ಪುಣೆ, ಡಿ. 18: ಪುಣೆಯ ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನವು ಭಕ್ತರ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧಿಯನ್ನು ಪಡೆದು ಸಾವಿರಾರು ತುಳು-ಕನ್ನಡಿಗರಲ್ಲದೆ ಇತರ ಭಾಷಿಕರ ಅರಾಧನಾ ಕ್ಷೇತ್ರವಾಗಿದೆ. ಸುಮಾರು ಹದಿಮೂರು ವರ್ಷಗಳ ಹಿಂದೆ ಭವ್ಯ ದೇಗುಲ ನಿರ್ಮಾಣವಾಗಿ ಪುಣೆಯ ಧಾರ್ಮಿಕ ಕ್ಷೇತ್ರವಾಗಿ ಕಂಗೊಳಿಸುತ್ತಿದೆ. ಈ ಕ್ಷೇತ್ರದಲ್ಲಿ ನಿರಂತರವಾಗಿ ಧಾರ್ಮಿಕ ಸೇವೆಗಳ ಜತೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕೂಡ ವಿಸ್ತಾರವಾಗಿ ನಡೆಯುತ್ತಿವೆ. ಇದು ಅಯ್ಯಪ್ಪ ಸ್ವಾಮಿಯ ಮಹಿಮೆ ಮತ್ತು ಕೃಪಾಶೀರ್ವಾದದಿಂದ ಎಂದು ಹೇಳಬಹುದು. ಕ್ಷೇತ್ರದ ಮೇಲಿನ ಭಕ್ತರ ಭಕ್ತಿಯಿಂದ, ದಾನಿಗಳು ಮತ್ತು ಸೇವಾಕರ್ತರ ಸಹಕಾರದಿಂದ ಸಾಕಾರಗೊಳ್ಳುತ್ತಿವೆ. ಅಂತೆಯೇ ದೇವಸ್ಥಾನದ ಸ್ಥಾಪನೆಯಿಂದ ಇಂದಿನವರೆಗೂ ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಂಘದ ವಿಶ್ವಸ್ಥ ಮಂಡಳಿ, ದೇವಸ್ಥಾನದ ಕಾರ್ಯಕಾರಿ ಸಮಿತಿ ಹಾಗೂ ಭಕ್ತರ ಸಹಕಾರದೊಂದಿಗೆ ದೇವತಾ ಕಾರ್ಯಗಳು, ಸಮಾಜ ಸೇವಾ ಕಾರ್ಯಗಳು ನಡೆಯುತ್ತಿವೆ ಎಂದು ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಂಘದ ಅಧ್ಯಕ್ಷ ಸುಭಾಷ್ ಶೆಟ್ಟಿ ತಿಳಿಸಿದರು.
ಡಿ. 15ರಂದು ಕಾತ್ರಜ್ ಅಯ್ಯಪ್ಪ ಸ್ವಾಮೀ ದೇವಸ್ಥಾನದ ಪ್ರಾಂಗಣದಲ್ಲಿ ನಡೆದ ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಯ್ಯಪ್ಪ ಸ್ವಾಮೀ ದೇವಸ್ಥಾನದ ನಿರ್ಮಾಣವಾಗಿ ಸಂಪ್ರದಾಯದಂತೆ ಮೊದಲ ಬಾರಿಗೆ ನಡೆಯಲಿರುವ ಬ್ರಹ್ಮಕಲಶೋತ್ಸವವನ್ನು ಮುಂದಿನ ವರ್ಷದಲ್ಲಿ ನಡೆಸಬೇಕಾಗಿದೆ. ಈ ವರ್ಷ ವಿಶ್ವಕ್ಕೆ ಬಂದೊದಗಿದ ಮಹಾಮಾರಿ ಕೊರೊನಾದಿಂದ ಯಾವುದೇ ಕಾರ್ಯಗಳು ನಡೆಯುವಂತಿರಲಿಲ್ಲ. ಅದ್ದರಿಂದ ದೇವಸ್ಥಾನದ ಬ್ರಹ್ಮಕಲಶೋತ್ಸವವನ್ನು ನಮ್ಮ ಸಮಿತಿಯ ಸದಸ್ಯರು, ಭಕ್ತರು ಮತ್ತು ಎಲ್ಲರ ಒಪ್ಪಿಗೆಯಂತೆ ಬರುವ ವರ್ಷದಲ್ಲಿ ನಡೆಸುವ ತಿರ್ಮಾನವನ್ನು ಈ ಸಭೆಯಲ್ಲಿ ಕೈಗೊಂಡಿದ್ದೇವೆ. ತುಳು-ಕನ್ನಡಿಗರ ಎಲ್ಲ ಸಮಾಜದ ಸಂಘ-ಸಂಸ್ಥೆಗಳ ಸಹಕಾರ, ಭಕ್ತರ, ದಾನಿಗಳ ಸಹಾಯದೊಂದಿಗೆ ಬ್ರಹ್ಮಕಲಶೋತ್ಸವವು ನಡೆಯಲಿದೆ. ಅದಕ್ಕಾಗಿ ನಾವೆಲ್ಲರೂ ಸನ್ನದ್ಧರಾಗೋಣ ಎಂದರು.
ಸಂಘದ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ಮತ್ತು ಸಮಾಜ ಸೇವಾ ಕಾರ್ಯ ಚಟುವಟಿಕೆಗಳ ವಾರ್ಷಿಕ ವರದಿಯನ್ನು ಗೌರವ ಕಾರ್ಯದರ್ಶಿ ರಘುರಾಮ್ ರೈ ಸಭೆಯ ಮುಂದಿಟ್ಟರು. ಕೋಶಾಧಿಕಾರಿ ಜಗದೀಶ್ ಶೆಟ್ಟಿ ಅವರು 2019-2020ನೇ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿ ಅನುಮೋದನೆ ಪಡೆದರು. ಅಯ್ಯಪ್ಪ ಸ್ವಾಮಿಯ ವಾರ್ಷಿಕ ಉತ್ಸವವನ್ನು ಸರಕಾರದ ನಿಯಮಗಳನ್ನು ಪಾಲಿಸಿ, 2021ರ ಜ. 14ರ ಮಕರ ಸಂಕ್ರಾಂತಿಯಂದು ಆಚರಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ವಾರ್ಷಿಕ ಉತ್ಸವ ಆಚರಣೆಯ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ| ಮೂ| ಹರೀಶ್ ಭಟ್ ಅವರು ವಿವರಣೆ ನೀಡಿದರು.
ಸಮಿತಿ ಸದಸ್ಯರು ಸಲಹೆ-ಸೂಚನೆಗಳನ್ನು ನೀಡಿದರು. ವಿಶ್ವಸ್ಥ ಮಂಡಳಿ ಸದಸ್ಯರು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಮಹಿಳೆಯರು ಸಹಿತ ಹೆಚ್ಚಿನ ಸಂಖ್ಯೆಯ ಭಕ್ತರು ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು. ಗೌರವ ಕಾರ್ಯದರ್ಶಿ ರಘುರಾಮ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ವಂದಿಸಿದರು.
-ವರದಿ: ಹರೀಶ್ ಮೂಡಬಿದ್ರಿ ಪುಣೆ