ಹೈದರಾಬಾದ್: ಒಂದೇ ದೋಣಿಯ ಪಯಣಿಗರಂತಿರುವ ಹೈದರಾಬಾದ್ ಮತ್ತು ಪಂಜಾಬ್ ತಂಡಗಳು ಸೋಮವಾರ ದ್ವಿತೀಯ ಸುತ್ತಿನ ಅದೃಷ್ಟ ಪರೀಕ್ಷೆಗೆ ಇಳಿಯಲಿವೆ. ಇಲ್ಲಿ ಗೆದ್ದವ ರಿಗೆ ಪ್ಲೇ ಆಫ್ ಅವಕಾಶವೊಂದು ಎದುರಾಗಲಿದೆ.
ಹೈದರಾಬಾದ್ ವಿರುದ್ಧ ತವರಿನ ಪಂದ್ಯದಲ್ಲಿ 6 ವಿಕೆಟ್‌ಗಳ ಜಯ ಸಾಧಿಸಿರುವ ಪಂಜಾಬ್ ಇನ್ನೊಂದು ಗೆಲುವಿಗೆ ಹಾತೊರೆಯುತ್ತಿದ್ದರೆ, ಹೈದರಾಬಾದ್ ಸೇಡು ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. 11 ಪಂದ್ಯಗಳಲ್ಲಿ ತಲಾ 5 ಪಂದ್ಯಗಳನ್ನು ಗೆದ್ದಿರುವ ಎರಡೂ ತಂಡಗಳಿಗೆ ಈ ಜಯ ಕೊಂಚ ನೆಮ್ಮದಿ ನೀಡಲಿದೆ.
ಸರಣಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿ 600 ರನ್ ಸಾಧನೆಯೊಂದಿಗೆ ಆರೇಂಜ್ ಕ್ಯಾಪ್ ಪಡೆದಿರುವ ಡೇವಿಡ್ ವಾರ್ನರ್ ಪಾಲಿಗೆ ಇದು ಕೊನೆಯ ಪಂದ್ಯ. ಅವರು ಗೆಲುವಿನೊಂದಿಗೆ ಕೂಟಕ್ಕೆ ಗುಡ್‌ಬೈ ಹೇಳುವ ಯೋಜನೆಯಲ್ಲಿದ್ದಾರೆ.
ವಾರ್ನರ್ ನಿರ್ಗಮನಕ್ಕೂ ಮುನ್ನ ಅಗತ್ಯವಾದ ಜಯವೊಂದನ್ನು ಸಾಧಿಸುವುದು ಹೈದರಾಬಾದ್ ಯೋಜನೆ. ತವರಿನ ಪಂದ್ಯವಾದ್ದರಿಂದ ಮೇಲುಗೈ ಅವಕಾಶ ಕೂಡ ಅಧಿಕವಾಗಿದೆ. ವಿಲಿಯಮ್ಸನ್, ಪಾಂಡೆ ಕ್ರೀಸ್ ಆಕ್ರಮಿಸಿಕೊಳ್ಳಬೇಕಾದ ಅಗತ್ಯ ಎಂದಿಗಿಂತ ಹೆಚ್ಚಿದೆ. ಘಾತಕ ಬೌಲಿಂಗ್ ದಾಳಿ ಹೊಂದಿದ್ದರೂ ಡೆತ್ ಓವರ್‌ನಲ್ಲಿ ಯಶಸ್ಸು ಮರೀಚಿಕೆ ಆಗುತ್ತಿದೆ. ಭುವನೇಶ್ವರ್, ರಶೀದ್ ಖಾನ್, ಮೊಹ್ಮಮದ್ ನಬಿ ಅವರಿಂದ ನಿರೀಕ್ಷಿತ ಪ್ರದರ್ಶನ ತೋರಿಬರುತ್ತಿಲ್ಲ.
ಬೌಲಿಂಗ್‌ನಲ್ಲಿ ಪಂಜಾಬ್ ಕಳಪೆ
ರಾಹುಲ್, ಗೇಲ್, ಅಗರ್ವಾಲ್ ಅವರಿಂದ ಉತ್ತಮ ಆರಂಭ ಪಡೆಯುತ್ತಿರುವ ಪಂಜಾಬ್‌ಗ ಮಧ್ಯಮ ಕ್ರಮಾಂಕದಲ್ಲಿ ಮಿಲ್ಲರ್, ಪೂರಣ್ ಸಾಥ್ ನೀಡುತ್ತಿದ್ದಾರೆ. ಆದರೆ ಬೌಲಿಂಗ್‌ನಲ್ಲಿ ಧಾರಾಳವಾಗಿ ರನ್ ಬಿಟ್ಟು ಕೊಟ್ಟು ದುಬಾರಿಯಾಗುತ್ತಿರುವುದು ತಂಡಕ್ಕೆ ಸಮಸ್ಯೆಯಾಗಿದೆ. ಶಮಿ, ಅಂಕಿತ್ ರಜಪೂತ್ ಜತೆಗೆ ನಾಯಕ ಅಶ್ವಿನ್ ಕೂಡ ವಿಕೆಟ್ ಕೀಳಲು ಪರದಾಡುತ್ತಿದ್ದಾರೆ.