Advertisement

ನೆರೂಲ್‌ ಶ್ರೀ ಅಯ್ಯಪ್ಪ ಮಂದಿರದ ನೂತನ ಸಭಾಗೃಹ ಉದ್ಘಾಟನಾ ಸಮಾರಂಭ

03:48 PM Jan 24, 2017 | Team Udayavani |

ನವಿಮುಂಬಯಿ: ಅಯ್ಯಪ್ಪ ದೇವರು ಸಾಮರಸ್ಯದ ದೇವರು. ಇಂಥ‌ ದೇವರ ಪ್ರತಿಷ್ಠೆಯ ಮಂದಿರದ ಸಂಭ್ರಮದಲ್ಲಿರುವ ಭಕ್ತರೆಲ್ಲರ ಮುಖಗಳಲ್ಲಿ ಭಕ್ತಿಯ ಕಳೆ ತುಂಬಿರುವುದು ಸಂತೋಷ ದಾಯಕ. ಕತ್ತಲೆಯ ಬಾಳಿಗೆ ಬೆಳಕು ನೀಡುವ, ಬಾಡಿ ಹೋದ ಬದುಕಿಗೆ ನೆರಳು ನೀಡುವ ಕ್ಷೇತ್ರಗಳು ನೆರೂಲ್‌ನಲ್ಲಿವೆ ಎಂದರೆ ತಪ್ಪಾಗಲಾರದು. ಇಂತಹ ನೆರೂಲ್‌ನ ನೆರಳು ಬಲವಾಗಲು ಧಾರ್ಮಿಕ ಪ್ರಜ್ಞೆ  ಬೆಳೆದುಬರಬೇಕಾಗಿದೆ. ಸಂಕಲ್ಪ ಶಕ್ತಿ ಸಾಕಾರವಾಗಿರುವುದರಿಂದ ಇಲ್ಲಿ ಮಂದಿರ ನಿರ್ಮಾಣ ಸಾಧ್ಯವಾಗಿದೆ. ನಮ್ಮಲ್ಲಿ ಹೊಂದಾಣಿಕೆ ಮತ್ತು ಸಾಮರಸ್ಯದ ಸದ್ಗುಣಗಳು ಬೆಳೆದಾಗ ಇವೆಲ್ಲವೂ ಕೂಡಿ ಬರುವುದು. ಧರ್ಮ ರಕ್ಷಣೆ ಎಲ್ಲಿ ಇರುತ್ತದೋ ಅಲ್ಲಿ ಅಧ್ಯಾತ್ಮದ ಬೆಳಕು ಬೆಳಗಿರುತ್ತದೆ ಎಂದು ಒಡಿಯೂರಿನ  ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ನುಡಿದರು.

Advertisement

ನೆರೂಲ್‌ ಶ್ರೀ ಮಣಿಕಂಠ ಸೇವಾ ಸಂಘ  ಇದರ ನೆರೂಲ್‌ನಲ್ಲಿರುವ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭ  ಮಂದಿರದ  ಸಭಾಂಗಣದಲ್ಲಿ ನಿರ್ಮಿಸಲಾಗಿರುವ ನೂತನ  ಕಟ್ಟಡವನ್ನು ಜ. 21ರಂದು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು,  ಎ   ಲ್ಲಿ ನಿರ್ಮಲ ಮನಸ್ಸು ಇರುವುದಿಲ್ಲವೋ ಅಲ್ಲಿ ಭಗವಂತನ ಕೃಪೆ ಅಸಾಧ್ಯ. ಕೆ. ಡಿ. ಶೆಟ್ಟಿ ಅವರು ನೆರೂಲ್‌ನಲ್ಲಿ ಮಾತ್ರವಲ್ಲ ವಿಟ್ಲದ ಪಂಚಲಿಂಗೇಶ್ವರ ದೇವಸ್ಥಾನ ಸೇರಿದಂತೆ ತವರೂರ ಅನೇಕ ದೈವ ದೇವಸ್ಥಾನಗಳ ಏಳಿಗೆಗೆ ಶ್ರಮಿಸಿದ ಧರ್ಮಿಷ್ಠರು. ಅವರ ಹಾಗೂ ಪದಾಧಿಕಾರಿಗಳ ಅವಿರತ ಶ್ರಮದ ಈ ನೆರೂಲ್‌ನ ಮಂದಿರ ಇತಿಹಾಸದ ಪುಟದಲ್ಲಿ ಸ್ವರ್ಣಾಕ್ಷರಗಳಲ್ಲಿ ಬರೆಯುವಂತಾಗಲಿ. ಈ  ಕ್ಷೇತ್ರದಲ್ಲಿ ಅಧ್ಯಾತ್ಮದ ಜ್ಯೋತಿ ಹಚ್ಚಿ, ಆ ಮೂಲಕ ಸರ್ವ ಭಕ್ತರ ಹೃದಯಗಳಲ್ಲಿ ಜ್ಞಾನದ ಜ್ಯೋತಿ ಬೆಳಗಲಿ ಎಂದರು.

