Advertisement

ಆಲೂಗಡ್ಡೆ ಮಾರಾಟ ಚುರುಕು, ಬಿತ್ತನೆಯೂ ಆರಂಭ

09:22 PM May 30, 2019 | Team Udayavani |

ಹಾಸನ: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆಯಾಗುತ್ತಿರುವುದರಿಂದ ಆಲೂಗಡ್ಡೆ ಬಿತ್ತನೆ ಆರಂಭವಾಗಿದ್ದು, ಹಾಸನದ ಆಲೂಗಡ್ಡೆ ಮಾರುಕಟ್ಟೆಯಲ್ಲೂ ಬಿತ್ತನೆ ಆಲೂಗಡ್ಡೆ ಮಾರಾಟದ ವಹಿವಾಟು ಚುಕುಕಾಗಿದೆ.

Advertisement

ಗುರುವಾರ ಮಾರುಕಟ್ಟೆಯಲ್ಲಿ 100 ಲಾರಿ ಲೋಡ್‌ಗೂ ಹೆಚ್ಚು ಆಲೂಗಡ್ಡೆ ಮಾರಾಟವಾಗಿದೆ. ಆಲೂಗಡ್ಡೆ ಬೇಡಿಕೆ ಬಂದಿದ್ದರಿಂದ ದರವೂ ತುಸು ಏರಿದ್ದು, ಗುರುವಾರ ಕ್ವಿಂಟಲ್‌ ಬಿತ್ತನೆ ಆಲೂಗಡ್ಡೆ 1,300 ರಿಂದ 1,400 ರೂ. ದರದಲ್ಲಿ ಮಾರಾಟವಾಯಿತು.

ಚಿಕ್ಕಮಗಳೂರು ರೈತರಿಂದ ಖರೀದಿ: ಚಿಕ್ಕಮಗಳೂರು ತಾಲೂಕಿನ ರೈತರು ಗುರುವಾರ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಆಲೂಗಡ್ಡೆಯನ್ನು ಖರೀದಿಸಿದರು. ಬೇಡಿಕೆ ಹೆಚ್ಚುತ್ತಿರುವುದರಿಂದ ವರ್ತಕರು ಆಲೂಗಡ್ಡೆಯನ್ನು ಶೀತಲಗೃಹಗಳಿಂದ ಎಪಿಎಂಸಿ ಪ್ರಾಂಗಣಕ್ಕೆ ತರಿಸಿಕೊಳ್ಳುತ್ತಿದ್ದಾರೆ.

ಹಾಸನದ ಎಪಿಎಂಸಿ ಪ್ರಾಂಗಣದಲ್ಲಿ ಮೇ16 ರಿಂದ ಬಿತ್ತನೆ ಲೂಗಡ್ಡೆ ಮಾರಾಟ ಆರಂಭವಾಗಿದೆ. ಆದರೆ ಮಳೆ ಇಲ್ಲದಿದ್ದರಿಂದ ಎರಡು ವಾರಗಳಿಂದಲೂ ರೈತರು ಆಲೂಗಡ್ಡೆ ಖರೀದಿಗೆ ಮುಂದಾಗಿರಲಿಲ್ಲ. ಆದರೆ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಆದರೆ ಭೂಮಿ ತಂಪಾಗುವಷ್ಟು ಹಾಗೂ ಆಲೂಗಡ್ಡೆ ಬಿತ್ತನೆ ಮಾಡುವಷ್ಟು ಹಿತಕರವಾದ ಮಳೆ ಆಗಿಲ್ಲ.

ಹಾಗಾಗಿ ಕೆಲ ರೈತರು ಬಿತ್ತನೆ ಆಲೂಗಡ್ಡೆ ಖರೀದಿಸಿದರೂ ಬಿತ್ತನೆಗೆ ಮುಂದಾಗಿಲ್ಲ. ಆದರೆ ಪಂಪ್‌ಸೆಟ್‌ಗಳನ್ನು ಹೊಂದಿರುವ ರೈತರು ಆಲೂಗಡ್ಡೆ ಬಿತ್ತನೆ ಆರಂಭಿಸಿದ್ದು, ಆ ರೈತರನ್ನು ಕಂಡು ಮಳೆ ಆಶ್ರಯದ ಹಾಸನ ತಾಲೂಕಿನ ಕೆಲ ರೈತರೂ ಭೂಮಿ ತಂಪಾಗದಿದ್ದರೂ ಆಲೂಗಡ್ಡೆ ಬಿತ್ತನೆ ಆರಂಭಿಸಿದ್ದಾರೆ.

