ದಾವಣಗೆರೆ: ಶ್ರೀ ಭಗೀರಥ ಭೂಮಿಗೆ ಗಂಗಾವತರಣ ಮಾಡಿಸುವ ಮೂಲಕ ಜೀವಸೃಷ್ಟಿಗೆ ಕಾರಣೀಭೂತವಾಗಿರುವ ಮಹಾನ್ ಪುರುಷ ಎಂದು ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಸಿ.ಆರ್. ಅಂಜಿನಪ್ಪ ಬಣ್ಣಿಸಿದ್ದಾರೆ.
ಮಂಗಳವಾರ ಕುವೆಂಪು ಕನ್ನಡ ಭವನದಲ್ಲಿ ಶ್ರೀ ಭಗೀರಥ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ಶ್ರೀ ಭಗೀರಥರು ಪ್ರಯತ್ನಶೀಲತೆ, ಛಲ, ಸಾಹಸ, ಧೈರ್ಯ, ಗುರು, ದೈವಭಕ್ತಿ, ಏಕಾಗ್ರತೆ, ತಪೋನಿಷ್ಟತೆಯ ಪ್ರತೀಕ. ದೇವಲೋಕದಿಂದ ಭೂಮಿಗೆ ಗಂಗೆ ಹರಿಯುವಂತೆ ಮಾಡುವ ಮೂಲಕ ಭಗೀರಥ ಪ್ರಯತ್ನ… ಎಂಬ ನುಡಿಗಟ್ಟಿಗೆ ಕಾರಣರಾದವರು ಎಂದರು.
ಪ್ರಯತ್ನದ ಹಿಂದೆ ಪರಮಾತ್ಮನಿದ್ದಾನೆ… ಎಂಬ ನುಡಿಗಟ್ಟಿನ ಪ್ರತೀಕವಾಗಿ ಶ್ರೀ ಭಗೀರಥರು ಗಂಗಾವತರಣ ಮಾಡಿ, ತಮ್ಮ ಪೂರ್ವಜರ ಭಸ್ಮ ಸಮಾಧಿ ಮೇಲೆ ಹರಿಸಿದರು. ಅದಕ್ಕೂ ಮುನ್ನ ಏನೆಲ್ಲಾ ಸಮಸ್ಯೆ, ಅಡೆ-ತಡೆ ಎದುರಾದರೂ ತಮ್ಮ ಛಲ ಬಿಡಲಿಲ್ಲ. ಎದೆಗುಂದಲಿಲ್ಲ.
ಸತತ ಪ್ರಯತ್ನದ ಮೂಲಕ ಕೊನೆಗೂ ದೇವಲೋಕದ ಗಂಗೆಯನ್ನು ಭೂಮಿಗೆ ತರುವಲ್ಲಿ ಯಶಸ್ವಿಯಾದರು. ಅವರ ಪ್ರಯತ್ನಶೀಲತೆ ಇಡೀ ಮಾನವ ಕುಲಕ್ಕೆ ಮಾದರಿ ಮತ್ತು ಅನುಕರಣೀಯ ಎಂದು ತಿಳಿಸಿದರು. ಸೂರ್ಯವಂಶಸ್ಥ ಶ್ರೀಭಗೀರಥ ತಮ್ಮ ಪೂರ್ವಜರಾದ ಸಗರ, ಅಂಶುಮಂತ, ದಿಲೀಪರ ಕೈಯಲ್ಲಿ ಆಗದೇ ಇದ್ದುದ್ದನ್ನು ಮಾಡಿ ತೋರಿಸಿದವರು.
ಶ್ರೀ ಭಗೀರಥರ ತಾತಾ ಅಂಶುಮಂತನ ತಾತಾ ಸಗರ ಮಹಾರಾಜ ಕೈಗೊಂಡಿದ್ದ ಅಶ್ವಮೇಧ ಯಾಗದ ಕುದುರೆ ಬಿಡಿಸಿಕೊಳ್ಳಲಿಕ್ಕೆ ಹೋಗಿದ್ದ ಆತನ ಮಕ್ಕಳೆಲ್ಲಾ ಋಷಿಯ ಕೋಪಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು. ಅವರ ಮೋಕ್ಷ ಕಾಣಬೇಕು ಎಂದಾದರೆ ದೇವಲೋಕದಲ್ಲಿನ ಗಂಗೆ ಅವರ ಭಸ್ಮದ ರಾಶಿಯ ಮೇಲೆ ಹರಿಯಬೇಕಿತ್ತು.
ಗಂಗಾವತರಣ ಯಾರಿಂದಲೂ ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ ಶ್ರೀ ಭಗೀರಥರು ಗಂಗಾವತರಣ ಮಾಡಿಸಿದರು ಎಂದು ತಿಳಿಸಿದರು. ಮಳೆ ಇಲ್ಲದೆ ನೀರಿನ ಅತೀವ ಸಮಸ್ಯೆ ನಡುವೆಯೇ ಭೂಮಿಗೆ ಗಂಗೆ ಕರೆ ತಂದಂತಹ ಶ್ರೀ ಭಗೀರಥರ ಜಯಂತಿ ಆಚರಿಸುತ್ತಿದ್ದೇವೆ.
ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸುವ ಪ್ರತಿಜ್ಞೆ ಮಾಡಬೇಕು. ಪರಿಸರ ಸಂರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಭಗೀರಥ ಜಯಂತಿಯನ್ನ ಸಾರ್ಥಕಪಡಿಸಬೇಕು ಎಂದು ಮನವಿ ಮಾಡಿದರು.