ವೇದಿಕೆಯಲ್ಲಿ ಶಾಸಕ ಪ್ರಶಾಂತ್‌ ಠಾಕೂರ್‌, ಸ್ಥಳೀಯ ನಗರ ಸೇವಕಿ ಶಿಲ್ಪಾ ಎಸ್‌. ಕಾಂಬ್ಳಿ, ವಿ. ಜಯಂತ್‌ ಸುತಾರ್‌,  ಉದ್ಯಮಿ ಸುಧೀರ್‌ ಬಿ. ಶೆಟ್ಟಿ, ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ರಘುರಾಮ ಶೆಟ್ಟಿ, ನಗರ ಸೇವಕ ಇಥಪೆ ರವೀಂದ್ರ ಉದ್ಧವ್‌  ಮತ್ತಿತರರು ಉಪಸ್ಥಿತರಿದ್ದರು. ನೂತನ ಸಭಾಗೃಹಕ್ಕೆ ಚೆಲ್ಲಡ್ಕ ಭವಾನಿ ದೇರಣ್ಣ ಶೆಟ್ಟಿ ಧ್ಯಾನ ಮಂದಿರ ಎಂದು ಇದೇ ಸಂದರ್ಭದಲ್ಲಿ ಘೋಷಿಸಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂದಿರದ ಕಾರ್ಯಾಧ್ಯಕ್ಷ ಕೆ. ಡಿ. ಶೆಟ್ಟಿ ಅವರು, ನನ್ನನ್ನು ಇಂದು ಸಮ್ಮಾನಿಸಿದ್ದೀರಿ. ಆದರೆ ನಾನು ಅದನ್ನು ಎಂದೂ ಬಯಸಿದವನಲ್ಲ. ಸಮ್ಮಾನಕ್ಕಾಗಿ ನಾನು ಯಾವ ಸೇವೆಯನ್ನು ಮಾಡುತ್ತಿಲ್ಲ. ನಿಮ್ಮೆಲ್ಲರ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ. ಮಂದಿರದ ಆರಂಭದ ದಿನದ ಹೊರೆ ಕಾಣಿಕೆಯಿಂದ  ಇಂದಿನವರೆಗೆ ಇಲ್ಲಿನ ಎಲ್ಲ ಕಾರ್ಯಕ್ರಮಗಳು  ಯಶಸ್ವೀ ಆಗಿರುವುದಕ್ಕೆ ಹೃದಯ ತುಂಬಿ ಬಂದಿದೆ. ನಮ್ಮ ಸರ್ವ ದಾನಿಗಳೇ ನಿಜವಾದ ದೇವರು. ಅವರನ್ನೆಂದೂ ಮರೆಯುವಂತಿಲ್ಲ. ನಿಜವಾದ ಸಮ್ಮಾನ ದಾನಿಗಳಿಗೆ ಸಲ್ಲಬೇಕು. ನಮ್ಮ ಮುಂದಿನ ಜವಾಬ್ದಾರಿ ಹೆಚ್ಚಿದ್ದು ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ. ನಾವೆಲ್ಲರೂ ಒಂದಾಗಿ ಜೊತೆಗೂಡಿ ದೇವರ ಸೇವೆಗೆ ಬದ್ಧರಾಗೋಣ ಎಂದರು.

