ಬ್ಯಾಂಕಾಕ್: ರಾಯಭಾರ ಕಚೇರಿಯಲ್ಲಿನ ಮಹಿಳೆಯ ಸ್ನಾನಗೃಹದಲ್ಲಿ ಸ್ಪೈ ಕ್ಯಾಮರಾಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮಾಜಿ ಸಿಬ್ಬಂದಿಯನ್ನು ಬಂಧಿಸಿಲಾಗಿದೆ. ಬ್ಯಾಂಕಾಕ್ ನಲ್ಲಿರುವ ಆಸ್ಟ್ರೇಲಿಯನ್ ರಾಯಭಾರ ಕಚೇರಿಯಲ್ಲಿ ಈ ಘಟನೆ ನಡೆದಿದೆ.
ಕಳೆದ ತಿಂಗಳು ರಾಯಲ್ ಥಾಯ್ ಪೊಲೀಸರು ಸ್ಥಳೀಯ ಮಾಜಿ ಸಿಬ್ಬಂದಿಯನ್ನು ಬಂಧಿಸಿದ್ದಾರೆ ಎಂದು ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳು ಮತ್ತು ವ್ಯಾಪಾರ ಇಲಾಖೆ ದೃಢಪಡಿಸಿದೆ.
“ಎಲ್ಲಾ ಸಿಬ್ಬಂದಿಯ ಭದ್ರತೆ ಮತ್ತು ಗೌಪ್ಯತೆ ಇಲಾಖೆಗೆ ಆದ್ಯತೆಯಾಗಿದೆ ಮತ್ತು ನಾವು ಸೂಕ್ತ ಬೆಂಬಲವನ್ನು ನೀಡುವುದನ್ನು ಮುಂದುವರಿಸುತ್ತೇವೆ” ಎಂದು ಇಲಾಖೆಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಸ್ಟ್ರೇಲಿಯ ರಾಯಭಾರ ಕಚೇರಿಯು ವ್ಯಕ್ತಿಯ ವಿರುದ್ಧ ಜನವರಿ 6 ರಂದು ದೂರು ದಾಖಲಿಸಿದೆ ಎಂದು ರಾಯಲ್ ಥಾಯ್ ಪೊಲೀಸ್ ನ ವಿದೇಶಾಂಗ ವ್ಯವಹಾರಗಳ ವಿಭಾಗದ ಕಮಾಂಡರ್ ಖೆಮರಿನ್ ಹಸ್ಸಿರಿ ಹೇಳಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಥಾಯ್ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಹಿಜಾಬ್ ವಿವಾದ: ಭಾರತ ಹೆಣ್ಣುಮಕ್ಕಳ ಭವಿಷ್ಯ ಕಸಿದುಕೊಳ್ಳುತ್ತಿದೆ; ರಾಹುಲ್ ಟ್ವೀಟ್
ಬಾತ್ ರೂಮ್ ನಲ್ಲಿ ಕ್ಯಾಮೆರಾಗಳು ಎಷ್ಟು ಸಮಯದವರೆಗೆ ಇದ್ದವು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬಾತ್ ರೂಮ್ ನಲ್ಲಿ ಕ್ಯಾಮರಾ ಮೆಮೊರಿ ಕಾರ್ಡ್ ಕಂಡುಬಂದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ಘಟನೆಯು ಗಂಭೀರ ಭದ್ರತಾ ಉಲ್ಲಂಘನೆಯನ್ನು ಪ್ರತಿನಿಧಿಸುತ್ತದೆ ಎಂದು ಆಸ್ಟ್ರೇಲಿಯಾದ ರಕ್ಷಣಾ ಮತ್ತು ವಿದೇಶಾಂಗ ನೀತಿ ತಜ್ಞರು ತಿಳಿಸಿದ್ದಾರೆ.