ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಕೆಎಚ್‌ಐಆರ್ (ನಾಲೆಜ್ ಹೆಲ್ತ್ ಇನ್ನೋವೇಶನ್ ರಿಸರ್ಚ್) ಸಿಟಿಯ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ. 26ರಂದು ಚಾಲನೆ ನೀಡಲಿದ್ದಾರೆ.
ಸಿಂಗಾಪುರದ ಬಯೊಪೊಲೀಸ್, ರಿಸರ್ಚ್ ಟ್ರ್ಯಾಂಗಲ್ ಪಾರ್ಕ್, ಸೈನ್ಸ್ ಪಾರ್ಕ್, ಕೆಬಿಐಸಿ, ಅಮೆರಿಕದ ಬೋಸ್ಟನ್ ಇನ್ನೋವೇಶನ್ ಕ್ಲಸ್ಟರ್ ಮಾದರಿಯಲ್ಲೇ ಬೆಂಗಳೂರಿನಲ್ಲಿ ಈ ಸಂಶೋಧನ ನಗರವು ಸುಮಾರು 2 ಸಾವಿರ ಎಕ್ರೆ ವಿಸ್ತೀರ್ಣದಲ್ಲಿ ತಲೆ ಎತ್ತಲಿದೆ.
ಈ ಪೈಕಿ ಮೊದಲ ಹಂತ 500 ಎಕ್ರೆಗಳಲ್ಲಿ ಸಾಕಾರಗೊಳ್ಳಲಿದ್ದು, 40 ಸಾವಿರ ಕೋ.ರೂ. ಹೂಡಿಕೆಯ ಈ ಯೋಜನೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಸೆ. 26ರಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ದೇಶ-ವಿದೇಶಗಳ ಗಣ್ಯ ಉದ್ಯಮಿಗಳು, ಶಿಕ್ಷಣ ತಜ್ಞರು, ಸಂಶೋಧಕರು ಮತ್ತು ವೈದ್ಯಕೀಯ ಕ್ಷೇತ್ರದ ಸಾಧಕರು ಭಾಗವಹಿಸಲಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ರವಿವಾರ ಈ ಬಗ್ಗೆ ಮಾಹಿತಿ ನೀಡಿ, ದೊಡ್ಡಬಳ್ಳಾಪುರ- ಡಾಬಸ್‌ಪೇಟೆ ನಡುವೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 50 ಕಿ.ಮೀ. ದೂರದಲ್ಲಿ ಇದು ಅಸ್ತಿತ್ವಕ್ಕೆ ಬರಲಿದೆ ಎಂದಿದ್ದಾರೆ.
ಉದ್ದೇಶಿತ ಕೆಎಚ್‌ಐಆರ್ ಸಿಟಿಯಲ್ಲಿ ವಿಖ್ಯಾತ ಕಂಪೆನಿಗಳ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು ಇರಲಿವೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಡಾ| ದೇವಿಶೆಟ್ಟಿ, ಕಿರಣ್ ಮಜುಂದಾರ್ ಷಾ, ಪ್ರಶಾಂತ್ ಪ್ರಕಾಶ್, ಥಾಮಸ್ ಓಶಾ, ರಾಂಚ್ ಕಿಂಬಾಲ್ , ಮೋಹನದಾಸ್ ಪೈ, ನಿಖೀಲ್ ಕಾಮತ್ ಮುಂತಾದ ಖ್ಯಾತನಾಮರನ್ನು ಒಳಗೊಂಡ ಸಲಹಾ ಸಮಿತಿ ರಚಿಸಲಾಗಿದೆ. ಇಲ್ಲಿ ಪ್ರತೀ ಎಕ್ರೆಗೆ 100 ಜನರ ವಸತಿ ಇರುವಂತೆ ನೋಡಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ ಎಂದಿದ್ದಾರೆ.
ಶಿಕ್ಷಣ, ಆರೋಗ್ಯ, ನಾವೀನ್ಯ ಮತ್ತು ಸಂಶೋಧನೆಯೇ ಈ ಪರಿಕಲ್ಪನೆಯ ಆಧಾರ ಸ್ತಂಭಗಳಾಗಿವೆ. ಜೀವವಿಜ್ಞಾನಗಳು, ಭವಿಷ್ಯದ ಸಂಚಾರ ವ್ಯವಸ್ಥೆ, ಸೆಮಿಕಂಡಕ್ಟರ್, ಅಡ್ವಾನ್ಸ್$x ಮ್ಯಾನುಫ್ಯಾಕ್ಚರಿಂಗ್ ಮತ್ತು ವೈಮಾಂತರಿಕ್ಷ, ರಕ್ಷಣೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಿಗೆ ಇಲ್ಲಿ ಆದ್ಯತೆ ನೀಡಲಾಗುವುದು. ಈ ವಲಯಗಳಿಗೆ ಸಂಬಂಧಿಸಿದ ಜಾಗತಿಕ ಮಟ್ಟದ ಉತ್ಕೃಷ್ಟ ವಿಶ್ವವಿದ್ಯಾನಿಲಯಗಳು, ಸಂಶೋಧನಾಲಯಗಳು, ಆಸ್ಪತ್ರೆಗಳು ಮತ್ತು ಕಂಪೆನಿಗಳು ಕೆಎಚ್‌ಐಆರ್ ಸಿಟಿಯಲ್ಲಿ ನೆಲೆಯೂರಿ, ತಮ್ಮ ಚಟುವಟಿಕೆ ಆರಂಭಿಸಲಿವೆ ಎಂದಿದ್ದಾರೆ.