ಕಾರ್ಯಕ್ರಮದಲ್ಲಿ ಚೆಲ್ಲಡ್ಕ ಕುಸುಮೋದರ ಡಿ.ಶೆಟ್ಟಿ ಮತ್ತು ಸರಿತಾ ಕೆ. ಶೆಟ್ಟಿ, ಸುರೇಶ್‌ ಜಿ. ಶೆಟ್ಟಿ ಮತ್ತು ಅನಿತಾ ಎಸ್‌. ಶೆಟ್ಟಿ,  ದಾಮೋದರ ಎಸ್‌. ಶೆಟ್ಟಿ ಮತ್ತು ಸ್ವರ್ಣಲತಾ ಡಿ. ಶೆಟ್ಟಿ, ಡಾ| ಶಿವ ಎಂ. ಮೂಡಿಗೆರೆ ಮತ್ತು ಜ್ಯೋತಿ ಶಿವ ಮೂಡಿಗೆರೆ, ಹರಿ ಶೆಟ್ಟಿ ಮತ್ತು ವಿದ್ಯಾ ಹರಿ ಶೆಟ್ಟಿ, ಕಿಶೋರ್‌ ಕುಮಾರ್‌ ಎಂ. ಶೆಟ್ಟಿ ಮತ್ತು ಪ್ರಮೋದಾ ಕೆ. ಶೆಟ್ಟಿ, ಸಂಜೀವ ಎನ್‌. ಶೆಟ್ಟಿ ಮತ್ತು ಜಯಂತಿ ಎಸ್‌. ಶೆಟ್ಟಿ, ದಯಾನಂದ ಶೆಟ್ಟಿ ಮತ್ತು ಶೋಭಾ ಡಿ. ಶೆಟ್ಟಿ  ದಂಪತಿಗಳನ್ನು, ಖಾಂದೇಶ್‌ ಭಾಸ್ಕರ್‌ ಶೆಟ್ಟಿ, ಸುಂದರ ಯು. ಪೂಜಾರಿ, ಅಂತಾರಾಷ್ಟ್ರೀಯ ಕಿಕ್‌ ಬಾಕ್ಸಿಂಗ್‌ ಚಿನ್ನ ಪದಕ ವಿಜೇತ ಸ್ವೀಕೃತ್‌ ಎಸ್‌. ಶೆಟ್ಟಿ ಮತ್ತಿತರರನ್ನು ಹಾಗೂ ಶಂಕರನಾರಾಯಣ ನಂಬೂದಿರಿ, ವಾಸ್ತುತಜ್ಞ ಮಹೇಶ್‌ ಮುನಿಯಂಗಳ ಅವರಿಗೆ ಚಿನ್ನದ ಉಂಗುರ ತೊಡಿಸಿ ಶ್ರೀಗಳು ಸಮ್ಮಾನಿಸಿ ಗೌರವಿಸಿ ಅಭಿನಂದಿಸಿದರು.

Advertisement

ಶ್ರೀಗಳ‌ು ಹಾಗೂ ಅತಿಥಿ- ಗಣ್ಯರನ್ನು  ಕಲಶ- ಕುಂಭ ದೊಂದಿಗೆ ಸ್ವಾಗತಿಸಿ ಮಂದಿರಕ್ಕೆ ಬರಮಾಡಿಕೊಳ್ಳಲಾಯಿತು. ಶ್ರೀಗಳು ದೇವರಿಗೆ ಆರತಿಗೈದು ಪೂಜಿಸಿ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಹೇಮಾ ಶೆಟ್ಟಿ ಪ್ರಾರ್ಥನೆಗೈದರು. ಪತ್ರಕರ್ತ ದಯಾಸಾಗರ್‌ ಚೌಟ ಕಾರ್ಯಕ್ರಮ  ನಿರೂಪಿಸಿದರು. ಬಾಬಾ ಪ್ರಸಾದ್‌ ಅರಸ ಸಮ್ಮಾನಿತರು ಹಾಗೂ ದಾನಿಗಳನ್ನು ಪರಿಚಯಿಸಿದರು. ಸುರೇಶ್‌ ಜಿ. ಶೆಟ್ಟಿ  ವಂದಿಸಿದರು.

ದೈವ-ದೇವಸ್ಥಾನದ ಜೊತೆಗೆ ಬಡವರಿಗೆ ಸಹಾಯ ನೀಡುತ್ತಿರುವ ಕೆ. ಡಿ. ಶೆಟ್ಟಿ ಅವರು ನಿಜವಾಗಿ ಓರ್ವ ಸಮಾಜ ಸೇವಕರಾಗಿದ್ದಾರೆ. ವಿದ್ಯಾದಾನಕ್ಕೂ ಅವರ ಅನನ್ಯ ಸೇವೆ ಮೆಚ್ಚುವಂಥದ್ದು. ಇಂತಹ ಮಹನೀಯರಿಗೆ ನನ್ನ ಸಂಪೂರ್ಣ ಸಹಯೋಗವಿದೆ 
– ಸುಧೀರ್‌ ವಿ. ಶೆಟ್ಟಿ (ಸಿಎಂಡಿ: ಚರಿಷ್ಮಾ ಬಿಲ್ಡರ್ ಮುಂಬಯಿ)

