Advertisement

ಅಮೃತ ಕ್ರೀಡಾ ಯೋಜನೆಯಡಿ 75 ಕ್ರೀಡಾಪಟುಗಳಿಗೆ ಕ್ರೀಡಾ ತರಬೇತಿ : ಸಿಎಂ ಬೊಮ್ಮಾಯಿ

03:44 PM Oct 15, 2022 | Team Udayavani |

ಬೆಂಗಳೂರು: ಅಮೃತ ಮಹೋತ್ಸವ ಕ್ರೀಡಾ ಯೋಜನೆಯಡಿ 75 ಕ್ರೀಡಾಪಟುಗಳಿಗೆ ತರಬೇತಿ ನೀಡಿ, ಮುಂದಿನ ಒಲಂಪಿಕ್ಸ್ ನಲ್ಲಿ ಭಾಗವಹಿಸಲು ಹಾಗೂ ಭಾರತಕ್ಕೆ ಪದಕ ಗೆಲ್ಲಿಸುವ ಗುರಿಯನ್ನು ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಅವರು ಇಂದು 61ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ 2022 ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯದಲ್ಲಿ ಕ್ರೀಡಾಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಈ ವರ್ಷ ಗ್ರಾಮೀಣ ಕ್ರೀಡಾಕೂಟವನ್ನು ಪ್ರಾರಂಭಿಸಲಾಗಿದೆ. ಕಬಡ್ಡಿ, ಖೋ ಖೋ, ವಾಲಿಬಾಲ್, ಕುಸ್ತಿ, ಚಕ್ಕಡಿ ಓಡಿಸುವುದು ಮತ್ತು ಕರಾವಳಿಯ ಕಂಬಳ ಸೇರಿದಂತೆ ಗ್ರಾಮೀಣ ಕ್ರೀಡೆಗಳನ್ನು ಗ್ರಾಮ, ತಾಲ್ಲೂಕು, ಜಿಲ್ಲೆ ಹಾಗೂ ಅಂತಿಮವಾಗಿ ರಾಜ್ಯಮಟ್ಟದಲ್ಲಿ ಏರ್ಪಡಿಸಲಾಗುವುದು. ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಭಾರತ ರಾಷ್ಟ್ರವನ್ನು ಪ್ರತಿನಿಧಿಸುವ ಕ್ರೀಡಾಪಟುವಿಗೆ ಇಡೀ ದೇಶ ಜನ ಒಗ್ಗಟ್ಟಾಗಿ ಅವರನ್ನು ಹುರಿದುಂಬಿಸುತ್ತಾರೆ, ಹೀಗೆ ಕ್ರೀಡೆಯ ಮೂಲಕ ಇಡೀ ಭಾರತವನ್ನು ಜೋಡಿಸಬಹುದಾಗಿದೆ ಎಂದು ತಿಳಿಸಿದರು.

ಕ್ರೀಡೆಗಾಗಿ ಸೆಂಟರ್ ಆಫ್ ಎಕ್ಸ್ ಲೆನ್ಸ್: ಬೆಂಗಳೂರಿನ ಬಳಿ ಕ್ರೀಡೆಗಾಗಿ ಸೆಂಟರ್ ಆಫ್ ಎಕ್ಸ್ ಲೆನ್ಸ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲಾಗುತ್ತಿರುವ ಈ ಕೇಂದ್ರದಲ್ಲಿ ಕ್ರೀಡಾಪಟುಗಳಿಗೆ ಅತ್ಯುತ್ತಮ ತರಬೇತಿ, ಸಲಕರಣೆಗಳು, ಮೂಲಸೌಲಭ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿಯವರು ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಖೇಲೋ ಇಂಡಿಯಾ, ಫಿಟ್ ಇಂಡಿಯಾ, ಜೀತೋ ಇಂಡಿಯಾ ಕಾರ್ಯಕ್ರಮಗಳ ಮೂಲಕ ಭಾರತದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ಒಲಂಪಿಕ್ಸ್, ಏಷಿಯನ್, ಕಾಮನ್ ವೆಲ್ತ್,ನ್ಯಾಷನಲ್ ಗೇಮ್ಸ್ ಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳೊಂದಿಗೆ ಖುದ್ದು ಪ್ರೋತ್ಸಾಹಿಸಿದ್ದಾರೆ. ಈ ಕಾರಣದಿಂದ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ಅತಿ ಹೆಚ್ಚಿನ ಪದಕಗಳನ್ನು ಗೆಲ್ಲಲು ಸಾಧ್ಯವಾಯಿತು. ಅವರ ನೇತೃತ್ವದಲ್ಲಿ ಮುಂದಿನ ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಭಾರತ ಹೆಚ್ಚಿನ ಸಂಖ್ಯೆಯಲ್ಲಿ ಪದಕಗಳನ್ನು ಗೆಲ್ಲುವ ನಿರೀಕ್ಷೆ ಇದೆ ಎಂದರು.

