Advertisement
ಸಿರಿಧಾನ್ಯಗಳಿಂದ ಮಾಡಿದ ಬಗೆ ಬಗೆಯ ಶುಚಿ ರುಚಿಯಾದ ಖಾದ್ಯಗಳು ಈ ಹೋಟೆಲ್‌ನ ವಿಶೇಷತೆ. ನವಣಕ್ಕಿ ದೋಸೆ, ಸಾವಕ್ಕಿ ಇಡ್ಲಿ, ಊದಲು ಉಪ್ಪಿಟ್ಟು, ಬರಗು ಶಿರಾ, ಜೋಳದ ರೊಟ್ಟಿ, ರಾಗಿ ದೋಸೆ, ಬರಗಿನ ಪಡ್ಡು, ಆರ್ಕದ ಪಾಯಸ ಹೀಗೆ ವಿಶಿಷ್ಟ , ಹೊಸ ರುಚಿಯ ತಿಂಡಿ ಹಾಗೂ ಪಕ್ಕಾ ಜವಾರಿ ಊಟ ನೀಡುತ್ತಿದೆ ಹುಬ್ಬಳ್ಳಿಯ ಸ್ಪ್ರಿಂಗ್ ಆಫ್ ಹೆಲ್ತ್ ಹೊಟೇಲ್.
ಉತ್ತರ ಕರ್ನಾಟಕದ ಮೊದಲ ಸಿರಿಧಾನ್ಯ ಹೋಟೆಲ್ ಎಂಬ ಕೀರ್ತಿ, ಸ್ಪ್ರಿಂಗ್ ಆಫ್ ಹೆಲ್ತ್ ಹೊಟೇಲ್‌ಗೆ ಸಲ್ಲುತ್ತದೆ. ಸಿವಿಲ್ ಎಂಜಿನೀಯರ್ ಆಗಿದ್ದ ವೀರನಾರಾಯಣ ಕುಲಕರ್ಣಿ ಅವರು ಈ ಹೋಟೆಲ್ ಆರಂಭಿಸಿದ್ದಾರೆ. ಬಿ.ಇ ಹಾಗೂ ಎಂಬಿಎ ಪದವಿ ಪಡೆದ ವೀರನಾರಾಯಣ ಸಿಂಗಾಪುರದಲ್ಲಿ ಕೆಲ ವರ್ಷ ಉದ್ಯೋಗ ಮಾಡಿದರು. ಕಾರ್ಪೋರೇಟ್ ಬದುಕಿನಿಂದ ರೋಸಿ ಹೋಗಿ ಧಾರವಾಡಕ್ಕೆ ಬಂದರು.
Related Articles
Advertisement
ಅಲ್ಪಾವಧಿಯಲ್ಲಿ ಈ ಹೋಟೆಲ್ ಜನಮನ್ನಣೆ ಗಳಿಸಿದೆ. ಸಿರಿಧಾನ್ಯ ವೈದ್ಯರೆಂದೇ ಖ್ಯಾತಿ ಪಡೆದಿರುವ ಡಾ| ಖಾದರ್, ಉದ್ಯಮಿ ನಂದನ್ ನಿಲೇಕಣಿ, ಗುರುರಾಜ ದೇಶಪಾಂಡೆ, ಡಾ| ವಿಜಯ ಸಂಕೇಶ್ವರ, ವಿವೇಕ ಪವಾರ್ ಮೊದಲಾದ ಗಣ್ಯರು ಹೊಟೇಲ್‌ಗೆ ಬಂದು ಭೋಜನ ಸವಿದು ಇಷ್ಟಪಟ್ಟಿದ್ದಾರೆ.
ಬೆಳಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ವಾರದ ಎಲ್ಲ ದಿನ ಹೊಟೇಲ್ ತೆರೆದಿರುತ್ತದೆ. ಬೆಳಗ್ಗೆ 8ರಿಂದ 11ರವರೆಗೆ ಹಾಗೂ ಸಂಜೆ 5:30ರಿಂದ 9ರವರೆಗೆ ತಿಂಡಿ ಸಿಗುತ್ತದೆ. ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಊಟ ಲಭಿಸುತ್ತದೆ. ಊಟದಲ್ಲಿ ಜೋಳ ಅಥವಾ ನವಣಕ್ಕಿ ರೊಟ್ಟಿ, ನವಣಕ್ಕಿ ಅನ್ನ, ಸಾವಕ್ಕಿ ಮೊಸರನ್ನ, 2 ಬಗೆಯ ಪಲ್ಯ, ಸಲಾಡ್, ಕೋಸಂಬರಿ, ಸಿರಿಧಾನ್ಯ ಪಾಯಸ ನೀಡಲಾಗುತ್ತದೆ. ತಿಂಡಿಗೆ 60 ರೂ. ಹಾಗೂ ಊಟಕ್ಕೆ 120 ರೂ. ನಿಗದಿಪಡಿಸಲಾಗಿದೆ. ಇಲ್ಲಿ ಚಹಾ, ಕಾಫಿ ಸಿಗುವುದಿಲ್ಲ, ಅದರ ಬದಲಿಗೆ ಕಷಾಯ, ಸಿರಿಧಾನ್ಯ ಪೇಯ ಸಿಗುತ್ತದೆ.ಇಲ್ಲಿ ಎಲ್ಲ ಖಾದ್ಯಗಳನ್ನು ನವಣೆ, ಸಾಮೆ, ಆರ್ಕ, ಊದಲು, ಕೊರಲೆ, ಜೋಳ, ರಾಗಿ, ಸೆಜ್ಜೆ, ಬರಗುಗಳಿಂದ ತಯಾರಿಸಲಾಗುತ್ತದೆ. ಋತುಮಾನಕ್ಕೆ ಅನುಗುಣವಾಗಿ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಅಲ್ಲದೇ ಹಬ್ಬಗಳಂದು ವಿಶೇಷ ಖಾದ್ಯಗಳನ್ನು ನೀಡಲಾಗುವುದು. “ಜನರಲ್ಲಿ ಸಿರಿಧಾನ್ಯದ ಬಗ್ಗೆ ಜಾಗೃತಿ ಮೂಡುತ್ತಿದೆ. ಕಡಿಮೆ ಎಣ್ಣೆ ಬಳಕೆ ಮಾಡುವ, ಕಲಬೆರಕೆ ಇಲ್ಲದ ಆಹಾರ ಪದಾರ್ಥಗಳನ್ನು ಬಯಸುವವರು ನಮ್ಮ ಹೊಟೇಲ್‌ಗೆ ಬರುತ್ತಾರೆ. ಸಿರಿಧಾನ್ಯಗಳ ಬಳಕೆ ಹೆಚ್ಚಾದಂತೆ ಬೆಳೆಯುವ ರೈತರಿಗೆ ಉತ್ತೇಜನ ಸಿಗುತ್ತದೆ. ಅಲ್ಲದೇ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ’ ಎಂದು ಹೊಟೇಲ್ ಮಾಲೀಕ ವೀರನಾರಾಯಣ ಕುಲಕರ್ಣಿ ಹೇಳುತ್ತಾರೆ. ಹೊಟೇಲ್ ಚಿಕ್ಕದಾದರೂ ಚೊಕ್ಕವಾಗಿದೆ. ಗೌಜು ಗದ್ದಲ ಇಲ್ಲಿಲ್ಲ. ಇಲ್ಲಿ ಮನೆಯ ವಾತಾವರಣವಿದೆ. ಗೋಡೆಯ ಮೇಲೆ ವರ್ಲಿ ಕಲೆಯ ಚಿತ್ರಗಳಿದ್ದು, ಸಿರಿಧಾನ್ಯಗಳ ಮಹತ್ವವನ್ನು ಬರೆಯಲಾಗಿದೆ. ಊಟ, ತಿಂಡಿ ಮಾತ್ರವಲ್ಲ; ಸಿರಿಧಾನ್ಯಗಳೂ ಇಲ್ಲಿ ಮಾರಾಟಕ್ಕಿದ್ದು, ಅವು ಮಾಡಬಹುದಾದ ಖಾದ್ಯಗಳ ತಯಾರಿಕೆ ತರಬೇತಿಯೂ ಇಲ್ಲಿ ಸಿಗುತ್ತದೆ. – ವಿಶ್ವನಾಥ ಕೋಟಿ