Advertisement

ಅಪ್ಪ, ಮಕ್ಕಳಿಂದ ಬೆಂಕಿ ಹಚ್ಚುವ ಕೆಲಸ 

06:00 AM Aug 01, 2018 | |

ಹುಬ್ಬಳ್ಳಿ: ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜ್ಯದ ಜನರಲ್ಲಿ ದಕ್ಷಿಣ ಹಾಗೂ ಉತ್ತರ ಕರ್ನಾಟಕ ಎಂಬ
ದ್ವೇಷಭಾವನೆ ಹುಟ್ಟಿಸುತ್ತಿದ್ದು, ಅಪ್ಪ-ಮಕ್ಕಳು ಸೇರಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ಏಕೀಕರಣವಾದ ಮೇಲೆ ಹಿಂದಿನ ಯಾವ ಮುಖ್ಯ ಮಂತ್ರಿಗಳೂ ದಕ್ಷಿಣ ಹಾಗೂ ಉತ್ತರ ಕರ್ನಾಟಕವೆಂದು ಒಡೆದಾಳುವ ನೀತಿ ಅನುಸರಿಸಿರಲಿಲ್ಲ. ಆದರೆ, ಕುಮಾರಸ್ವಾಮಿ ಅಂತಹ ಅಕ್ಷಮ್ಯ ಅಪರಾಧ ಮಾಡಿದ್ದರಿಂದಲೇ ರಾಜ್ಯದಲ್ಲಿ ಪ್ರತ್ಯೇಕತೆಯ ಗೊಂದಲವುಂಟಾಗಿದೆ. ಮತ ಕೊಡುವಾಗ ಉತ್ತರ ಕರ್ನಾಟಕದವರಿಗೆ ನನ್ನ ನೆನಪು ಬರಲಿಲ್ಲ. ಹೀಗಾಗಿ, ಈಗ ಸೌಲಭ್ಯ ಕೇಳುವ ಅಧಿಕಾರ ವಿಲ್ಲವೆಂದು ಧಿಮಾಕು, ಸೊಕ್ಕಿನ ಮಾತನಾಡುತ್ತಿದ್ದಾರೆ.  ಇದಕ್ಕೆ ದೇವೇಗೌಡರ ಒಮ್ಮತ, ಸಲಹೆ ಇರದೆ ಕುಮಾರಸ್ವಾಮಿ ಮಾತನಾಡಲಾರರು. ದೇವೇಗೌಡರು ಮಗನಿಗೆ ಬುದ್ಧಿ ಹೇಳದೆ ರಾಜ್ಯದ ವಿಭಜನೆಗೆ ಕುಮ್ಮಕ್ಕು ನೀಡುತ್ತಿರುವುದು ಖಂಡನೀಯ ಎಂದರು.

ರಾಜ್ಯವನ್ನು ವಿಭಜಿಸುವ ಕೆಲಸಕ್ಕೆ ಯಾರೂ ಕೈ ಹಾಕಬಾರದು. ನಾವು ಬದುಕಿರುವವರೆಗೂ ರಾಜ್ಯ ವಿಭಜಿಸಲು ಬಿಡಲ್ಲ. ಅಖಂಡ ಕರ್ನಾಟಕ ಉಳಿಸಿ,
ಬೆಳೆಸಿಕೊಂಡು ಹೋಗೋದು ಮುಖ್ಯ. ರಾಜಕೀಯ ದೊಂಬರಾಟ, ಸ್ವಾರ್ಥಕ್ಕಾಗಿ ರಾಜ್ಯ ಒಡೆದಾಳುವ ನೀತಿಗೆ ಅವಕಾಶ ಕೊಡಲ್ಲ. ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡುವವರೊಂದಿಗೆ ಸ್ಪಂದಿಸಿ ಬಗೆಹರಿಸಲಾಗುವುದು ಎಂದರು. ಶ್ರೀರಾಮುಲು, ಉಮೇಶ ಕತ್ತಿ ಪ್ರತ್ಯೇಕ ರಾಜ್ಯದ
ಬೇಡಿಕೆ ಇಟ್ಟಿಲ್ಲ. ಅವರು, ಈ ಭಾಗದ ಜನರ ಭಾವನೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯವನ್ನು ಒಡೆದಾಳುವುದೇ ಜೆಡಿಎಸ್‌ನ ಮುಖ್ಯ ಉದ್ದೇಶ. ಅಧಿಕಾರ, ಸ್ವಾರ್ಥಕ್ಕಾಗಿ ಬೆಂಕಿ ಹಚ್ಚುವ ಕೆಲಸ ಮಾಡೋದೆ ಅಪ್ಪ-ಮಕ್ಕಳ ಕೆಲಸ ಎಂದು ಕಿಡಿ ಕಾರಿದರು. 

