ಕೋಟ: ಕೋಟ ಶ್ರೀ ಅಮೃತೇಶ್ವರೀ ದಶಾವತಾರ ಯಕ್ಷಗಾನ ಮೇಳದ ಕೊನೆಯ ದೇವರ ಸೇವೆ ಆಟ ಇಂದು ಶ್ರೀಕ್ಷೇತ್ರದಲ್ಲಿ ಸರಳ ರೀತಿಯಲ್ಲಿ, ಕೋವಿಡ್ ನಿಯಮಾವಳಿಯಂತೆ ಜರುಗಿತು.
ಮೇಳದ ಶ್ರೀ ಮಹಾಗಣಪತಿ ದೇವರು ಹಾಗೂ ಶ್ರೀ ಅಮೃತೇಶ್ವರೀ ಪರಿವಾರ ದೇವರಿಗೆ ಪೂಜೆ ಸಲ್ಲಿಸಿದ ನಂತರ ಮೇಳದ ಇಬ್ಬರು ಕಲಾವಿದರಿಂದ ಪುರುಷ ವೇಷ, ಸ್ತ್ರೀವೇಷದೊಂದಿಗೆ ನರ್ತನ ಸೇವೆ ನೆರವೇರಿತು.
ಕೊನೆಗೆ ಮಂಗಳ ಪದ್ಯದೊಂದಿಗೆ ಈ ಸಾಲಿನ ತಿರುಗಾಟಕ್ಕೆ ಅಂತ್ಯ ಹಾಡಲಾಯಿತು.
ಲಾಕ್ ಡೌನ್ ಕಾರಣದಿಂದಾಗಿ ಕರಾವಳಿಯ ಯಕ್ಷಗಾನ ಮೇಳಗಳ ಪ್ರದರ್ಶನ ಏಪ್ರಿಲ್ 26 ರಿಂದ ಸ್ಥಗಿತಗೊಂಡಿದೆ ಹಾಗೂ ದೇಗುಲಗಳಲ್ಲಿ ಪೂಜೆ, ಪುನಸ್ಕಾರ ಭಕ್ತರ ಆಗಮಿಸುವಿಕೆಗೆ ನಿಷೇಧವಿರುವುದರಿಂದ ಸಂಪ್ರದಾಯದಂತೆ ಯಕ್ಷಗಾನ ಮೇಳಗಳ ಕೊನೆಯ ದೇವರ ಸೇವೆ ನಡೆಸಲು ಹಿನ್ನಡೆಯಾಗಿತ್ತು. ಹೀಗಾಗಿ ಎಲ್ಲ ಮೇಳಗಳಲ್ಲೂ ಸರಳ ರೀತಿ ಕೊನೆಯ ದೇವರ ಸೇವೆ ನೆರವೇರಿಸಲಾಗುತ್ತಿದೆ.
ಇದನ್ನೂ ಓದಿ :ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ಕ್ರಮ: ಅರುಣ್ ಸಿಂಗ್
ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್, ಸದಸ್ಯರಾದ ಚಂದ್ರ ಪೂಜಾರಿ, ಸುಬ್ರಾಯ ಆಚಾರ್ಯ, ಸುಶೀಲಾ ಸೋಮಶೇಖರ್, ರಾಮದೇವ ಐತಾಳ್, ಸುಂದರ ಕೆ., ಸತೀಶ್ ಹೆಗ್ಡೆ, ಜ್ಯೋತಿ ಭರತ್ ಕುಮಾರ್ ಶೆಟ್ಟಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಮೇಳದ ಪ್ರಬಂಧಕ ಕೋಟ ಸುರೇಶ್ ಬಂಗೇರ ಮತ್ತು ಪ್ರಧಾನ ಅರ್ಚಕರು, ಸಿಬಂದಿ ಉಪಸ್ಥಿತರಿದ್ದರು.