ಹೊಸದಿಲ್ಲಿ: ಜಮೈಕಾದ ವಿಶ್ವವಿಖ್ಯಾತ ವೇಗದ ಓಟಗಾರ ಉಸೇನ್ ಬೋಲ್ಟ್ ನಿವೃತ್ತಿ ಬಳಿಕ ಫುಟ್‌ಬಾಲ್ ಆಟ ಶುರು ಮಾಡಿದ್ದಾರೆ. ಜಮೈಕಾದ ಮತ್ತೋರ್ವ ಓಟದ ದೊರೆ ಯೊಹಾನ್ ಬ್ಲೇಕ್ ಕೂಡ ಇದೇ ಹಾದಿಯಲ್ಲಿದ್ದಾರೆ. ಆದರೆ ಇವರದು ಫುಟ್‌ಬಾಲ್ ಅಲ್ಲ, ಕ್ರಿಕೆಟ್!
ಇನ್ನೆರಡು ವರ್ಷಗಳ ಬಳಿಕ ಬ್ಲೇಕ್ ಓಟಕ್ಕೆ ವಿದಾಯ ಹೇಳುವ ಸಾಧ್ಯತೆ ಯಿದೆ. ಅನಂತರ ಅವರು ಐಪಿಎಲ್‌ನಲ್ಲಿ ಆಡುವ ಆಸೆ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಅಥವಾ ಕೆಕೆಆರ್ ತಂಡದ ಪರ ಆಡುವ ಬಯಕೆ ಹೊಂದಿದ್ದಾರೆ. ಅವರ ಮೆಚ್ಚಿನ ಕ್ರಿಕೆಟಿಗರು ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್.
29 ವರ್ಷದ ಬ್ಲೇಕ್ ಒಲಿಂಪಿಕ್ಸ್ ನಲ್ಲಿ 2 ಚಿನ್ನ, ವಿಶ್ವಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನ, ವಿಶ್ವ ರಿಲೇಯಲ್ಲಿ ಒಂದು ಚಿನ್ನ ಗೆದ್ದಿದ್ದಾರೆ. 100, 200, 400 ಮೀ. ಓಟ ಅವರ ಸ್ಪರ್ಧಾ ವಿಭಾಗ. ಇಡೀ ಜಗತ್ತು ಗಮನ ಸೆಳೆಯು ವಂತೆ ಓಡಿದ ಅವರಿಗೆ, ಇದೇ ವೇಗವನ್ನು ಕಾಯ್ದುಕೊಳ್ಳುವುದು ಭವಿಷ್ಯದಲ್ಲಿ ಕಷ್ಟ. 35 ವರ್ಷದ ಒಳಗೆ ನಿವೃತ್ತಿಯಾದರೆ ಮುಂದೆ ಬೇರೊಂದು ಕ್ರೀಡೆ ಯನ್ನು ಆಯ್ದು ಕೊಳ್ಳುವ ಯೋಜನೆ ಯಲ್ಲಿದ್ದಾರೆ. ಆಗ ಹೊಳೆದದ್ದೇ ಕ್ರಿಕೆಟ್!
ಫ್ರಾಂಚೈಸಿ ಖರೀದಿಯ ಆಸಕ್ತಿ
ಸಾಧ್ಯವಾದರೆ ಭಾರತದಲ್ಲಿ ಒಂದು ಕ್ರಿಕೆಟ್ ಫ್ರಾಂಚೈಸಿಯನ್ನು ಖರೀದಿಸುವ ಆಸಕ್ತಿ ಬ್ಲೇಕ್ ಅವರಿಗಿದೆ. ವಿಶೇಷವೆಂದರೆ, ಅವರಿಗೆ ಈಗಾಗಲೇ ಕೆರಿಬಿಯನ್ ಕ್ರಿಕೆಟ್ ಲೀಗ್‌ನಲ್ಲಿ ಜಮೈಕಾ ತಲ್ಲವಾಸ್ ಟಿ20 ತಂಡದ ಪರ ಆಡಲು ಕರೆ ಬಂದಿದೆ. ಸದ್ಯ ಓಟದ ಮೇಲೆ ಗಮನ ಹರಿಸಬೇಕೆನ್ನುವ ಕಾರಣಕ್ಕೆ ಅದನ್ನು ನಿರಾಕರಿಸಿದ್ದಾರೆ.