ಎಚ್‌ಡಿಕೆ ಹೇಳಿಕೆಯಿಂದ ಕಾಂಗ್ರೆಸ್‌ಗೆ ಡ್ಯಾಮೇಜ್‌
ಬೆಂಗಳೂರು: “ಉತ್ತರ ಕರ್ನಾಟಕ ಕುರಿತು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಯಿಂದ ಕಾಂಗ್ರೆಸ್‌ಗೆ ಆ ಭಾಗದಲ್ಲಿ ಡ್ಯಾಮೇಜ್‌ ಆಗಿದೆ’ ಎಂದು ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಕೇವಲ ರಾಮನಗರ, ಚನ್ನಪಟ್ಟಣಕ್ಕೆ ಮುಖ್ಯಮಂತ್ರಿಯಲ್ಲ. ಅವರು ಇಡೀ ರಾಜ್ಯದ ಮುಖ್ಯಮಂತ್ರಿ. ಅವರು, ಯಾಕೆ ಆ ರೀತಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ, ಯಾವ ಅರ್ಥದಲ್ಲಿ, ಯಾವ ಸಂದರ್ಭದಲ್ಲಿ ಹೇಳಿದರೋ ಗೊತ್ತಿಲ್ಲ ಎಂದರು.

ಮುಖ್ಯಮಂತ್ರಿಯವರು ಡ್ಯಾಮೇಜ್‌ ಕಂಟ್ರೋಲ್‌ ಮಾಡದಿದ್ದರೆ ನಾವು ಪರ್ಯಾಯವಾಗಿ ಬೇರೆ ಏನಾದರೂ ಮಾಡಬೇಕಾಗುತ್ತದೆ. ಕುಮಾರಸ್ವಾಮಿ ಎಲ್ಲರ ಪರ ಇರುತ್ತಾರೆ ಎಂಬುದು ನಮ್ಮ ಭಾವನೆ. ಅವರ ಹೇಳಿಕೆ ತಪ್ಪಾಗಿದ್ದರೆ ವಾಪಸ್‌ ಪಡೆಯಲು ಹೇಳಿದ್ದೇವೆ ಎಂದರು.  ಬೆಳಗಾವಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಅಭಿವೃದ್ಧಿಗೋಸ್ಕರ. ಪ್ರತ್ಯೇಕತೆಯ ಬಗ್ಗೆ ಪ್ರತಿಭಟನೆ ನಡೆಯುತ್ತಿಲ್ಲ. ನಾವೂ ಕೂಡ ಅದರಲ್ಲಿ ಭಾಗಿಯಾಗ್ತೀವೆ. ಉ.ಕ.ದ ಅಭಿವೃದ್ಧಿ ಆಗಬೇಕು ಎಂಬುದು ನಮ್ಮ ಗುರಿ. ಮಂಗಳೂರು, ಬೆಂಗಳೂರು, ಮೈಸೂರು ರೀತಿಯಲ್ಲಿ ನಮ್ಮ ಭಾಗವೂ ಅಭಿವೃದಿಟಛಿಯಾಗಬೇಕು ಎಂದು ನಾವು ಬಯಸುವುದು ತಪ್ಪಲ್ಲ ಎಂದು ತಿಳಿಸಿದರು. 

