ಯಳಂದೂರು: ತಾಲೂಕಿನ ಪ್ರಸಿದ್ಧ ಯಾತ್ರ ಹಾಗೂ ಪೌರಾಣಿಕ ಸ್ಥಳವಾಗಿರುವ ಬಿಳಗಿರಿರಂಗನಬೆಟ್ಟದ ಶ್ರೀಬಿಳಿಗಿರಿರಂಗನಾಥಸ್ವಾಮಿ ಹಾಗೂ ಆಲಮೇಲಮ್ಮನವರ ದೇವಾಲಯದ ಉದ್ಘಾಟನೆ (ಮಹಾ ಸಂಪ್ರೋಕ್ಷಣೆಯ) ದಿನಾಂಕ ನಿಗದಿಗೊಂಡಿದ್ದು ಭಕ್ತರಲ್ಲಿ ಸಂತಸ ಮೂಡಿಸಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಮೇ 27 ರಿಂದ ಜೂ.1 ರಂದು ಮಹಾಪೂಜೆ ನಡೆಯಲಿದೆ. 7 ದಿನ ವಿಶೇಷ ಪೂಜೆ ಯಜ್ಞ ಯಾಗಾದಿ, ಹೋಮ ಹವನ ಸೇರಿದಂತೆ ಇತರೆ ಪೂಜಾ ಕೈಂಕರ್ಯಗಳು ನಡೆಯಲಿವೆ.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನ ಶಿಥಿಲ ಹಿನ್ನೆಲೆಯಲ್ಲಿ 2017 ಮಾರ್ಚ್‌ನಲ್ಲಿ ಪುರಾತತ್ವ ಇಲಾಖೆ ವತಿಯಿಂದ 2.40 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿ ಆರಂಭಿಸಲಾಗಿತ್ತು. ಶಿವಮೊಗ್ಗದ ಪರಂಪರಾ ಕನ್ಸಟ್ರಕ್ಷನ್ ಕಾಮಗಾರಿ ನಿರ್ವಹಣೆಗೆ ಮುಂದಾಗಿತ್ತು. 20 ತಿಂಗಳ ಒಳಗೆ ಕಾಮಗಾರಿ ಮುಗಿಸಬೇಕೆಂಬ ಷರತ್ತು ವಿಧಿಸಿದ್ದರೂ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಸುಮಾರು 3 ವರ್ಷ ಕಳೆಯುತ್ತಿದ್ದರೂ ಶೇ.80 ಕಾಮಗಾರಿ ಮುಗಿಸಲಾಗಿದೆ ಎಂದು ಇಲಾಖೆ ಹೇಳುತ್ತಿದೆ. ಆದರೆ, ಕಾಮಗಾರಿ ಇನ್ನೂ ಅಪೂರ್ಣವಾಗಿದೆ. ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸಗಳು ಭರದಿಂದ ಸಾಗುತ್ತಿವೆ.
ಜೀಣೋದ್ಧಾರಕ್ಕೆ ಕೈ ಜೋಡಿಸಿದ ಭಕ್ತಗಣ: ಬಿಳಿಗಿರಿರಂಗನಾಥಸ್ವಾಮಿಗೆ ಹೊರ ರಾಜ್ಯ ಸೇರಿದಂತೆ ದೇಶ ವಿದೇಶಗಳಲ್ಲೂ ಅನೇಕ ಭಕ್ತರು ಇದ್ದಾರೆ. ಕೆಲವು ಭಕ್ತರು ತಮ್ಮ ಸ್ವಂತ ಖರ್ಚಿನಲ್ಲೇ ಕಾಮಗಾರಿ ನಡೆಸಲು ಮುಂದಾಗಿದ್ದಾರೆ. ಹೊಸ ರಾಜಗೋಪುರದಲ್ಲಿ ಕೆತ್ತನೆ ಮಾಡಿದ್ದ ಶಿಲ್ಪಗಳು ಶಿಥಿಲವಾಗಿದ್ದು ಇದನ್ನೂ ದುರಸ್ತಿ ಮಾಡಿಸಲು ತಮಿಳು ನಾಡಿನ ಶಿಲ್ಪಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಕಾಮಗಾರಿ ಭರದಿಂದ ಸಾಗಿದೆ. ಇದನ್ನು ಖಾಸಗಿ ವ್ಯಕ್ತಿಗಳೇ ತಮ್ಮ ಸ್ವಂತ ಖರ್ಚಿನಿಂದ ಕಾಮಗಾರಿ ಮಾಡಿಸುತ್ತಿರುವುದು ವಿಶೇಷ. ಅಲ್ಲದೆ ವಿದ್ಯುತ್ ಸಂಪರ್ಕವನ್ನೂ ಬೆಂಗಳೂರಿನ ಭಕ್ತರೊಬ್ಬರು ಮಾಡಿಸುತ್ತಿದ್ದಾರೆ. ಯಜ್ಞ ಶಾಲೆಗೂ ಕೆಲ ವ್ಯಕ್ತಿಗಳು ದಾನ ನೀಡಿ ಈ ಕಾಮಗಾರಿ ಪೂರ್ಣಗೊಳಿಸಲು ಅನುವು ಮಾಡಿಕೊಟ್ಟಿದ್ದಾರೆ.
ಮೇ ಒಳಗೆ ದೇಗುಲದ ಕಾಮಗಾರಿ ಪೂರ್ಣಗೊಂಡು, ಮೇ27 ರಿಂದ ಜೂ.1 ರಂದು ಮಹಾಪೂಜೆ ನಡೆಯಲಿದೆ. 7 ದಿನ ವಿಶೇಷ ಪೂಜೆ ಯಜ್ಞ ಯಾಗಾದಿ, ಹೋಮ ಹವನವನ್ನು ಆಗಮಿಕರ ವಿಶೇಷ ತಂಡ ನಿರ್ವಹಿಸಲಿದೆ. ಅಂತಿಮವಾಗಿ ಎಲ್ಲಾ ಪೂಜೆ ಮುಗಿದ ನಂತರ ಜೂ.3ರಿಂದ ದೇವಸ್ಥಾನದಲ್ಲಿ ಶ್ರೀ ಬಿಳಿಗಿರಿರಂಗನಾಥಸ್ವಾಮಿ ಮೂಲ ದೇವರ ದರ್ಶನ ಭಾಗ್ಯ ಭಕ್ತರಿಗೆ ದೊರೆಯಲಿದೆ ಎಂದು ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ.
ದೇಗುಲ ಜೀರ್ಣೋದ್ಧಾರ ಕಾಮಗಾರಿ ಸೇರಿದಂತೆ ನೆಲಹಾಸು, ವಿಮಾನಗೋಪುರ, ವಿದ್ಯುತ್, ಬಾಗಿಲು, ಯಜ್ಞಶಾಲೆ, ಬಣ್ಣ ಹಚ್ಚುವ ಕೆಲಸಗಳು ಬಾಕಿ ಇದೆ. ಈ ಕಾಮಗಾರಿಗಳು ತರಾತುರಿಯಲ್ಲಿ ನಿರ್ಮಾಣ ಮಾಡದೇ ಗುಣಮಟ್ಟದಿಂದ ಮುಗಿಸುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ ವಹಿಸಲು ಗಮನ ನೀಡಲಾಗುವುದು.
-ಆಲ್ದೂರು ರಾಜಶೇಖರ್, ಬಿಳಿಗಿರಿರಂಗನಾಥಸ್ವಾಮಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
* ಫೈರೋಜ್ ಖಾನ್