ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನಿಂದ ಪ್ರತಿ ವರ್ಷ ನಡೆಯುವ ಚಿತ್ರಸಂತೆಯು ಅಂತಾರಾಷ್ಟ್ರೀಯ ಕ್ಯಾಲೆಂಡರ್‌ನಲ್ಲಿ ಉಲ್ಲೇಖವಾಗುವ ರೀತಿಯಲ್ಲಿ ಪ್ರಸಿದ್ಧಿ ಪಡೆಯಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು.
ಕರ್ನಾಟಕ ಚಿತ್ರಕಲಾ ಪರಿಷತ್ತು (ಸಿಕೆಪಿ) ಹಾಗೂ ಚಿತ್ರಕಲಾ ಮಹಾವಿದ್ಯಾಲಯದಿಂದ ಗುರುವಾರ ಹಮ್ಮಿಕೊಂಡಿದ್ದ ಚಿತ್ರಕಲಾ ಪರಿಷತ್ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದ ಪ್ರೊ.ಎಂ.ಎಸ್.ನಂಜುಂಡರಾವ್ ಪ್ರಶಸ್ತಿ ಪ್ರದಾನ ಹಾಗೂ ಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಚಿತ್ರಕಲಾ ಪರಿಷತ್ತು ಖ್ಯಾತಿ ಪಡೆಯುವುದರಿಂದ ಬೆಂಗಳೂರು ಹಾಗೂ ಕರ್ನಾಟಕಕ್ಕೆ ಹೆಮ್ಮೆ. ಚಿತ್ರಕಲಾ ಪರಿಷತ್ ಕಲಾವಿದರ ಬೆಳವಣಿಗೆ ಸದಾ ಪ್ರೋತ್ಸಾಹ ನೀಡುತ್ತಿದೆ. ಯುವ ಕಲಾವಿದರಿಗಾಗಿ ಅಂತಾರಾಷ್ಟ್ರೀಯ ಮಟ್ಟದ ಕಲಾ ಶಿಬಿರಗಳು° ನಡೆಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸಂಸ್ಕೃತಿ, ಇತಿಹಾಸ ಹಾಗೂ ನಾಗರಿಕತೆ ಇವುಗಳನ್ನು ಚಿತ್ರಕಲೆ ಪ್ರತಿಬಿಂಬಿಸುತ್ತದೆ. ಚಿತ್ರಗಳು ಹಾಗೂ ಮೂರ್ತಿಗಳು ಇತಿಹಾಸದ ಕಥೆಗಳನ್ನು ತಿಳಿಸಲಿವೆ. ಅವುಗಳನ್ನು ರಕ್ಷಿಸುವುದು ಇಂದಿನ ಯುವ ಪೀಳಿಗೆಯ ಕರ್ತವ್ಯವಾಗಿದೆ. ನಾಡಿನ ಕಲಾ ಸಂಸ್ಕೃತಿ ಪರಿಚಯಿಸುವ ಚಿತ್ರಕಲೆಗಳನ್ನು ರಚಿಸಿದ ಕಲಾವಿದರನ್ನು ಪ್ರೋತ್ಸಾಹಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಲಾವಿದ ಪ್ರೊ.ದೇವರಾಜ ದಕ್ಕೋಜಿ ಅವರಿಗೆ ಒಂದು ಲಕ್ಷ ರೂ. ನಗದು ಒಳಗೊಂಡ ಪ್ರೊ.ಎಂ.ಎಸ್.ನಂಜುಡರಾವ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಜೆ.ಕಮಲಾಕ್ಷಿ ಮತ್ತಿತರರು ಹಾಜರಿದ್ದರು.