Advertisement

ಅನ್ಯಾಯ ಸರಿಪಡಿಸಲು ಶೀಘ್ರ ಸಿಎಂ ಭೇಟಿ: ಮಂತ್ರಾಲಯ ಶ್ರೀ
ಗಂಗಾವತಿ: ಉತ್ತರ ಕರ್ನಾಟಕ ಪ್ರತೇಕ ರಾಜ್ಯ ರಚನೆಯಿಂದ ಅಭಿವೃದ್ಧಿ ಅಸಾಧ್ಯ. ಅಖಂಡ ಕರ್ನಾಟಕದಿಂದ ಎಲ್ಲವೂ ಸಾಧ್ಯ ಎಂದು ಮಂತ್ರಾಲಯದ ಸುಭುದೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ-ದಕ್ಷಿಣ ಎಂದು ಭೇದ ಮಾಡುವುದು ಸರಿಯಲ್ಲ. ಅಖಂಡ ಕರ್ನಾಟಕಕ್ಕಾಗಿ ಹಿರಿಯರು ತ್ಯಾಗ, ಬಲಿದಾನ ಮಾಡಿದ್ದಾರೆ. ರಾಜಕೀಯ ಕಾರಣಕ್ಕಾಗಿ ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆ ಸಲ್ಲದು. ಅಭಿವೃದಿಟಛಿಗಾಗಿ ಸರ್ಕಾರದಿಂದ ಅನುದಾನ ಅಥವಾ ಯೋಜನೆ ರೂಪಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಈ ಕುರಿತಂತೆ ಮಂತ್ರಾಲಯ ಮಠವು ಶೀಘ್ರದಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿ ಉ.ಕ.ಕ್ಕೆ ಇದುವರೆಗೂ ಆಗಿರುವ ಅನ್ಯಾಯ ಸರಿಪಡಿಸುವಂತೆ ಕೋರಲಿದೆ ಎಂದರು.

ರಾಜಕೀಯ ಕಾರಣಕ್ಕೆ ಬಳಕೆ ಸರಿಯಲ್ಲ: ಪರಂ
ಬೆಂಗಳೂರು: ಪ್ರತ್ಯೇಕ ರಾಜ್ಯ ವಿಚಾರವನ್ನು ರಾಜಕೀಯ ಕಾರಣಕ್ಕಾಗಿ ಬಳಸಿಕೊಳ್ಳುವುದು ಸರಿ ಅಲ್ಲ; ಕೊನೆಪಕ್ಷ ಏಕೀಕರಣಕ್ಕಾಗಿ ಹೋರಾಟ ಮಾಡಿದವರಿಗಾದರೂ ಗೌರವ ಕೊಡಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ನಗರದಲ್ಲಿ ಹಮ್ಮಿಕೊಂಡಿದ್ದ “ಸಿ-40 ನಗರ’ ಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತ್ಯೇಕ ರಾಜ್ಯ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ, ಏಕೀಕರಣಕ್ಕಾಗಿ ಅನೇಕರು ತಮ್ಮ ಜೀವನವನ್ನು ಧಾರೆ ಎರೆದಿದ್ದಾರೆ. ಅವರ ಹೋರಾಟಕ್ಕಾದರೂ ಗೌರವ ಕೊಡಬೇಕು ಎಂದು ತಿಳಿಸಿದರು.

ಪ್ರತಿ ಬಾರಿಯೂ ಪ್ರತ್ಯೇಕ ರಾಜ್ಯದ ಕೂಗು ಏಕೆ ಬರುತ್ತಿದೆ ಎನ್ನುವುದನ್ನು ನಾವು ಗಮನಿಸಬೇಕಿದೆ. ಎಲ್ಲಾ ಸಮಸ್ಯೆಗಳಿಗೂ ಪ್ರತ್ಯೇಕ ರಾಜ್ಯ ಮಾಡುವುದು ಸರಿಯಲ್ಲ, ಇದರಿಂದ ದೇಶ ಛಿದ್ರವಾಗಿ ಭಾರತದ ಅಖಂಡತೆ ಹಾಳಾಗುತ್ತದೆ. ಪ್ರತ್ಯೇಕತೆ ಮಾತಿಗೆ ಅವಕಾಶ ಕೊಡದೆ ಅಲ್ಲಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಗಮನ ಹರಿಸಬೇಕಿದೆ.
● ಡಾ.ಪ್ರಮೋದಾದೇವಿ ಒಡೆಯರ್‌ ರಾಜವಂಶಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next