Advertisement
ಇಲ್ಲಿನ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆದು ಬದುಕು ಕಟ್ಟಿಕೊಳ್ಳುವ ಕನಸು ಕಾಣುವ ಬಡ ಫಲಾನುಭವಿಗಳಿಗೆ ಬ್ಯಾಂಕ್‌ಗಳು ಇಲ್ಲ ಸಲ್ಲದ ಸಬೂಬು ಹೇಳಿ ಅವರನ್ನು ಅಲೆದಾಡಿಸುತ್ತಿವೆ. ನಂತರ ಸಾಲ ಸೌಲಭ್ಯ ಮಂಜೂರು ಮಾಡದೆ ಸತಾಯಿಸುತ್ತಿರುವ ಕುರಿತು ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಬಡವರ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಕಾಳಜಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಬ್ಯಾಂಕ್ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ಅಥವಾ ನೋಟಿಸ್ ನೀಡುವುದರಿಂದ ಸಮಸ್ಯೆ ಬಗೆಹರಿಯದು. ಜನಸಂಪರ್ಕ ಸಭೆ ನಡೆಸುವುದೇ ಇದಕ್ಕೆ ಪರಿಹಾರ. ಅದಕ್ಕಾಗಿ ಫೆ. 15 ರಂದು ಎಲ್ಲ ಬ್ಯಾಂಕ್‌ಗಳ ವ್ಯವಸ್ಥಾಪಕರು, ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಆಯ್ಕೆಯಾಗಿ ಇದುವರೆಗೂ ಸಾಲ ಮಂಜೂರು ಆಗದಿರುವ ಫಲಾನುಭವಿಗಳೊಂದಿಗೆ ಜಿಪಂ ಸಭಾಂಗಣದಲ್ಲಿ ಜನಸಂಪರ್ಕ ಸಭೆ ನಡೆಸಲಾಗುವುದು. ಇದೇ ಸಭೆಯಲ್ಲೇ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.
Related Articles
Advertisement
ಸಭೆಯಲ್ಲಿ ಜಿಪಂ ಸಿಇಒ ಪಿ.ಎನ್. ರವೀಂದ್ರ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ಅಧಿಕಾರಿ ಮಂಜುನಾಥ್, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿಂಗೇಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಬ್ಯಾಂಕ್‌ಗಳ ವ್ಯವಸ್ಥಾಪಕರು ಭಾಗವಹಿಸಿದ್ದರು.
244 ಅರ್ಜಿ ಪೈಕಿ 40 ಜನರಿಗೆ ಮಾತ್ರ ಸಾಲ ಮಂಜೂರು
ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮದಡಿ 137 ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡುವ ಗುರಿ ಹೊಂದಲಾಗಿದೆ. ವಿವಿಧ ಬ್ಯಾಂಕ್‌ಗಳಿಗೆ 244 ಅರ್ಜಿಗಳನ್ನು ಕಳುಹಿಸಿಕೊಡಲಾಗಿದೆ. ಈ ಪೈಕಿ ಕೇವಲ 40 ಜನರಿಗೆ ಮಾತ್ರ ಸಾಲ ಮಂಜೂರಾಗಿದೆ. ಪ್ರಮುಖವಾಗಿ ಪ್ರಗತಿ ಕೃಷ್ಣ ಬ್ಯಾಂಕ್‌ಗೆ 110 ಅರ್ಜಿ ಕಳುಹಿಸಿಕೊಟ್ಟಿದ್ದು, ಕೇವಲ 9 ಜನರಿಗೆ ಸಾಲ ಮಂಜೂರಾಗಿದೆ. ಕೆನರಾ ಬ್ಯಾಂಕ್‌ಗೆ 47ರಲ್ಲಿ 11, ಎಸ್‌ಬಿಐ 20 ರಲ್ಲಿ 6, ವಿಜಯ ಬ್ಯಾಂಕ್ 23 ರಲ್ಲಿ 5, ಕರ್ನಾಟಕ ಬ್ಯಾಂಕ್ 20 ಅರ್ಜಿಗಳಲ್ಲಿ ಇಬ್ಬರಿಗೆ ಸಾಲ ಮಂಜೂರು ಮಾಡಿವೆ ಎಂದು ಕೈಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.