Advertisement

ಉತ್ತಮ ಚಾರಿತ್ರ್ಯವನ್ನು ಬೆಳೆಸುವ ಕ್ರೀಡೆ: ಕ್ರೀಡೆ ಎನ್ನುವುದು ಪ್ರಮುಖವಾದ ಚಟುವಟಿಕೆ. ಶಾಲಾಮಟ್ಟದಲ್ಲಿಯೇ ಕ್ರೀಡೆಯಲ್ಲಿ ಆಸಕ್ತಿಹೊಂದಿರುವ ಮಕ್ಕಳು,ಭವಿಷ್ಯದಲ್ಲಿ  ರಾಷ್ಟ್ರೀಯ ಕ್ರೀಡಾಪಟುಗಳಾಗುತ್ತಾರೆ. ಕ್ರೀಡೆಯಲ್ಲಿ ನಿರಂತರವಾದ ಅಭ್ಯಾಸ, ಕಠಿಣ ಪರಿಶ್ರಮ, ಸಮರ್ಪಣೆ ಬಹಳ ಮುಖ್ಯ. ಕಠಿಣ ಪರಿಶ್ರಮ ಹಾಗೂ ಶಿಸ್ತುಬದ್ಧ ಜೀವನ ಉತ್ತಮ ಚಾರಿತ್ರ್ಯವನ್ನು ಬೆಳೆಸುತ್ತದೆ. ಕ್ರೀಡೆಗಳು ನಮ್ಮಲ್ಲಿ ಸ್ಪರ್ಧಾ ಮನೋಭಾವ, ನಮ್ಮಲ್ಲಿನ ಶಕ್ತಿ, ಗೆಲ್ಲುವ ಆತ್ಮವಿಶ್ವಾಸ ಹಾಗೂ ಸೋತಾಗ ಮನೋಸ್ಥೈರ್ಯವನ್ನು ಕಲಿಸುತ್ತದೆ. ಕ್ರೀಡೆಗಳು ನಮಗೆ ತಂಡಸ್ಪೂರ್ತಿಯನ್ನು ಹಾಗೂ ಉತ್ತಮ ಸ್ನೇಹವನ್ನೂ ನೀಡುತ್ತದೆ. ಬಹಳ ಮುಖ್ಯವಾಗಿ, ಕ್ರೀಡೆಗಳು ರಾಷ್ಟ್ರಕ್ಕಾಗಿ ಆಡುವ ಶಕ್ತಿಯನ್ನು ನೀಡುತ್ತದೆ. ಆದಕಾರಣ ಕ್ರೀಡೆ ಎಲ್ಲರ ಜೀವನದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ ಎಂದರು.

ಸಿಎಂ ಕಿವಿಮಾತು: ಬೆಂಗಳೂರು ಉತ್ತಮ ವಾತಾವರಣವನ್ನು ಹೊಂದಿದ ಕಾಸ್ಮಪಾಲಿಟನ್ ನಗರ. ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಕ್ರಿಡಾಪಟುಗಳು ಉತ್ತಮವಾಗಿ ಆಡುವ ಜೊತೆಗೆ ಬೆಂಗಳೂರಿನಲ್ಲಿನ ನಿಮ್ಮ ವಾಸ್ತವ್ಯದ ಆನಂದವನ್ನೂ ಪಡೆಯಿರಿ ಎಂದರು. ಕ್ರೀಡೆಯನ್ನು ಗೆಲ್ಲಲು ಆಡುವುದು ಹಾಗೂ ಸೋಲಬಾರದು ಎಂದು ಆಡುವುದಿದೆ. ಆದರೆ ಕ್ರೀಡಾಪಟುಗಳು ಎಂದಿಗೂ ಗೆಲ್ಲಲೇಬೇಕೆಂದು ಆಡುವ ಮನೋಭಾವದಿಂದ ಸಕಾರಾತ್ಮಕವಾಗಿ ಆಡಬೇಕು ಎಂದು ಕ್ರೀಡಾಕೂಟದಲ್ಲಿ ನೆರೆದಿದ್ದ ಎಲ್ಲ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next