Advertisement

ಮಾಹಿತಿ ಮಳಿಗೆಗೆ ರೈತರ ಭೇಟಿ: ಆಲೂಗಡ್ಡೆ ಖರೀದಿ ಚುರುಕಾಗುತ್ತಿದ್ದಂತೆ ತೋಟಗಾರಿಕೆ ಇಲಾಖೆ ಎಪಿಎಂಸಿ ಪ್ರಾಂಗಣದಲ್ಲಿ ತೆರೆದಿರುವ ಆಲೂಗಡ್ಡೆ ತಾಂತ್ರಿಕ ಮಾಹಿತಿ ಮಳಿಗೆಗಳಿಗೂ ರೈತರು ಭೇಟಿ ನೀಡುತ್ತಿದ್ದು, ಆಲೂಗಡ್ಡೆಗೆ ಸಿಗುವ ಸಬ್ಸಿಡಿ, ಬೀಜೋಪಚಾರದ ಹಾಗೂ ಸಸ್ಯಸಂರಕ್ಷಣಾ ಔಷಧಿಗಳನ್ನೂ ರಿಯಾಯ್ತಿ ದರದಲ್ಲಿ ಖರೀದಿಸಲು ಮುಂದಾಗುತ್ತಿದ್ದಾರೆ.

ಗುರುವಾರ ವ್ಯಾಪಕ ಮಳೆ: ಜಿಲ್ಲೆಯ ವಿವಿಧೆಡೆ ಗುರುವಾರ ವ್ಯಾಪಕ ಮಳೆಯಾಗಿದೆ. ಹಾಸನ ನಗರದಲ್ಲಿಯೂ ಮಧ್ಯಾಹ್ನ 3.45 ರಿಂದ 4.10 ಗಂಟೆ ವರೆಗೂ ಗುಡುಗು – ಸಿಡಿಲು ಸಹಿತ ಮಳೆ ಸುರಿಯಿತು. ಹಾಸನ ತಾಲೂಕಿನಲ್ಲಿ ವ್ಯಾಪಕವಾಗಿ ಮಳೆಯಾಗಿದೆೆ. ಮಳೆಯಿಂದ ವಾತಾವರಣ ತಂಪಾಗಿದ್ದು, ಆಲೂಗಡ್ಡೆ ಬಿತ್ತನೆಗೆ ಪೂರಕವಾಗಿದೆ. ಹಾಗಾಗಿ ರೈತರು ಆಲೂಗಡ್ಡೆ ಖರೀದಿಗೆ ಮುಂದಾಗುವ ನಿರೀಕ್ಷೆಯಿದ್ದು ಶುಕ್ರವಾರದಿಂದ ಆಲೂಗಡ್ಡೆ ಮಾರುಕಟ್ಟೆಯಲ್ಲಿ ವಹಿವಾಟು ಹೆಚ್ಚುವುದೆಂದು ವರ್ತಕರು ನಿರೀಕ್ಷಿಸಿದ್ದಾರೆ.

1.25 ಲಕ್ಷ ಕ್ವಿಂಟಲ್‌ ಆಲೂಗಡ್ಡೆ ಮಾರಾಟ: ಹಾಸನ ಎಪಿಎಂಸಿ ಮಾರುಕಟ್ಟೆಯಲ್ಲಿ ಮೇ.16 ರಿಂದ ಬಿತ್ತನೆ ಆಲೂಗಡ್ಡೆ ಮಾರಾಟ ಆರಂಭವಾದಂದಿನಿಂದ ಈ ವರೆಗೆ 1.25 ಲಕ್ಷ ಕ್ವಿಂಟಲ್‌ ಆಲೂಗಡ್ಡೆ ಮಾರಾಟವಾಗಿದ್ದು, ಅ ಪೈಕಿ 86 ಸಾವಿರ ಕ್ವಿಂಟಲ್‌ ಆಲೂಗಡ್ಡೆಯನ್ನು ಹಾಸನ ಜಿಲ್ಲೆಯ ರೈತರು ಖರೀದಿಸಿದ್ದಾರೆ ಎಂದು ಹಾಸನ ಎಪಿಎಂಸಿ ಮಾಹಿತಿ ನೀಡಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿತ್ತನೆ ಆಲೂಗಡ್ಡೆ ಮಾರಾಟ ಕುಸಿದಿದೆ. ಆದರೆ ಮಳೆ ಪ್ರಮಾಣ ಸುಧಾರಿಸಿದರೆ ಹಾಗೂ ಜೂ.15 ರ ವರೆಗೂ ಆಲೂಗಡ್ಡೆ ಬಿತ್ತನೆಗೆ ಅವಕಾಶವಿರುವುದರಿಂದ ಕಾದು ನೋಡಬೇಕಾಗಿದೆ ಎಂದೂ ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

* ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next