ಬ್ಯಾಡಗಿ: ತಾಲೂಕಿನ ಶಿಡೇನೂರ ಗ್ರಾಮದ ರೈತರೊಬ್ಬರು ಡ್ರೋಣ್ ಮೂಲಕ ಶುಂಠಿ ಬೆಳೆಗೆ ಔಷಧ ಸಿಂಪಡಿಸುವ ಮೂಲಕ ವಿನೂತನ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾನೆ.
ಮದುವೆ ಇನ್ನಿತರ ಸಭೆ, ಸಮಾರಂಭಗಳಲ್ಲಿ ಫೋಟೋ, ವಿಡಿಯೋ ಹಾಗೂ ಕೃಷಿ ಭೂಮಿಗಳ ಭೂ ಮಾಪನಕ್ಕೆ ಡ್ರೋಣ್ ಕ್ಯಾಮರಾ ಬಳಸಿಕೊಳ್ಳುತ್ತಿರುವ ಕುರಿತು ವರದಿಯಾಗಿತ್ತು. ಆದರೆ, ತಾಲೂಕಿನ ರೈತ ರಾಜು ಹೊಸಕೇರಿ ಡ್ರೋಣ್ ಮೂಲಕ ಶುಂಠಿ ಬೆಳೆಗೆ ಔಷಧ ಸಿಂಪಡಿಸುವ ಮೂಲಕ ವಿನೂತನ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯಲ್ಲೇ ಮೊದಲ ಪ್ರಯೋಗ: ಹಾವೇರಿ ತಾಲೂಕು ತಿಮ್ಮಾಪುರ ಗ್ರಾಮದ ರೈತ ರಾಜು ಹೊಸಕೇರಿ, ಶಿಡೇನೂರ ಗ್ರಾಮದಲ್ಲಿ 7 ಎಕರೆ ಕೃಷಿ ಭೂಮಿಯನ್ನು ಗೇಣಿ(ಲಾವಣಿ) ಪಡೆದುಕೊಂಡಿದ್ದು, ಆ ಹೊಲದಲ್ಲಿ ಶುಂಠಿ ಮತ್ತು ಅಡಕೆ ಬೆಳೆದಿದ್ದಾರೆ. ಜಿಲ್ಲೆಯಲ್ಲೇ ಮೊದಲ ಬಾರಿಗೆ ಕೃಷಿಕನೊಬ್ಬ ಡ್ರೋಣ್ ಪ್ರಯೋಗ ಮಾಡಿದ್ದು, ಇದರಿಂದ ಕೃಷಿ ವೆಚ್ಚದಲ್ಲಿ ಕಡಿತ ಹಾಗೂ ಸಮಯ ಉಳಿಸಬಹುದಾಗಿದೆ ಎನ್ನಲಾಗುತ್ತಿದೆ.
ಕೃಷಿಯಲ್ಲಿ ತಾಂತ್ರಿಕತೆ: ಕೃಷಿಯಲ್ಲಿ ತಾಂತ್ರಿಕತೆ ಬಳಕೆ ಮಾಡುವ ಮೂಲಕ ಆದಾಯದಲ್ಲಿ ಹೆಚ್ಚಳ ಸೇರಿದಂತೆ ಬೇರೊಬ್ಬರ ಮೇಲೆ ಕೃಷಿ ಅವಲಂಬಿತವಾಗದಂತೆ ನೋಡಿಕೊಳ್ಳುವುದು ಡ್ರೋಣ್ ಬಳಕೆ ಹಿಂದಿರುವ ಉದ್ದೇಶ. ಮೊದಲ ಬಾರಿಗೆ ಯೂಟ್ಯೂಬ್‌ನಲ್ಲಿ ನೋಡಿದ್ದ ರಾಜು ಹೊಸಕೇರಿ ಅವರು, ಬಳಿಕ ತಮ್ಮ ಲಾವಣಿ ಹೊಲದಲ್ಲಿ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.
ದ್ರೋಣ್ ಬಳಕೆ ಹೇಗೆ: ಡ್ರೋಣ್‌ನಲ್ಲಿ 10 ಲೀ. ಟ್ಯಾಂಕ್ ಫಿಕ್ಸ್ ಆಗಿರುತ್ತದೆ. ಇದಕ್ಕೆ ಸಿಂಪಡಿಸುವ ಔಷಧಿಯನ್ನು ತುಂಬಿದ ಬಳಿಕ ಒಂದಿಂಚೂ ಜಾಗ ಬಿಡದೇ ಸ್ಪ್ರೇ ಮಾಡುವ ಡ್ರೋಣ್, ಕೇವಲ 15 ನಿಮಿಷದಲ್ಲಿ ಒಂದು ಎಕರೆ ಪೂರ್ತಿ ಸಿಂಪಡಣೆ ಮಾಡಿ ಮುಗಿಸುತ್ತದೆ.
ವೆಚ್ಚವೂ ಕಡಿಮೆ: ಡ್ರೋಣ್ ಬಳಕೆ ಖರ್ಚು ಕೈಗೆಟುಕಲ್ಲ ಎಂದೇನೂ ಇಲ್ಲ. ಪ್ರತಿ ಎಕರೆಗೆ ದ್ರೋಣ್ ವೆಚ್ಚ, ಔಷಧ ವೆಚ್ಚ ಹೊರತುಪಡಿಸಿ ಕೇವಲ 600 ರೂ. ಮಾತ್ರ ಖರ್ಚಾಗಲಿದೆ. ಹೀಗಾಗಿ, ಡ್ರೋಣ್ ಬಾಡಿಗೆ ದರ ಪ್ರತಿಯೊಬ್ಬ ರೈತರಿಗೂ ಕೈಗೆಟುಕುವಂತಿದೆ.