ಬಿಜೆಪಿ ಅಭ್ಯರ್ಥಿಯಾಗಿರುವ “ಮೆಟ್ರೋ ಮ್ಯಾನ್’ ಇ. ಶ್ರೀಧರನ್ ಕೇರಳದ ಪಾಲಕ್ಕಾಡ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು “ನನ್ನ ಚುನಾವಣಾ ಪ್ರಚಾರ ವಿವಾದ ಮಾಡುವುದಲ್ಲ; ಅದು ಕೇವಲ ಅಭಿವೃದ್ಧಿ ಕುರಿತಾದುದ್ದು. ನನ್ನ ಗುರಿ ಅಭಿವೃದ್ಧಿಯೇ ಹೊರತು, ರಾಜಕೀಯವಲ್ಲ’ ಎಂದಿದ್ದಾರೆ.
“ನನಗೆ ವಯಸ್ಸಾಗಿರುವಷ್ಟೇ, ಅಪಾರ ಅನುಭವವೂ ಇದೆ. ಈಗಲೂ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿದ್ದೇನೆ. ಕೇರಳದಲ್ಲಿ ಬಿಜೆಪಿ ಕನಿಷ್ಠ 70 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇನ್ನೊಂದೆಡೆ, ಶುಕ್ರವಾರದಂದೇ ಕಾಂಗ್ರೆಸ್‌ನ ಹಾಲಿ ಶಾಸಕ ಶಫಿ ಪರಂಬಿಲ್ ಪಾಲಕ್ಕಾಡ್‌ನಿಂದ ನಾಮಪತ್ರ ಸಲ್ಲಿಸಿದ್ದಾರೆ.
ಶ್ರೀಧರನ್ ಬಣ್ಣ ಬಯಲು: “ಶ್ರೀಧನ್ ಭಾರತದ ತಜ್ಞ ಎಂಜಿನಿಯರ್ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಅವರು ಬಿಜೆಪಿ ಸೇರುವ ಮೂಲಕ ಅವರ ನೈಜಮುಖ ಎಲ್ಲರಿಗೂ ಗೊತ್ತಾಗಿದೆ. ಹೀಗಾಗಿ ಬಿಜೆಪಿ ಸೇರಿದ ಮೇಲೆ ಬಹಳ ಮಾತಾಡಿ ಒಳಗಿನ ಗುಟ್ಟು ರಟ್ಟು ಮಾಡಿಕೊಳ್ಳುತ್ತಿದ್ದಾರೆ’ ಎಂದು ಸಿಎಂ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ.
ಶಬರಿಮಲೆ ವಿಚಾರದಲ್ಲಿ ಎಲ್‌ಡಿಎಫ್ ಸರಕಾರಕ್ಕೆ ಯಾವುದೇ ಗೊಂದಲಗಳಿಲ್ಲ. ಸುಪ್ರೀಂ ಕೋರ್ಟ್ ಒಮ್ಮೆ ತೀರ್ಪು ನೀಡಿಬಿಟ್ಟರೆ, ಎಲ್ಲ ಗುಂಪುಗಳೊಂದಿಗೂ ಮಾತುಕತೆ ನಡೆಸಿ, ಅದನ್ನು ಕಾರ್ಯರೂಪಕ್ಕೆ ತರುತ್ತೇವೆ. ಪ್ರಸ್ತುತ, ಶಬರಿಮಲೆಯಲ್ಲಿ ಯಾವುದೇ ವಿವಾದಗಳಿಲ್ಲ’ ಎಂದು ಸಿಎಂ ಪುನರುಚ್ಚರಿಸಿದ್ದಾರೆ.
20 ಲಕ್ಷ ಉದ್ಯೋಗ ಆಫರ್!: ಉದ್ಯೋಗ, ಮೂಲಸೌಕರ್ಯ, ಕುಡಿವ ನೀರು, ಎಲ್ಲರಿಗೂ ಮನೆ..!- ಇದು ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಶುಕ್ರವಾರ ಬಿಡುಗಡೆ ಮಾಡಿದ ಪ್ರಣಾಳಿಕೆಯ ಹೈಲೈಟ್ಸ್. ಸುಶಿಕ್ಷಿತರಿಗೆ 20 ಲಕ್ಷ ಉದ್ಯೋಗ, 5 ವರ್ಷಗಳಲ್ಲಿ 15 ಸಾವಿರ ಸ್ಟಾರ್ಟ್ ಅಪ್ ಆರಂಭ, 5 ಲಕ್ಷ ಗೃಹ ನಿರ್ಮಾಣ- ಇವು ಪ್ರಮುಖ ಘೋಷಣೆ.