ಶೃಂಗೇರಿ: ಪಶ್ಚಿಮಾಮ್ನಾಯ ದ್ವಾರಕಾ ಪೀಠದ ಉತ್ತರಾಧಿಕಾರಿ ಜಗದ್ಗುರು ಶಂಕರಾಚಾರ್ಯ ಶ್ರೀ ಸದಾನಂದ ಸರಸ್ವತಿ ಸ್ವಾಮೀಜಿಗಳು ಮತ್ತು ಉತ್ತರಾಮ್ನಾಯ ಬದರಿ ಜ್ಯೋತಿರ್‌ಪೀಠದ ಉತ್ತರಾಧಿಕಾರಿ ಜಗದ್ಗುರು ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾಸ್ವಾಮೀಜಿಗೆ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಸೋಮವಾರ ದಂಡ, ಕಮಂಡಲ ನೀಡಿ ಅನುಗ್ರಹಿಸಿದರು.
ಆಶ್ವಯಜ ಮಾಸದ ಶುಕ್ಲ ಪಕ್ಷದ ಪಾಡ್ಯದ ದಿನ ನೂತನ ಉಭಯ ಜಗದ್ಗುರುಗಳಿಗೆ ಪೀಠದ ಸಂಕೇತವಾಗಿ ಶ್ರೀ ಭಾರತೀತೀರ್ಥ ಸ್ವಾಮೀಜಿಗಳು ಅನುಗ್ರಹಿಸಿರುವುದು ವಿಶೇಷವಾಗಿದೆ. ಈ ಹಿಂದೆ ಜ್ಯೋತಿರ್ ಪೀಠದ ಬದರಿ ಶಂಕರಚಾರ್ಯ ಶ್ರೀ ಸ್ವರೂಪಾನಂದ ಸರಸ್ವತಿ ಸ್ವಾಮೀಜಿಗಳಿಗೂ ಇಲ್ಲಿನ 35ನೇ ಜಗದ್ಗುರು ಶ್ರೀ ವಿದ್ಯಾತೀರ್ಥ ಸ್ವಾಮೀಜಿ ಪಟ್ಟಾಭಿಷೇಕ ನೆರವೇರಿಸಿದ್ದರು.
ಸೋಮವಾರ ಬೆಳಗ್ಗೆ ಶ್ರೀ ಶಾರದಾ ಪೀಠದಲ್ಲಿ ದಂಡ, ಕಮಂಡಲ ನೀಡುವ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಶ್ರೀಮಠದ ಪುರೋಹಿತರಾದ ಶಿವಕುಮಾರ ಶರ್ಮ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನಡೆಯಿತು.
ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಉಪಸ್ಥಿತರಿದ್ದರು. ಶ್ರೀಮಠದ ಆಡಳಿತಾ ಧಿಕಾರಿ ಡಾ| ವಿ.ಆರ್. ಗೌರಿಶಂಕರ್, ಅಧಿ ಕಾರಿಗಳಾದ ಶಿವಶಂಕರ ಭಟ್, ದಕ್ಷಿಣಾಮೂರ್ತಿ ಮತ್ತಿತರರು ಇದ್ದರು.