Advertisement

“ಲೆಟ್ಸ್‌ ಬ್ರೇಕಪ್‌’ಅಂತಿದ್ದಾರೆ ಶ್ರೀಲೀಲಾ

09:59 AM Dec 19, 2019 | Lakshmi GovindaRaj |

ಈ ವರ್ಷ ತೆರೆಕಂಡಿರುವ “ಕಿಸ್‌’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ಶ್ರೀಲೀಲಾ, ಬಳಿಕ “ಭರಾಟೆ’ ಚಿತ್ರದ ಮೂಲಕ ಸಿನಿಪ್ರಿಯರಿಗೆ ಇನ್ನಷ್ಟು ಹತ್ತಿರವಾಗಿರುವ ನಟಿ. ಈ ವರ್ಷ ಎರಡು ದೊಡ್ಡ ಚಿತ್ರಗಳಲ್ಲಿ ಅಭಿನಯಿಸಿದ ನಂತರ ಶ್ರೀಲೀಲಾ ಯಾರ ಜೊತೆ ಅಭಿನಯಿಸುತ್ತಾರೆ, ಯಾವ ಚಿತ್ರ ಒಪ್ಪಿಕೊಳ್ಳುತ್ತಾರೆ ಅನ್ನೋ ಕುತೂಹಲ ಸಹಜವಾಗಿಯೇ ಸಿನಿಮಾ ಮಂದಿಗಿತ್ತು. ಇದಕ್ಕೆ ಪೂರಕವೆನ್ನುವಂತೆ ಶ್ರೀಲೀಲಾ, ಈಗ ಸದ್ದಿಲ್ಲದೆ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ.

Advertisement

ಅಂದಹಾಗೆ, ಶ್ರೀಲೀಲಾ ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು “ಲೆಟ್ಸ್‌ ಬ್ರೇಕಪ್‌’. “ಪಂಚತಂತ್ರ” ಖ್ಯಾತಿಯ ವಿಹಾನ್‌ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ “ಲೆಟ್ಸ್‌ ಬ್ರೇಕಪ್‌’ ಚಿತ್ರದಲ್ಲಿ, ಶ್ರೀಲೀಲಾ ವಿಹಾನ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ “ಲೆಟ್ಸ್‌ ಬ್ರೇಕಪ್‌’ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, ಚಿತ್ರದ ಉಳಿದ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ನಡೆಯುತ್ತಿದೆ.

ಸದ್ಯ ತೆರೆಗೆ ಬರಲು ಸಿದ್ಧವಾಗಿರುವ “ಲಖನೌ ಟು ಬೆಂಗಳೂರು’ ಚಿತ್ರವನ್ನು ನಿರ್ದೇಶಿಸಿರುವ ಸ್ವರೂಪ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. “ಜಯಣ್ಣ ಕಂಬೈನ್ಸ್‌’ ಬ್ಯಾನರ್‌ನಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ 2020ರ ಮೇ ವೇಳೆಗೆ ಆರಂಭವಾಗಲಿದೆ. ಇನ್ನು ಪಕ್ಕ ರೊಮ್ಯಾಂಟಿಕ್‌ ಲವ್‌ ಸ್ಟೋರಿಯ “ಲೆಟ್ಸ್‌ ಬ್ರೇಕಪ್‌’ ಚಿತ್ರದ ಟೈಟಲ್‌ಗೆ “ಫಾರ್‌ ಎವರ್‌…’ ಎಂಬ ಅಡಿಬರಹವಿದೆ.

ಚಿತ್ರದಲ್ಲಿ ಶ್ರೀಲೀಲಾ ಮಾಡ್ರನ್‌ ಹುಡುಗಿಯ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ವಿನೀತ್‌ ರಾಜ್‌ ಮೆನನ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದ ಶೇಕಡಾ 90ರಷ್ಟು ಚಿತ್ರೀಕರಣ ಬೆಂಗಳೂರಿನಲ್ಲಿ, ಉಳಿದ ಚಿತ್ರೀಕರಣ ಮಂಗಳೂರಿನಲ್ಲಿ ನಡೆಯಲಿದೆಯಂತೆ. 2020ರ ಫೆಬ್ರವರಿ 14ರ ಪ್ರೇಮಿಗಳ ದಿನದಂದು “ಲೆಟ್ಸ್‌ ಬ್ರೇಕಪ್‌’ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next