ನಿರೀಕ್ಷೆ ಇದೆ ಎಂದು ದೇಗುಲದ ಆಡಳಿತ ವರ್ಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಎಸ್‌ಆರ್ ಟಿಸಿ ವತಿಯಿಂದ 100 ಬಸ್‌ಗಳನ್ನು ಓಡಿಸಲಾಗುವುದು. ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗ ದಂತೆ ಸೂಕ್ತ ಕ್ರಮ ವಹಿಸಲು ಸಂಬಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
– ಎನ್. ಮಹೇಶ್, ಶಾಸಕ
-ಫೈರೋಜ್ ಖಾನ್