ಶಬರಿಮಲೆಯ ಅಯ್ಯಪ್ಪ ದರ್ಶನಕ್ಕೆ ಯಾತ್ರೆಯೊಂದಿಗೆ ಬೆಟ್ಟ ಹತ್ತುತ್ತಾರೆ. ಅಂತಹ ಅಯ್ಯಪ್ಪ ದೇವರನ್ನೇ ನೆರೂಲ್‌ಗೆ ಬರಮಾಡಿ ಪ್ರತಿಷ್ಠಾಪಿಸಿರುವುದು ಪುಣ್ಯದ ಕೆಲಸವಾಗಿದೆ.  ಅಸ್ಪೃಶ್ಯತೆ ಇಲ್ಲದ ಏಕೈಕ ಕ್ಷೇತ್ರ ಶಬರಿಮಲೆಯಾಗಿದೆ. ನೆರೂಲ್‌ನಲ್ಲಿ ಪುರುಷರಂತೆ ಮಹಿಳೆಯರೂ ಅಯ್ಯಪ್ಪ ದೇವರನ್ನು ಆರಾಧಿಸುವ ಪುಣ್ಯ ಕ್ಷೇತ್ರ ಆಗಿರುವುದು ಅಭಿನಂದನೀಯ. ಸಮಯ ನಿರಾಕಾರ, ಗಡಿಯಾರ ಸಾಧನ. ಅಂತೆಯೇ  ಭಗವಂತ ಸಾಧನವಾದರೆ ದೇವಸ್ಥಾನ  ನಿರಾಕಾರ. ಇಂತಹ ನಿರಾಕಾರ ಸಮಾಜವೇ ಹಿಂದೂ ಸಮಾಜ. ಇಂತಹ ಧರ್ಮ ಸಂಸ್ಕಾರಕ್ಕೆ ಮುಂಬಯಿಗರು ಮಾದರಿ 
– ನಳಿನ್‌ ಕುಮಾರ್‌ ಕಟೀಲು (ಸಂಸದರು: ಮಂಗಳೂರು)

ಮಂಗಳೂರು ಜನತೆ, ಬಂಟ ಜನರು ತುಂಬಾ ಪರಿಶ್ರಮಿಗಳು. ಸಮಾಜಕ್ಕೆ ಇವರ ಸಹಯೋಗ ಬಹಳಷ್ಟಿದೆ. ದಾನಶೂರರು, ಸಮಾಜ ಪ್ರಿಯರು ಆಗಿರುವ ನಿಮ್ಮಿಂದ ಸಂಸ್ಕಾರಯುತ ಕೆಲಸ ಮಾಡಲು ಸಾಧ್ಯವಾಗಿದೆ. ಅತೀವ ಸಮಾಜ ಕಳಕಳಿಯುಳ್ಳ ತಾವುಗಳು ಸಮಾಜ ಮೆಚ್ಚುವ ಕೆಲಸ ಮಾಡುತ್ತಿದ್ದೀರಿ. ತಮಗೆಲ್ಲರಿಗೂ ಅಭಿನಂದನೆಗಳು 
– ಮಂದಾ ವಿ. ಮ್ಹಾತ್ರೆ (ಶಾಸಕಿ: ಬೇಲಾಪುರ).

ದೇವರ ಮುಂದೆ ನಾವೆಲ್ಲವನ್ನೂ ಮರೆತು ನಿಂತಿದ್ದೇವೆ. ಇಲ್ಲಿ ದ್ವೇಷ ವೈಷಮ್ಯದಿಂದ ಯಾವ ಉಪಯೋಗವೂ ಇಲ್ಲ. ಈ ಬಗ್ಗೆ ರಾಜಕೀಯ ಸಲ್ಲದು. ದೇವರ ಕೆಲಸಗಳಿಗೆ ಸನ್ಯಾಸಿಯಂತಿರಬೇಕು 
– ಸುಧಾಕರ ಸೋನಾವಣೆ ( ಮೇಯರ್‌: ನವಮುಂಬಯಿ)

ಕೆ. ಡಿ. ಶೆಟ್ಟಿ ನನ್ನೊಂದಿಗೆ ಬಾಲ್ಯದಿಂದಲೂ ಇದ್ದು ಇಂದು ಸಾಧನೀಯ ಯಶಸ್ಸು ಕಂಡಿದ್ದಾರೆ ಎನ್ನಲು ಅಭಿಮಾನವೆನಿಸುತ್ತಿದೆ. ಬಂಟರ ಸಂಘಕ್ಕೂ ಅವರ ಸಹಯೋಗ ಅಪಾರವಾದದ್ದು.  ಶೈಕ್ಷಣಿಕ, ಸಾಮಾಜಿಕ ಸೇವೆಗೆ ಸ್ಪಂದಿಸುತ್ತಿರುವ ಕೆ. ಡಿ. ಶೆಟ್ಟಿ ಓರ್ವ ಹೃದಯವಂತ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಇಂತಹ ನೂರಾರು ಮಹನೀಯರು ಹುಟ್ಟಿ ಬರಲಿ 
– ಎಂ. ಡಿ. ಶೆಟ್ಟಿ (ಮಾಜಿ ಅಧ್ಯಕ್ಷರು : ಬಂಟರ ಸಂಘ ಮುಂಬಯಿ)

  ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next